ಪತ್ನಿ ಕೊಲೆ ಮಾಡಿ ನವರಂಗಿ ಆಟವಾಡಿದ್ದ ಪತಿ ಅರೆಸ್ಟ್

Public TV
1 Min Read

ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿ ಪ್ರಕರಣ ಮುಚ್ಚಿ ಹಾಕಲು ಸಾಕ್ಷಿ ಸಿಗದಂತೆ ಚಾಲಾಕಿತನ ತೋರಿದ್ದ ಪತಿಯನ್ನು ವೈಯಾಲಿ ಕಾವಲ್ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಪತಿ ನರೇಂದ್ರ ಬಾಬು ಮತ್ತು ಆತನ ಸಹಚರರಾದ ಜಗನ್ನಾಥ್, ಪ್ರಶಾಂತರನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಡಿಸೆಂಬರ್ 21 ರಂದು ಪತ್ನಿ ವಿನುತಾ ಒಬ್ಬಳೆ ಮನೆಯಲ್ಲಿರುವಾಗ ಮನೆಯ ಕಿಟಕಿ ಮುರಿದು ಒಳಗಡೆ ನುಗ್ಗಿ ರಾಡ್‍ನಿಂದ ತಲೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.

ಸಾಕ್ಷಿ ಸಿಗಬಾರದು ಎಂಬ ಉದ್ದೇಶದಿಂದ ಕೊಲೆ ಮಾಡುವಾಗ ಆರೋಪಿಗಳು ಕೈಗೆ ಗ್ಲೋವ್ಸ್ ಹಾಕಿಕೊಂಡಿದ್ದಾರೆ. ಅಲ್ಲದೆ ರಕ್ತಸ್ರಾವವಾಗಿದ್ದನ್ನು ಪೂರ್ತಿ ಸ್ವಚ್ಛ ಮಾಡಿ ಸಹಜ ಸಾವು ಎನ್ನುವ ರೀತಿ ಆರೋಪಿಗಳು ಬಿಂಬಿಸಿದ್ದಾರೆ.

ಅಲ್ಲದೆ ತಲೆ ಮರೆಸಿಕೊಂಡರೆ ಪೊಲೀಸರಿಗೆ ತಮ್ಮ ಮೇಲೆ ಅನುಮಾನ ಬರುತ್ತದೆ ಎಂದು ಆರೋಪಿಗಳು ಮನೆಯಲ್ಲೇ ಇದ್ದರು. ವಿನುತಾಳ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ಕೈಗೆತ್ತಿಕೊಂಡ ವೈಯಾಲಿ ಕಾವಲ್ ಪೊಲೀಸರಿಗೆ ಅವರ ಮನೆಯಲ್ಲಿ ಬಾಡಿಗೆ ಇದ್ದ ಪ್ರಶಾಂತ್ ಮೇಲೆ ಅನುಮಾನ ಬಂದಿದೆ. ನಂತರ ಪೊಲೀಸರು ಆರೋಪಿ ಪ್ರಶಾಂತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.

ಮಾಹಿತಿ ಪಡೆಯುತ್ತಿದ್ದಂತೆ ಪತಿ ನರೇಂದ್ರ ಬಾಬು ಹಾಗೂ ಜಗನ್ನಾಥ್‍ರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಕೊಲೆಯಾದ ವಿನುತಾ ಹಾಗೂ ಆರೋಪಿ ಪತಿ ನರೇಂದ್ರರ ಬಾಬು ಈ ಹಿಂದೆ ಒಬ್ಬರ ಮೇಲೊಬ್ಬರು 15 ಕ್ಕೂ ಹೆಚ್ಚು ಬಾರಿ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆ ಒಮ್ಮೆ ವಿನೂತ ಠಾಣೆ ಮುಂದೆ ವಿಷ ಕುಡಿಯಲು ಯತ್ನಿಸಿ ಈ ಕುರಿತು ಪ್ರಕರಣ ಕೂಡ ದಾಖಲಾಗಿ ಎರಡು ಕುಟುಂಬದವರಿಂದ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *