ಅಮೆರಿಕಕ್ಕೆ ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ರಫ್ತು – ಟ್ರಂಪ್ ಈ ಮಾತ್ರೆಗೆ ಬೇಡಿಕೆ ಇಟ್ಟಿದ್ದು ಯಾಕೆ?

Public TV
3 Min Read

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಲು ಒಪ್ಪಿಗೆ ಸೂಚಿಸಿದೆ.

ಭಾರತ ಸರ್ಕಾರ ದೇಶದಲ್ಲಿ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಲೇರಿಯಾ ರೋಗದ ವಿರುದ್ಧವಾಗಿ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಸೇರಿದಂತೆ 16 ಮಾತ್ರೆಗಳ ರಫ್ತಿಗೆ ನಿಷೇಧ ಹೇರಿತ್ತು. ಈ ಮಧ್ಯೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿಂದ ಕೊರೊನಾ ಪೀಡಿತ ರೋಗಿಗಳು ಗುಣವಾಗುತ್ತಾರೆ ಎನ್ನುವ ವಿಚಾರ ಅಧ್ಯಯನದಿಂದ ತಿಳಿದು ಬಂದಿತ್ತು.

ಅಮೆರಿಕದಲ್ಲಿ ಕೊರೊನಾ ಸಾವು ನೋವು ಪ್ರಮಾಣ ತೀವ್ರವಾಗುತ್ತಿರುವ ಬೆನ್ನಲ್ಲೇ ಈ ವರದಿಯಿಂದ ಎಚ್ಚೆತ್ತ ಟ್ರಂಪ್ ಪ್ರಧಾನಿ ಮೋದಿಗೆ ಕರೆ ಮಾಡಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಬೇಕೆಂದು ಕೇಳಿಕೊಂಡಿದ್ದರು.

ಟ್ರಂಪ್ ಮನವಿಯ ಬೆನ್ನಲ್ಲೇ ಭಾರತ ಸರ್ಕಾರ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಮಾತ್ರೆಗಳ ಮೇಲಿನ ರಫ್ತನ್ನು ಹಿಂದಕ್ಕೆ ಪಡೆದಿದೆ.

ಈ ಸಂಬಂಧ ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿ, ಕೊರೊನಾ ಸಂಕಷ್ಟದ ಸಮಯಯದಲ್ಲಿ ಮಾನವೀಯ ನೆಲೆಯಲ್ಲಿ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರಾಸಿಟಮೊಲ್ ಮಾತ್ರೆಗಳನ್ನು ಹತ್ತಿರದ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ ಎಂದು ತಿಳಿಸಿದೆ.

ಕಳೆದ ವಾರವೇ ಟ್ರಂಪ್ ಮನವಿ ಮಾಡಿದ್ದರೂ ಭಾರತ ಈ ಬಗ್ಗೆ ಶೀಘ್ರವೇ ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ.

ಇಂದು ವಿದೇಶಾಂಗ ಇಲಾಖೆಯ ವಕ್ತಾರ ಶ್ರೀವತ್ಸವ ಪ್ರತಿಕ್ರಿಯಿಸಿ, ಆ ದೇಶದ ಪ್ರಜೆಗಳ ರಕ್ಷಣೆ ಮಾಡುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಮೊದಲ ಕೆಲಸ. ಹೀಗಾಗಿ ಔಷಧಿಗಳು ನಮ್ಮ ಬೇಡಿಕೆಗೆ ತಕ್ಕಂಥೆ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿ ನಾವು ತಾತ್ಕಾಲಿಕವಾಗಿ ಔಷಧಿಗಳ ರಫ್ತಿಗೆ ನಿಷೇಧವನ್ನು ಹೇರಲಾಗಿತ್ತು. ಈಗ ನಮ್ಮ ಬೇಡಿಕೆಯನ್ನು ನೋಡಿಕೊಂಡು ಔಷಧಗಳ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಮೇಲೆ ಪರಿಣಾಮ ಬೀರುತ್ತಾ?
ಅಮೆರಿಕದಲ್ಲಿ 3.60 ಲಕ್ಷ ಮಂದಿಗೆ ಕೊರೊನಾ ಬಂದಿದ್ದು ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕೊರೊನಾಗೆ ಸಧ್ಯಕ್ಕೆ ಯಾವುದೇ ಔಷಧಿ ಇಲ್ಲ. ಹೀಗಾಗಿ ಇಂದು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಎನ್ನವ ಪ್ರಶ್ನೆ ಏಳುವುದು ಸಹಜ.

