ತರಬೇತಿ ವಿಮಾನ ಪತನ- ಇಬ್ಬರು ಪೈಲಟ್ ಸಾವು

Public TV
1 Min Read

ಹೈದರಾಬಾದ್: ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನಪುರ ಗ್ರಾಮದ ಹೊಲದಲ್ಲಿ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ವಿದ್ಯಾರ್ಥಿ ಪೈಲಟ್‍ಗಳು ಮೃತಪಟ್ಟಿದ್ದಾರೆ.

ಹೈದರಾಬಾದ್‍ನ ಏವಿಯೇಷನ್ ಅಕಾಡೆಮಿಯ ವಿದ್ಯಾರ್ಥಿಗಳಾದ ಪ್ರಕಾಶ್ ವಿಶಾಲ್ ಹಾಗೂ ಅಮಾನ್‍ಪ್ರೀತ್ ಕೌರ್ ಮೃತರು ಎಂದು ಗುರುತಿಸಲಾಗಿದೆ. ಸೆಸ್ನಾ ವಿಮಾನವು ಹೈದರಾಬಾದ್‍ನ ಬೇಗಂಪೆಟ್ ವಿಮಾನ ನಿಲ್ದಾಣದಿಂದ 100 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಅದೃಷ್ಟವಶಾತ್ ಕೃಷಿ ಭೂಮಿಯಲ್ಲಿಯೇ ವಿಮಾನ ಪತನಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ತರಬೇತಿ ನಿರತ ವಿಮಾನವು ಬೇಗಂಪೇಟ್ ಸ್ಟೇಷನ್‍ನಿಂದ 11.55ರ ವೇಳೆಗೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಸ್ಥಳೀಯರು ವಿಮಾನ ಪತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಹೈದರಾಬಾದ್‍ನ ರಾಜೀವ್ ಗಾಂಧಿ ಏವಿಯೇಷನ್ ಅಕಾಡೆಮಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿದ್ಯಾರ್ಥಿ ಪೈಲಟ್‍ಗಳ ಮೃತದೇಹನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿದ್ಯಾರ್ಥಿ ಪೈಲಟ್‍ಗಳಿಗೆ ತರಬೇತಿ ನೀಡಲು ಸೆಸ್ನಾ ವಿಮಾನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. 2018ರ ನವೆಂಬರ್ ನಲ್ಲಿ, ವಿದ್ಯಾರ್ಥಿ ಪೈಲಟ್ ಏವಿಯೇಷನ್ ಅಕಾಡೆಮಿಯ ಸೆಸ್ನಾ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಈ ವೇಳೆ ಕಾರ್ಯವಿಧಾನದಲ್ಲಿನ ತೊಂದರೆಗಳನ್ನು ಗಮನಿಸಿ ತಕ್ಷಣವೇ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *