ತಾಲಿಬಾನ್ ಸಚಿವನ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ – ನಮ್ಮ ಪಾತ್ರ ಇಲ್ಲ ಅಂತ ಕೇಂದ್ರ ಸ್ಪಷ್ಟನೆ

Public TV
1 Min Read

– ನಾನು ದುರ್ಬಲನಾಗಿದ್ದೇನೆ ಎಂಬ ಸಂದೇಶವನ್ನ ಮೋದಿ ಮಹಿಳೆಯರಿಗೆ ರವಾನಿಸಿದ್ದೀರಿ ಎಂದು ಟೀಕಿಸಿದ್ದಾರೆ

ನವದೆಹಲಿ: ಅಫ್ಘಾನ್‌ ವಿದೇಶಾಂಗ ಸಚಿವ (Taliban Minister) ಅಮೀರ್ ಖಾನ್ ಮುತ್ತಕಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ ವಿಧಿಸಿದ ಕ್ರಮದ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಸುದ್ದಿಗೋಷ್ಠಿಯಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಕುರಿತು ಸ್ಪಷ್ಟನೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ ಶುಕ್ರವಾರ ಅಫ್ಘಾನ್‌ ವಿದೇಶಾಂಗ ಸಚಿವರು ದೆಹಲಿಯಲ್ಲಿ ನಡೆಸಿದ ಮಾಧ್ಯಮ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ.

ಮುತ್ತಕಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಯಾವುದೇ ಮಹಿಳಾ ಪತ್ರಕರ್ತರು ಉಪಸ್ಥಿತರಿರದಿದ್ದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ತಾಲಿಬಾನ್ ಸಚಿವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಕೇವಲ ಪುರುಷ ಪತ್ರಕರ್ತರು ಉಪಸ್ಥಿತರಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಈ ಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್ ಗಾಂಧಿ, ಮೋದಿಯವರೆ, ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನ ಹೊರಗಿಡಲು ಅವಕಾಶ ನೀಡುವ ಮೂಲಕ, ನಾನು ನಿಮ್ಮ ಬೆಂಬಲಕ್ಕೆ ನಿಲ್ಲಲಾರದಷ್ಟು ದುರ್ಬಲನಾಗಿದ್ದೇನೆ ಎಂಬ ಸಂದೇಶವನ್ನು ಭಾರತೀಯ ಮಹಿಳೆಯರಿಗೆ ರವಾನಿಸಿದ್ದೀರಿ ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ನಾರಿ ಶಕ್ತಿ ಘೋಷಣೆಯನ್ನೂ ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿ, ನಮ್ಮ ದೇಶದಲ್ಲಿ ಪ್ರತಿಯೊಬ್ಬ ಮಹಿಳೆಗೂ ಎಲ್ಲ ಸ್ಥಳಗಳಲ್ಲೂ ಭಾಗವಹಿಸುವ ಸಮಾನ ಹಕ್ಕಿದೆ. ಆದ್ರೆ, ಇಂತಹ ತಾರತಮ್ಯದ ಕುರಿತ ನಿಮ್ಮ ಮೌನವು, ನಿಮ್ಮ ನಾರಿ ಶಕ್ತಿ ಘೋಷಣೆಯ ಖಾಲಿತನವನ್ನ ಬಯಲುಮಾಡಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

Share This Article