ಮಲೇರಿಯಾ ರೋಗದ ವಿರುದ್ಧವಾಗಿ ಹೋರಾಡಲು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

ಮಲೇರಿಯಾಗೆ ನೀಡುವ ಈ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದಲೇ ಕೊರೊನಾ ಗುಣವಾಗುತ್ತದೆ ಎಂದು ಪೂರ್ಣವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಯಾವುದೇ ಔಷಧಿಯಿಂದ ಕೊರೊನಾ ವಾಸಿಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದೆ.

ಪರಿಸ್ಥಿತಿ ಹೀಗಿರುವಾಗ ತಾತ್ಕಾಲಿಕವಾಗಿ ಕೊರೊನಾಗೆ ಯಾವ ಮಾತ್ರೆ ನೀಡಿದರೆ ಕಡಿಮೆಯಾಗುತ್ತದೆ ಎನ್ನುವ ಬಗ್ಗೆ ಕಂಪನಿಯೊಂದು ಅಧ್ಯಯನ ನಡೆಸಿದೆ. ಹಲವು ದೇಶಗಳಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯಿಂದ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಾಗತಿಕವಾಗಿ ಆರೋಗ್ಯ ಕುರಿತಾಗಿ ಅಧ್ಯಯನ ಮಾಡುವ sermo ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ ಈ ಮಾತ್ರೆಗೆ ಬೇಡಿಕೆ ಹೆಚ್ಚಾಗಿದೆ.

ಅಧ್ಯಯನ ಹೇಳಿದ್ದು ಏನು?
ಕೊರೊನಾ ತೀವ್ರವಾಗಿ ಹರಡುತ್ತಿರುವ ಯುರೋಪ್, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 30 ದೇಶಗಳ ಒಟ್ಟು 6,227 ಮಂದಿ ವೈದ್ಯರನ್ನು ಸಂಪರ್ಕಿಸಿ ಅಧ್ಯಯನ ನಡೆಸಲಾಗಿದೆ. ಈ ಪೈಕಿ ಶೇ.37ರಷ್ಟು ಮಂದಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರ ಪರಿಣಾಮ ಬೀರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ತಡೆಗಟ್ಟಲು ನೀಡಲಾಗುವ ಔಷಧಿಗಳ ಪೈಕಿ ಶೇ.56 ನೋವು ನಿವಾರಕಗಳು, ಶೇ.41 ಅಜಿಥ್ರೊಮೈಸಿನ್, ಶೇ.33 ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗುತ್ತಿದೆ. ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಉತ್ತಮ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ.

ಸ್ಪೇನ್ ಶೇ.72, ಇಟಲಿ ಶೇ.49, ಬ್ರೆಜಿಲ್ ಶೇ.41, ಮೆಕ್ಸಿಕೋ ಶೇ.39, ಫ್ರಾನ್ಸ್ ಶೇ.28, ಅಮೆರಿಕ ಶೇ.23, ಜರ್ಮನಿ ಶೇ.17, ಕೆನಡಾ ಶೇ.16, ಇಂಗ್ಲೆಂಡ್ ಶೇ.13, ಜಪಾನ್ ಶೇ.7 ರಷ್ಟು ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಲಾಗಿದೆ.

ಟ್ರಂಪ್ ಹೇಳಿದ್ದು ಏನು?
ಇಂದಿನ ತುರ್ತು ಪರಿಸ್ಥಿತಿಯಲ್ಲಿ ಲ್ಯಾಬ್‍ನಲ್ಲಿ ಕೊರೊನಾಗೆ ಔಷಧಿ ಕಂಡು ಹುಡುಕುವುದು ಬಹಳ ಸವಾಲಿನ ಕೆಲಸ. ಹೀಗಿರುವಾಗ ಅಮೆರಿಕನ್ನರ ರಕ್ಷಣೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಾಗಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೊಮೈಸಿನ್ ಎರಡು ಮೆಡಿಕಲ್ ಇತಿಹಾಸದಲ್ಲಿ ಗೇಮ್ ಚೇಂಜರ್ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ನಾನು ಕೂಡ ಈ ಮಾತ್ರೆಯನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.

ಅಧ್ಯಯನದ ಪೂರ್ಣ ವರದಿ ಓದಲು ಇಲ್ಲಿ ಕ್ಲಿಕ್ ಮಾಡಬಹುದು: www.sermo.com/press-releases

Share This Article
Leave a Comment

Leave a Reply

Your email address will not be published. Required fields are marked *