ರಾಜ್ಯ ರಾಜಕಾರಣ ಬಿಟ್ಟು ನಾನು ಬರಲ್ಲ: ಸೋನಿಯಾ ಭೇಟಿಯ ಇನ್‌ಸೈಡ್‌ ಸುದ್ದಿ

Public TV
2 Min Read

ನವದೆಹಲಿ: ರಾಜ್ಯ ರಾಜಕಾರಣ ಬಿಟ್ಟು ದೆಹಲಿಗೆ ನಾನು ಬರುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೇರವಾಗಿ ತಿಳಿಸಿದ್ದಾರೆ.

ದೆಹಲಿಗೆ ಸಿದ್ದರಾಮಯ್ಯನವರನ್ನು ದಿಢೀರ್‌ ಕರೆಸಿಕೊಂಡ ಸೋನಿಯಾ ಗಾಂಧಿ, ನೀವು ದೆಹಲಿಗೆ ಬರಬೇಕು. ಕರ್ನಾಟಕದ ಪ್ರಭಾವಿ ನಾಯಕರಾಗಿರುವವ ನೀವು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಬರಬೇಕು ಎಂದು ಆಹ್ವಾನಿಸಿದ್ದಾರೆ.

 

ಈ ಆಹ್ವಾನವನ್ನು ತಿರಸ್ಕರಿಸಿದ ಸಿದ್ದರಾಮಯ್ಯ ನಾನು ಯಾವುದೇ ಕಾರಣಕ್ಕೂ ದೆಹಲಿ ರಾಜಕೀಯಕ್ಕೆ ಬರುವುದಿಲ್ಲ. ದೆಹಲಿ ಮಟ್ಟದಲ್ಲಿ ರಾಜಕಾರಣ ನಿರ್ವಹಣೆ ಬಗ್ಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್‌ ಟಿವಿಗೆ  ತಿಳಿಸಿವೆ. ಒಟ್ಟು 30 ನಿಮಿಷದ ಮಾತುಕತೆ ಸಿದ್ದರಾಮಯ್ಯ ಹಲವು ವಿಚಾರಗಳ ಬಗ್ಗೆ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಾಕ್ಷ್ಯ ವೇಳೆ ಸುಳ್ಯ ಕೋರ್ಟಲ್ಲಿ ಕೈ ಕೊಟ್ಟ ಕರೆಂಟ್! 

ಸಿದ್ದರಾಮಯ್ಯ ಹೇಳಿದ್ದೇನು?
ದೆಹಲಿ ರಾಜಕಾರಣ ನನಗೆ ಒಗ್ಗುವುದಿಲ್ಲ. ದೆಹಲಿ ಮಟ್ಟದಲ್ಲಿ ರಾಜಕಾರಣ ನಿರ್ವಹಣೆ ಬಗ್ಗೆ ನನಗೆ ಅಷ್ಟೊಂದು ಆಸಕ್ತಿ ಇಲ್ಲ. ರಾಜ್ಯದಲ್ಲೇ ಇದ್ದುಕೊಂಡು ಪಕ್ಷದ ಹಿತಕ್ಕಾಗಿ ಯಾವ ಪಾತ್ರ ಬೇಕಾದರೂ ನಿರ್ವಹಿಸುತ್ತೇನೆ.

ಪಕ್ಷ ಸಂಘಟನೆ ಅಂದರೆ ಕೇವಲ ಎಐಸಿಸಿ ಮಟ್ಟ ಅಲ್ಲ. ರಾಜ್ಯ ಮಟ್ಟದಲ್ಲೂ ಪಕ್ಷ ಸಂಘಟಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿಯಾಗಿದೆ.

ಬೇರು ಮಟ್ಟದಿಂದ ಪಕ್ಷ ಸಂಘಟಿಸಿ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಮುಖ್ಯ. ದಕ್ಷಿಣ ಭಾರತದಲ್ಲಿ ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ಪಕ್ಷ ಪ್ರಬಲವಾಗಿ ಉಳಿದಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಈಗಿರುವ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಿದೆ.

ದಕ್ಷಿಣ ಭಾರತದಲ್ಲಿ ಯಾವುದೇ ರಾಜ್ಯದಲ್ಲಿ ಪಕ್ಷ ಸಂಘಟನೆ ಭಾಗವಾಗಿ ನನ್ನನ್ನ ಬಳಸಿಕೊಳ್ಳಿ. ಎಐಸಿಸಿ ಮಟ್ಟದ ಅಧಿಕೃತ ಹುದ್ದೆ, ಸ್ಥಾನಮಾನ ಬೇಡ. ದೆಹಲಿ ರಾಜಕಾರಣ ಹಾಗೂ ಭಾಷೆ ಸಮಸ್ಯೆ ಕೂಡ ನನಗೆ ಅಡ್ಡಿ ಆಗುತ್ತದೆ. ನನಗೀಗ 74 ವರ್ಷ, ಈ ವಯಸ್ಸಲ್ಲಿ ದೇಶ ಸುತ್ತುವುದು ಸುಲಭ ಅಲ್ಲ. ಬೇರೆ ಬೇರೆ ವಾತಾವರಣಕ್ಕೆ ಹೊಂದಿಕೊಂಡು ದೇಶ ಸುತ್ತುವುದು ಕಷ್ಟ. ಯುವಕರಿಗೆ ಆದ್ಯತೆ ಕೊಡಿ, ಯುವಕರಿಗೆ ನಾನು ಸಲಹೆ ಕೊಡುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *