ಮೈಸೂರು: ಪತ್ನಿಯ ಅತಿಯಾದ ಮಡಿವಂತಿಕೆಗೆ ಬೇಸತ್ತು ಪತಿಯೊಬ್ಬ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಂಜನಗೂಡಿನ ಮಡಹಳ್ಳಿಯಲ್ಲಿ ನಡೆದಿದೆ.
ಪುಟ್ಟಮಣಿ ಕೊಲೆಯಾದ ಪತ್ನಿ. ಕೊಲೆಯಾದ ಪುಟ್ಟಮಣಿ ಪ್ರತಿ ಕ್ಷಣಕ್ಕೂ ಅತಿಯಾಗಿ ಮಡಿವಂತಿಕೆ ಮಾಡುವಂತೆ ಹೇಳುತ್ತಿದ್ದಳು. ಇದರಿಂದ ಬೇಸತ್ತಿದ್ದ ಗಂಡ ಶಾಂತಮೂರ್ತಿ ತನ್ನ ತೋಟದ ಮನೆಯಲ್ಲಿ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬಂದು ತಾನೂ ನೇಣಿಗೆ ಶರಣಾಗಿದ್ದಾನೆ.
ಶಾಂತಮೂರ್ತಿ ಹಾಗೂ ಪುಟ್ಟಮಣಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೃತ ಪುಟ್ಟಮಣಿ ಪ್ರತಿ ಬಾರಿ ಮನೆಯಿಂದ ಹೊರಹೋಗಿ ಬಂದಾಗ ಮಡಿವಂತಿಕೆಯಿಂದ ಸ್ನಾನ ಮಾಡುವಂತೆ ಪತಿಯನ್ನು ಪೀಡಿಸುತ್ತಿದ್ದಳು. ಅಲ್ಲದೇ ಭತ್ತ ಮಾರಿ ತಂದ ಹಣವನ್ನು ಕೂಡ ತೊಳೆದು ಮನೆಯೊಳಗಿಡುತ್ತಿದ್ದಳು. ಮಡಿವಂತಿಕೆ ಹೆಸರಿನಲ್ಲಿ ಎರಡು ಹೆಣ್ಣುಮಕ್ಕಳಿಗೆ ನಿತ್ಯವೂ ಹತ್ತಾರು ಬಾರಿ ಸ್ನಾನ ಮಾಡಿಸುತ್ತಿದ್ದಳು.
ಈ ವಿಚಾರವಾಗಿ ಪದೇ ಪದೇ ಗಲಾಟೆ ಮಾಡಿ ಶಾಂತಮೂರ್ತಿ ಪತ್ನಿಯ ಮೇಲೆ ಹಲ್ಲೆ ಕೂಡ ಮಾಡಿದ್ದನು. ಆದರೂ ಮಡಿವಂತಿಕೆ ಹೆಸರಿನಲ್ಲಿ ಪುಟ್ಟಮಣ್ಣಿ ಮಾನಸಿಕ ಕಿರುಕುಳ ನೀಡುತ್ತಿದ್ದಳು. ಮಂಗಳವಾರ ಕೂಡ ಇದೆ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಆಗ ತೋಟದಲ್ಲಿದ್ದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮನೆಗೆ ಬಂದು ಶಾಂತಮೂರ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಕ್ಕಳು ಶಾಲೆಯಿಂದ ಬಂದ ಮೇಲೆ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಮಂಗಳವಾರ ತಡರಾತ್ರಿ ಪುಟ್ಟಮಣ್ಣಿ ಶವ ಪತ್ತೆಯಾಗಿದೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.