ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

Public TV
2 Min Read

ಲಂಡನ್: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್‌ನ (Hyderabad) ಯುವತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಲಂಡನ್‌ನ ವೆಂಬ್ಲಿಯ (London) ನೀಲ್ಡ್ ಕ್ರೆಸೆಂಟ್‌ನಲ್ಲಿ ನಡೆದಿದೆ.

ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ಕೋತಂ ತೇಜಸ್ವಿನಿ (27) ಯುವತಿಯನ್ನು ಮಂಗಳವಾರ ಬ್ರೆಜಿಲ್‌ನ ವ್ಯಕ್ತಿಯೊಬ್ಬ ವಸತಿಗೃಹದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜೊತೆಗೆ 28 ವರ್ಷ ವಯಸ್ಸಿನ ಇನ್ನೊಬ್ಬ ಯುವತಿಗೂ ಚಾಕುವಿನಿಂದ ಇರಿದಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ 24 ಮತ್ತು 23 ವರ್ಷದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು (Metropolitan Police) ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಅಧಿಕಾರಿ ವಿ. ಸತ್ಯನಾರಾಯಣ, ತೇಜಸ್ವಿನಿ ಅವರ ಕುಟುಂಬ ಹೈದರಾಬಾದ್‌ನ ಚಂಪಾಪೇಟ್‌ನಲ್ಲಿ ವಾಸವಿದೆ. ತಂದೆ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದು, ಸ್ವಂತ ಕೃಷಿ ಭೂಮಿಯನ್ನೂ ಹೊಂದಿದ್ದಾರೆ. ಆಕೆ ಇತ್ತೀಚೆಗೆ ಲಂಡನ್ನಿನಲ್ಲಿ ತನ್ನ ಎಂಎಸ್ಸಿ ಪದವಿ ಪೂರ್ಣಗೊಳಿಸಿದ್ದಳು. ಒಂದು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದಳು. ಒಂದು ತಿಂಗಳ ಬಳಿಕ ಲಂಡನ್‌ಗೆ ಮರಳಿದ್ದಳು. ಈ ವರ್ಷದ ಮೇ ತಿಂಗಳಲ್ಲಿ ವಾಪಸ್ ಬರಬೇಕಿತ್ತು ಎಂದು ಪೋಷಕರು ತಿಳಿಸಿರುವುದಾಗಿ ಹೇಳಿದ್ದಾರೆ.

ಬಂಧಿತ ಆರೋಪಿಯು ಮಾದಕ ವ್ಯಸನಿಯಾಗಿದ್ದು, ತೇಜಸ್ವಿನಿಯಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ. ಆಕೆ ನಿರಾಕರಿಸಿದಾಗ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಲಂಡನ್‌ನಿಂದ ಮರಳಿದ ಬಳಿಕ ಈ ವರ್ಷ ವಿವಾಹ ಆಗುತ್ತೇನೆ ಎಂದು ತೇಜಸ್ವಿನಿ ಪೋಷಕರಿಗೆ ಹೇಳಿದ್ದಳು. ತನ್ನ ಕೆಲಸಕ್ಕೂ ರಾಜೀನಾಮೆ ನೀಡಿದ್ದ ಆಕೆ, ಇನ್ನೊಂದು ತಿಂಗಳು ಕೆಲಸ ಮಾಡಿ ಬರುವುದಾಗಿ ಪೋಷಕರಿಗೆ ಹೇಳಿದ್ದಳು. ಅಷ್ಟರಲ್ಲೇ ದುರ್ಘಟನೆ ನಡೆದಿದೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.

ಯುವತಿಯ ಪಾರ್ಥಿವ ಶರೀರವನ್ನು ಲಂಡನ್‌ನಿಂದ ಹೈದರಾಬಾದ್‌ಗೆ ತರಲು ಅಗತ್ಯ ವ್ಯವಸ್ಥೆ ಮಾಡುವಂತೆ ಮೃತಳ ಚಿಕ್ಕಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದಾಳಿ ಹಿಂದಿನ ಶಂಕಿತ ವ್ಯಕ್ತಿ ಪತ್ತೆ ಹಚ್ಚಲು ಸಾರ್ವಜನಿಕರ ಸಹಾಯ ಕೋರಲು ಮೆಟ್ರೋಪಾಲಿಟನ್ ಪೊಲೀಸರು ಬ್ರೆಜಿಲ್ ಪ್ರಜೆ ಕೆವೆನ್ ಚಿತ್ರವನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

Share This Article