ಶಾಲಾ ಸಮವಸ್ತ್ರ ಧರಿಸಿ ಬರದಿದ್ದಕ್ಕೆ ಬಾಲಕಿಗೆ ಏನು ಶಿಕ್ಷೆ ಕೊಟ್ರು ಗೊತ್ತಾ?

Public TV
2 Min Read

ಹೈದರಾಬಾದ್: ಶಾಲಾ ಸಮವಸ್ತ್ರ ಧರಿಸಿ ಬರಲಿಲ್ಲವೆಂಬ ಕಾರಣಕ್ಕೆ ಶಿಕ್ಷೆಯಾಗಿ ಹುಡುಗರ ಟಾಯ್ಲೆಟ್‍ಗೆ ನನ್ನನ್ನು ಕಳಿಸಿದ್ರು ಎಂದು ಹೈದರಾಬಾದ್‍ನ ಖಾಸಗಿ ಶಲೆಯ 11 ವರ್ಷದ ಬಾಲಕಿಯೊಬ್ಬಳು ಹೇಳಿದ್ದಾಳೆ.

ಬಾಲಕಿಯ ತಂದೆ ವಿಡಿಯೋ ಮಾಡಿದ್ದು, ಇದರಲ್ಲಿ 5ನೇ ತರಗತಿಯ ಬಾಲಕಿ ತನಗೆ ನೀಡಿದ ಶಿಕ್ಷೆಯ ಬಗ್ಗೆ ವಿವರಿಸಿದ್ದಾಳೆ. ನಾನು ಕ್ಲಾಸ್‍ಗೆ ಹೋಗುವ ಸಂದರ್ಭದಲ್ಲಿ ಮೊದಲನೇ ಮಹಡಿಯಲ್ಲಿ ಪಿಟಿ ಟೀಚರ್ ನನ್ನನ್ನು ಹಿಡಿದರು. ನಾನು ನನ್ನ ಡೈರಿ ನೋಡುವಂತೆ ಕೇಳಿಕೊಂಡೆ. ಆದ್ರೆ ಯಾರೂ ಕೆಳಿಸಿಕೊಳ್ಳಲೇ ಇಲ್ಲ. ನನ್ನ ಮೇಲೆ ಕಿರುಚಾಡಲು ಶುರು ಮಾಡಿದ್ರು. ನನಗೆ ಭಯವಾಗಿ ಏನೂ ಹೇಳಲಿಲ್ಲ. ಇಂಗ್ಲಿಷ್ ಶಿಕ್ಷಕರು ಹಾಗೂ 10ನೇ ತರಗತಿಯ ತೆಲುಗು ಶಿಕ್ಷಕರು ಸೇರಿದಂತೆ 2-3 ಶಿಕ್ಷಕರು ಅಲ್ಲಿದ್ದರು. ಸಮವಸ್ತ್ರದ ಬದಲು ಕಲರ್ ಡ್ರೆಸ್ ಧರಿಸಿ ಬಂದಿದ್ದಲ್ಲದೆ ನಮ್ಮ ಪ್ರಶ್ನೆಗಳಿಗೆ ಇವಳು ಉತ್ತರವೇ ಕೊಡುತ್ತಿಲ್ಲವಲ್ಲ ಎಂದು ಹೇಳುತ್ತಿದ್ದರು. ನಾವು ಈಕೆಯನ್ನ ಹುಡುಗರ ಟಾಯ್ಲೆಟ್‍ಗೆ ಕಳಿಸೋಣ ಎಂದರು. ಎಲ್ಲಾ ಮಕ್ಕಳು ನೋಡುತ್ತಿದ್ದರು ಎಂದು ವಿಡಿಯೋದಲ್ಲಿ ಬಾಲಕಿ ಹೇಳಿಕೊಂಡಿದ್ದಾಳೆ.

ಬಾಲಕಿಯನ್ನು ಹುಡುಗರ ಟಾಯ್ಲೆಟ್‍ನಲ್ಲಿ 5 ನಿಮಿಷ ಇರುವಂತೆ ಮಾಡಿದ್ದಾಗಿ ಹೇಳಿದ್ದಾಳೆ. ನಂತರ ಆಕೆಯನ್ನು ಕ್ಲಾಸ್‍ಗೆ ಕಳಿಸಲಾಗಿದೆ. ಸಮವಸ್ತ್ರವನ್ನು ಒಗೆದ ನಂತರ ಇನ್ನೂ ಒದ್ದೆ ಇತ್ತು. ಹೀಗಾಗಿ ಕಲರ್ ಡ್ರೆಸ್ ಧರಿಸಿ ಬಂದಿರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತನ್ನ ತಾಯಿ ಡೈರಿಯಲ್ಲಿ ಬರೆದಿರುವುದಾಗಿ ಬಾಲಕಿ ಸಮಾಜವಿಜ್ಞಾನ ಶಿಕ್ಷಕಿಗೆ ಹೇಳಿದ್ದಾಳೆ.

ಘಟನೆಯಿಂದ ನೊಂದ ಬಾಲಕಿ ತಾನು ಆ ಶಾಲೆಗೆ ಹೋಗೋದಿಲ್ಲ ಎಂದು ಹೇಳಿದ್ದಾಳೆ. ಆದ್ರೆ ನಾನು ಶಿಕ್ಷಕರೊಂದಿಗೆ ಮಾತಾಡಿದ್ದೇನೆ. ಇನ್ನು ಯಾರೂ ತೊಂದರೆ ಕೊಡೋದಿಲ್ಲ ಎಂದು ಆಕೆಯ ತಂದೆ ಹೇಳಿತ್ತಿರೋದನ್ನ ವಿಡಿಯೋದಲ್ಲಿ ಕೇಳಿಸಿಕೊಳ್ಳಬಹುದು.

ಬಾಲಕಿಯ ತಂದೆ ಮಾನವ ಹಕ್ಕು ಹೋರಾಟಗಾರರಾದ ಅಚ್ಯುತ್ ರಾವ್ ಎಂಬವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಇದು ಪೋಕ್ಸೋ ಕಾಯ್ದೆಯ ಉಲ್ಲಂಘನೆಯೂ ಹೌದು ಎಂದು ಅಚ್ಯುತ್ ರಾವ್ ಹೇಳಿದ್ದಾರೆ. ಶಾಲೆ ಹಾಗೂ ಶಿಕ್ಷಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿದೆ. ಈ ರೀತಿ ಅಮಾನವೀಯವಾಗಿ ಅವರು ಹೇಗೆ ನಡೆದುಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾನವ ಹಕ್ಕುಗಳ ಸಮಿತಿಗೂ ದೂರು ನೀಡಲು ಯೋಚಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *