ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

Public TV
2 Min Read

ಹೈದರಾಬಾದ್: ಸಖತ್ತಾಗಿ ಸೆಲ್ಫಿ ತೆಗೆಯಬೇಕು ಅಂತ ಹುಚ್ಚು ಸಾಹಸಗಳನ್ನ ಮಾಡಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿರೋ ಬಗ್ಗೆ ವರದಿಯಾಗ್ತಾನೆ ಇದ್ದರೂ ಅಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಸೆಲ್ಫಿ ವಿಡಿಯೋ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

 

ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗಲೇ ರೈಲು ಡಿಕ್ಕಿಯಾಗಿ ಶಿವ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್‍ನ ಭರತ್‍ನಗರ ರೈಲ್ವೆ ನಿಲ್ದಾಣದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಬುಧವಾರದಂದು ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

ಯುವಕ ಶಿವಾ ರೈಲ್ವೆ ಹಳಿಯ ಬಳಿ ತನ್ನ ಸ್ಮಾರ್ಟ್‍ಫೋನ್ ಹಿಡಿದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಅದೇ ಹಳಿಯಲ್ಲಿ ಎಮ್‍ಎಮ್‍ಟಿಎಸ್(ಮಲ್ಟಿ ಮೋಡಲ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್) ರೈಲು ಬಂದಿದೆ. ರೈಲು ಬರುತ್ತಿರೋದನ್ನ ನೋಡಿ ಹಿಂದಿನಿಂದ ಒಬ್ಬರು ಏಯ್ ಏಯ್ ಎಂದು ಯುವಕನನ್ನು ಕೂಗಿದ್ದಾರೆ. ಆದ್ರೆ ಆತ ಅದಕ್ಕೆ ಸೊಪ್ಪು ಹಾಕದೆ, ಒಂದು ನಿಮಿಷ ಎಂದು ಹೇಳಿ, ರೈಲು ಸಮೀಪ ಬರುತ್ತಿದ್ದಂತೆ ಸ್ಮೈಲ್ ಕೊಟ್ಟು ನಿಂತಿದ್ದಾನೆ.

ಜೊತೆಗೆ ತನ್ನ ಕೈ ರೈಲಿನ ಕಡೆ ತೋರಿಸುತ್ತಾ ವಿಡಿಯೋ ಮಾಡುವುದನ್ನ ಮುಂದುವರೆಸಿದ್ದಾನೆ. ರೈಲು ವೇಗವಾಗಿ ಬಂದಿದ್ದು, ಯುವಕನ ಸಮೀಪ ಬಂದಾಗ ಆತನ ಕೈಗೆ ಎಂಜಿನ್ ತಾಗಿ ಆತ ಕೆಳಗೆ ಬಿದ್ದಿದ್ದಾನೆ. ಇವೆಲ್ಲವೂ ಯುವಕನ ಸೆಲ್ಫಿ ವಿಡಿಯೋದಲ್ಲೇ ಸೆರೆಯಾಗಿದೆ. ರೈಲು ಯುವಕನಿಗೆ ಡಿಕ್ಕಿಯಾಗಿ ಆತ ಕೆಳಗೆ ಬೀಳೋದನ್ನ ನೋಡಿದ್ರೆ ಎದೆ ಜಲ್ಲೆನಿಸುವಂತಿದೆ.

ಈ ಬಗ್ಗೆ ವಿಷಯ ತಿಳಿದ ಕೂಡಲೇ ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಸ್ಥಿತಿ ಸುಧಾರಿಸಿದೆ ಎಂದು ಪೊಲಿಸರು ಹೇಳಿದ್ದಾರೆ. ರೈಲ್ವೆ ಪೊಲೀಸರು ಯುವಕನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆದರೂ ಯುವ ಜನಾಂಗ ಈ ರೀತಿಯ ಹುಚ್ಚು ಸಾಹಸ ಮಾಡೋ ಮುನ್ನ ಎಚ್ಚರಿಕೆ ವಹಿಸಬೇಕು ಅನ್ನೋದಕ್ಕೆ ಇದೊಂದು ಸೂಕ್ತ ಉದಾಹರಣೆಯಾಗಿದೆ. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

https://www.youtube.com/watch?v=9cEbK3v-0EE

Share This Article
Leave a Comment

Leave a Reply

Your email address will not be published. Required fields are marked *