ರಸ್ತೆಯಲ್ಲಿ ಹೃದಯಾಘಾತವಾದ ಬೈಕ್ ಸವಾರನ ಜೀವ ಉಳಿಸಿದ ಹೋಂಗಾರ್ಡ್ಸ್ – ವಿಡಿಯೋ ವೈರಲ್

Public TV
2 Min Read

ಹೈದರಾಬಾದ್: ಇಬ್ಬರು ಹೋಂಗಾರ್ಡ್ಸ್ ತಮ್ಮ ಸಮಯ ಪ್ರಜ್ಞೆಯಿಂದ, ರಸ್ತೆಯಲ್ಲೇ ಹೃದಯಾಘಾತವಾದ ವ್ಯಕ್ತಿಯೊಬ್ಬರ ಜೀವ ಉಳಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬುಧವಾರ ಸುಮಾರು 12.30ರ ವೇಳೆಗೆ ವ್ಯಕ್ತಿಯೊಬ್ಬರು ಧುಲ್‍ಪೇಟೆಯಿಂದ ಟಾಡ್ಬಂಡ್ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಪುರಾಣಪುಲ್‍ನಲ್ಲಿ ಸ್ಕೂಟರಿಂದ ಕೆಳಗೆ ಕುಸಿದುಬಿದ್ದಿದ್ದಾರೆ. ತಕ್ಷಣ ಇಬ್ಬರು ಹೋಂಗಾರ್ಡ್ಸ್ ಆದ ಚಂದನ್ ಸಿಂಗ್ ಮತ್ತು ಇನಾಯತ್-ಉಲ್ಲಾ ಖಾನ್ ಖದ್ರಿ ಸ್ಥಳಕ್ಕೆ ದೌಡಾಯಿಸಿ ಆ ವ್ಯಕ್ತಿಗೆ ಕೂಡಲೇ ಸಿಪಿಆರ್ ಮಾಡಿ ಮತ್ತೆ ಉಸಿರಾಡುವಂತೆ ಮಾಡಿದ್ದಾರೆ.

ಇಬ್ಬರು ಹೋಂಗಾರ್ಡ್ಸ್ ವ್ಯಕ್ತಿಯನ್ನು ಕಾಪಾಡಿದ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ನಾಗರಿಕರು ಹೋಂಗಾರ್ಡ್ಸ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್ ಕೂಡ ಹೋಂಗಾರ್ಡ್ಸ್ ಗಳನ್ನು ಶ್ಲಾಘಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಹೋಂಗಾರ್ಡ್ಸ್ ಚಂದನ್ ಸಿಂಗ್, “ನನ್ನ ಜೀವನದಲ್ಲಿ ನಾನು ಇಷ್ಟು ವೇಗವಾಗಿ ಯಾವತ್ತೂ ಓಡಿರಲಿಲ್ಲ. ಮುಂದೆ ಬರ್ತಿದ್ದ ವಾಹನಗಳ ಬಗ್ಗೆ ನಾನು ಚಿಂತಿಸಲಿಲ್ಲ. ಆ ವ್ಯಕ್ತಿಯನ್ನು ರಕ್ಷಿಸಲು ನಾನು ತಕ್ಷಣವೇ ಅವರ ಕಡೆಗೆ ಓಡಿಹೋದೆ. ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಅವರು ಸ್ವಲ್ಪವೂ ಚಲಿಸದೆ ಪ್ರಜ್ಞೆಹೀನಾ ಸ್ಥಿತಿಗೆ ಹೋಗಿದ್ದರು. ನಾನು ತಕ್ಷಣ ನಾಡಿ ಹಿಡಿದು ಪರಿಶೀಲಿಸಿದೆ. ಆಗ ಅವರ ಹೃದಯಬಡಿತ ನಿಂತು ಹೋಗಿತ್ತು. ನನ್ನ ಸಹಾಯಕ್ಕೆ ಅಲ್ಲೇ ಪಕ್ಕದಲ್ಲಿದ್ದ ಬೈಕ್ ಸವಾರ ಬಂದರು. ನಾನು ಕೂಡಲೇ ಅವರಿಗೆ ಸಿಪಿಆರ್ ಮಾಡಿದೆ. ಅದು ನಮ್ಮ ಟ್ರಾಫಿಕ್ ತರಬೇತಿ ಸಂಸ್ಥೆಯಲ್ಲಿ ತರಬೇತಿಯ ಭಾಗವಾಗಿತ್ತು ಎಂದು ಹೇಳಿದ್ದಾರೆ.

ನಾನು ಆ ವ್ಯಕ್ತಿಗೆ ಸುಮಾರು ಒಂದು ನಿಮಿಷದವರೆಗೆ ಸಿಪಿಆರ್ ನೀಡಿದೆ. ನಂತರ ಅವರು ಉಸಿರಾಡಿದರು. ಅವರ ಜೀವ ಉಳಿಯಿತಲ್ಲ ಎಂದು ನನಗೆ ತುಂಬಾ ಸಂತೋಷವಾಯಿತು. ನನ್ನ ಸಹೋದ್ಯೋಗಿ ಇನಾಯತ್ ಉಲ್ಲಾ ಅವರು ತ್ವರಿತವಾಗಿ ಟ್ರಾಫಿಕ್ ನಿಯಂತ್ರಿಸಿ ಆಂಬುಲೆನ್ಸ್ ವ್ಯವಸ್ಥೆ ಮಾಡಿದರು ಎಂದು ಚಂದನ್ ಹೇಳಿದರು.

ಇದರಲ್ಲಿ ನಮ್ಮದೇನೂ ಇಲ್ಲ. ದೇವರ ದಯೆಯಿಂದ ವ್ಯಕ್ತಿ ಬದುಕುಳಿದಿದ್ದಾರೆ. ನಮ್ಮಿಂದ ಆಗಲ್ಲ ಎಂದು ಕೈಚೆಲ್ಲಿಬಿಡುತ್ತಿದ್ದೆವು. ಆದರೆ ಪ್ರಕ್ರಿಯೆ ಮುಂದುವರೆಸಿದರೆ ಅವರು ಬದುಕುತ್ತಾರೆ ಎಂಬ ಸಣ್ಣ ವಿಶ್ವಾಸವಿತ್ತು ಎಂದು ಹೇಳಿದ್ರು.

ಚಂದನ್ ಸಿಂಗ್ ಮತ್ತು ಇನಾಯತ್ ಉಲ್ಲಾ ಖಾನ್ ಇಬ್ಬರೂ ಇಲ್ಲಿನ ಬಹದ್ದೂರ್ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೋಂಗಾರ್ಡ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *