Hyderabad | ಮೊಮೊಸ್ ತಿಂದು ಓರ್ವ ಮಹಿಳೆ ಸಾವು ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್

Public TV
1 Min Read

ಹೈದರಾಬಾದ್: ಬೀದಿಬದಿಯ ಮೊಮೊಸ್ (Momos) ತಿಂದು ಓರ್ವ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್ (Food Poison) ಆಗಿರುವ ಘಟನೆ ಹೈದರಾಬಾದ್‌ನ (Hyderabad) ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 33 ವರ್ಷದ ರೇಷ್ಮಾ ಬೇಗಂ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 20 ಜನರು ಫುಡ್ ಪಾಯ್ಸನ್‌ನಿಂದ ಬಳಲುತ್ತಿದ್ದಾರೆ.ಇದನ್ನೂ ಓದಿ: ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಭೇಟಿಗೆ ಬಂದ ಪತ್ನಿ ವಿಜಯಲಕ್ಷ್ಮಿ

ಶುಕ್ರವಾರ ಖೈರತಾಬಾದ್‌ನ ಬೀದಿಬದಿ ವ್ಯಾಪಾರಿಯಿಂದ ಮೂವರು ಮೊಮೊಸ್ ತಿಂದಿದ್ದಾರೆ. ತಿಂದು ಮನೆಗೆ ಮರಳಿದ ಸ್ವಲ್ಪ ಸಮಯದ ಬಳಿಕ ಹೊಟ್ಟೆ ನೋವು, ವಾಂತಿಯಿಂದ ಬಳಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಅವರ ತಾಯಿ ಸಾವನ್ನಪ್ಪಿದ್ದು, ಪುತ್ರಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ್ ಬಾಬು ಮಾತನಾಡಿ, ಮಂಗಳವಾರ (ಅ.29) ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡುವ ಒಬ್ಬ ಬೀದಿಬದಿ ವ್ಯಾಪಾರಿಯಿಂದ ಮೊಮೊಸ್ ತಿಂದಿದ್ದ 15 ರಿಂದ ದೂರು ಬಂದಿದ್ದು, ದೂರು ದಾಖಲಿಸಿಕೊಂಡು ಸದ್ಯ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ತನಿಖೆಯ ವೇಳೆ ಯಾವುದೇ ಆಹಾರ ಸುರಕ್ಷತಾ ಪರವಾನಗಿ ಇಲ್ಲದೇ ಮಾರಾಟಗಾರ ವ್ಯಾಪಾರ ನಡೆಸುತ್ತಿದ್ದು, ಯಾವುದೇ ರೀತಿಯ ಸ್ವಚ್ಛತೆಯಿಲ್ಲದೇ ಆಹಾರ ತಯಾರಿಸುತ್ತಿರುವುದು ಪತ್ತೆಯಾಗಿದೆ. ಜೊತೆಗೆ ಮೊಮೊಸ್ ತಯಾರಿಸಲು ಬಳಸುವ ಹಿಟ್ಟನ್ನು ಯಾವುದೇ ಪ್ಯಾಕಿಂಗ್ ಇಲ್ಲದೆ ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು, ಅದರಲ್ಲೂ ರೆಫ್ರಿಜರೇಟರ್ ಬಾಗಿಲು ಮುರಿದಿರುವುದು ಕೂಡ ಕಂಡುಬಂದಿದೆ. ಹೆಚ್ಚಿನ ತನಿಖೆಗಾಗಿ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಘಟನೆಗೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಆಹಾರ ಸುರಕ್ಷತಾ ವಿಭಾಗ ಮತ್ತು ಪೊಲೀಸರು ಬೀದಿಬದಿ ವ್ಯಾಪಾರಿಯನ್ನು ಪತ್ತೆ ಹಚ್ಚಿದ್ದಾರೆ ಹಾಗೂ ಸ್ಟಾಲ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.ಇದನ್ನೂ ಓದಿ: Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

Share This Article