ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ತಂದೆಯ ಎದುರೇ ಪಾಪಿ ಪತಿಯೊಬ್ಬ ತನ್ನ ಪತ್ನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ನಗರದ ಮಿಳ್ಳಘಟ್ಟ ಬಡಾವಣೆಯಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಅಂಜಲಿ ತೀವ್ರ ರಕ್ತಸ್ರಾವವಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ. ಇನ್ನು ಕೊಲೆಗೆ ಯತ್ನಿಸಿದ ಆರೋಪಿ ಪತಿ ಆರ್ಮುಗಂ ಘಟನೆ ನಂತರ ತಾನೇ ದೊಡ್ಡಪೇಟೆ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಪತಿ ಆರ್ಮುಗಂ ತಮಿಳುನಾಡು ಮೂಲದವನಾಗಿದ್ದು, ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿಯೇ ನೆಲೆಸಿದ್ದನು. ಜೀವನ ನಿರ್ವಹಣೆಗಾಗಿ ಹೋಟೆಲ್ ವೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದನು. ನೆರೆ ಮನೆಯವರು ಹೇಳುವ ಪ್ರಕಾರ ಆರ್ಮುಗಂ ಪ್ರತಿನಿತ್ಯ ಒಂದಿಲ್ಲೊಂದು ವಿಷಯಕ್ಕೆ ಪತ್ನಿಯ ಜೊತೆ ಜಗಳವಾಡುತ್ತಿದ್ದನು. ನಂತರ ಪತ್ನಿಯ ತಂದೆ ಬಂದು ಬುದ್ದಿವಾದ ಹೇಳಿದ ನಂತರ ಸುಮ್ಮನಿರುತ್ತಿದ್ದನು.
ಕಳೆದ ವಾರ ತಮಿಳುನಾಡಿಗೆ ಹೋಗಿದ್ದ ಆರೋಪಿ ಆರ್ಮುಗಂ, ಪತ್ನಿಯನ್ನು ಕೊಲೆ ಮಾಡಲೆಂದು ಅಲ್ಲಿಂದಲ್ಲೇ ಹರಿತವಾದ ಚಾಕುವೊಂದನ್ನು ಖರೀದಿಸಿ ತಂದಿದ್ದನು. ಇಂದು ಮುಂಜಾನೆ ವಿನಾಃಕಾರಣ ಪತ್ನಿ ಅಂಜಲಿ ಜೊತೆ ಜಗಳವಾಡಿದ್ದಾನೆ. ಅಕ್ಕಪಕ್ಕದ ಮನೆಯವರು ಇವರು ಗಂಡ-ಹೆಂಡತಿಯವರದ್ದು ದಿನ ಇದ್ದಿದ್ದೆ ಎಂದು ಸುಮ್ಮನಾಗಿದ್ದಾರೆ.
ಮೊದಲು ಪತ್ನಿಯ ವೇಲಿನಿಂದ ನೇಣು ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಂಜಲಿ ಹೇಗೋ ತಪ್ಪಿಸಿಕೊಂಡು ಬಂದು ತನ್ನ ತಂದೆಗೆ ಫೋನ್ ಮಾಡಿ ತಿಳಿಸಿದ್ದಾಳೆ. ಮಗಳು ಫೋನ್ ಮಾಡಿ ವಿಷಯ ತಿಳಿಸುತ್ತಿದ್ದಂತೆ ಅಂಜಲಿ ತಂದೆ ತಕ್ಷಣ ಮನೆಗೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಮನೆಯ ಬಾಗಿಲು ಹಾಕಿಕೊಂಡಿದ್ದ ಆರೋಪಿ ಪತ್ನಿಯನ್ನು ಚಾಕುವಿನಿಂದ ಇರಿದು ಆತನೇ ಪೊಲೀಸರಿಗೆ ಶರಣಾಗಿದ್ದಾನೆ.
ಚಾಕುವಿನಿಂದ ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿದ್ದ ಮಗಳನ್ನು ಅಂಜಲಿ ತಂದೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ದೊಡ್ಡಪೇಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.