ಉಡುಪಿ ದನದ ವ್ಯಾಪಾರಿ ಹುಸೇನಬ್ಬ ಕೇಸ್ ಸಿಐಡಿಗೆ ಹಸ್ತಾಂತರ

Public TV
1 Min Read

ಉಡುಪಿ: ದನದ ವ್ಯಾಪಾರಿ ಹುಸೇನಬ್ಬ ಸಂಶಯಾಸ್ಪದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ಒಪ್ಪಿಸಿದೆ.

ಸಾವಿಗೆ ಹೊಣೆಯಾಗಿಸಿ ಎಸ್ಸೈ ಸಹಿತ ಮೂವರು ಪೊಲೀಸರ ಬಂಧನವಾಗಿತ್ತು. ಇದೀಗ ಪ್ರಕರಣ ಸಿಐಡಿ ಪೊಲೀಸರಿಗೆ ಹಸ್ತಾಂತರವಾಗಿದೆ. ಇನ್ನೆರಡು ದಿನಗಳಲ್ಲಿ ಸಿಐಡಿ ಅಧಿಕಾರಿಗಳು ಉಡುಪಿ ಮತ್ತು ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಲಿದ್ದಾರೆ.

ಏನಿದು ಪ್ರಕರಣ?
ಮೇ 30 ರಂದು ಉಡುಪಿಯ ಪೆರ್ಡೂರಿನಲ್ಲಿ ಹುಸೇನಬ್ಬ ಅವರ ಅನುಮಾನಾಸ್ಪದ ಸಾವು ಸಂಭವಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆ ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ ಕಳೆದ 35 ವರ್ಷಗಳಿಂದ ದನದ ವ್ಯಾಪಾರ ಮಾಡಿಕೊಂಡಿದ್ದರು. ಮೇ 30ರಂದು ತಡರಾತ್ರಿ ಬೊಲೆರೋ ವಾಹನದಲ್ಲಿ ಹಸುಗಳನ್ನು ಹುಸೇನಬ್ಬ ತಂಡ ಸಾಗಾಟ ನಡೆಸುತ್ತಿತ್ತು. ಈ ಸಂದರ್ಭ ಭಜರಂಗದಳ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಪೆರ್ಡೂರು ಕಾಫಿತೋಟ ಸಮೀಪ ತಂಡಗಳು ಮುಖಾಮುಖಿಯಾಗಿದೆ. ಈ ಸಂದರ್ಭ ಹುಸೇನಬ್ಬ ಸಿಕ್ಕಿಬಿದ್ದಿದ್ದು, ಮೂರ್ನಾಲ್ಕು ಜನ ಕಾಲ್ಕಿತ್ತಿದ್ದರು. ಈ ಸಂದರ್ಭ ಜಟಾಪಟಿಯಾಗಿತ್ತು ಎಂಬ ಮಾಹಿತಿಯಿದೆ.

ಹುಸೇನಬ್ಬ ಅವರನ್ನು ಬಂಧಿಸಿ ಠಾಣೆಗೆ ಕರೆತರಲಾಗಿತ್ತು. ಹಿರಿಯಡ್ಕ ಪೊಲೀಸ್ ಠಾಣೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಪೊಲೀಸರು ಮೃತ ಶರೀರವನ್ನು ಆಸ್ಪತ್ರೆ ಕೊಂಡೊಯ್ಯುವ ಬದಲು ಘಟನಾ ಸ್ಥಳಕ್ಕೆ ಸಾಗಿಸಿದ್ದಾರೆ. ಕಾಫಿತೋಟವೆಂಬಲ್ಲಿ ಶವವಿಟ್ಟು ಬಂದಿದ್ದಾರೆ. ಈ ಘಟನೆ ಸಂಬಂಧಪಟ್ಟಂತೆ ಹಿರಿಯಡ್ಕ ಎಸ್ ಐ ಸಹಿತ ಹಿಂದೂಪರ ಸಂಘಟನೆಯ 11 ಮಂದಿ ಬಂಧನವಾಗಿದೆ.

ಹುಸೇನಬ್ಬ ಹೃದಯಕ್ಕೆ ಮೂರು ಬಾರಿ ಆಪರೇಷನ್ ಆಗಿದೆ. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬೂದು ಹಿಂದೂಪರ ಸಂಘಟನೆಗಳು ವಾದಿಸಿತ್ತು. ದನ ಸಾಗಾಟದ ವೇಳೆ ಹುಸೇನಬ್ಬಗೆ ಹಲ್ಲೆಯಾಗಿತ್ತು, ಹಿಂದೂ ಸಂಘಟನೆಗಳ ಹಲ್ಲೆಯಿಂದ ಸಾವು ಸಂಭವಿಸಿದೆ ಎಂದು ಹುಸೇನಬ್ಬ ಕುಟುಂಬಸ್ಥರು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *