ಕಾರು ಸಮೇತ ಪತಿಯನ್ನೇ ಸುಟ್ಟು ಹಾಕಿದ್ಳು

Public TV
3 Min Read

– ಪತ್ನಿ ಕರೆದ್ಳು ಅಂತ ಮನೆಗೆ ಹೋಗಿದ್ದೆ ತಪ್ಪಾಯ್ತು
– ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಮಲಗಿಸಿದ್ಳು

ಚಿಕ್ಕಬಳ್ಳಾಪುರ: ಪತಿ ಮನೆ ಬಳಿ ಬಂದು ಗಲಾಟೆ, ಕಿರಿಕ್ ಮಾಡುತ್ತಾನೆ. ಅಲ್ಲದೇ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಎರಡನೇ ಪತ್ನಿ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಸಜೀವವಾಗಿ ಕಾರು ಸಮೇತ ಸುಟ್ಟು ಹಾಕಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು ನಗರದ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಧರ್ಮೆಂದ್ರ ಮೃತ ವ್ಯಕ್ತಿ. ಈತನ ಎರಡನೇ  ಪತ್ನಿ ಶಿಲ್ಪಾ ಕೊಲೆ ಮಾಡಿದ್ದಾಳೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೃತ ಧರ್ಮೇಂದ್ರನನ್ನು ಶಿಲ್ಪಾ ಬಿಟ್ಟು ಹೋಗಿದ್ದು, ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅಂಜಿನಪ್ಪನ ಜೊತೆ ವಾಸಿಸುತ್ತಿದ್ದಳು. ಅಂಜಿನಪ್ಪ ಅಯ್ಯಪ್ಪನಗರದಲ್ಲಿ ಪ್ರಾವಿಜನ್ ಸ್ಟೋರ್ ಮಾಲೀಕನಾಗಿದ್ದನು. ಅಲ್ಲಿಗೆ ಹೋಗಿ, ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಪತಿ ಕಿರಿಕ್ ಮಾಡಿ ಗಲಾಟೆ ಮಾಡುತ್ತಿದ್ದನಂತೆ. ಹೀಗಾಗಿ ಶಿಲ್ಪಾ, ಪ್ರಿಯಕರನ ಅಂಜಿನಪ್ಪ, ಕಾರು ಚಾಲಕ ಕಾಂತರಾಜು ಸೇರಿದಂತೆ ಮತ್ತೋರ್ವ ಅಭಿಷೇಕ್ ಜೊತೆ ಸೇರಿ ಕೃತ್ಯ ಎಸಗಿದ್ದಾರೆ. ಸದ್ಯಕ್ಕೆ ಪತ್ನಿ ಶಿಲ್ಪಾ, ಅಂಜಿನಪ್ಪ ಹಾಗೂ ಕಾಂತರಾಜುನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಏನಿದು ಪ್ರಕರಣ?
ಧರ್ಮೆಂದ್ರ ಹಾಗೂ ಶಿಲ್ಪಾ ಮದುವೆಯಾಗಿ ಚೆನ್ನಾಗಿ ಸಂಸಾರ ನಡೆಸುತ್ತಿದ್ದರು. ಈ ದಂಪತಿಗೆ ಒಂದು ವರ್ಷದ ಗಂಡು ಮಗು ಸಹ ಇದೆ. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಧರ್ಮೆಂದ್ರನ ಜೊತೆ ಸಂಸಾರ ಸಾಗಿಸಲಾಗದೆ 7- 8 ತಿಂಗಳ ಹಿಂದೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಆದರೆ ಶಿಲ್ಪಾ ವಾಸವಾಗಿದ್ದ ಮನೆ ಬಳಿ ಹೋಗಿ ಕಿರಿಕ್ ಮಾಡಿ ಗಲಾಟೆ ಮಾಡ್ತಿದ್ದನಂತೆ. ಹೀಗಾಗಿ ಪ್ರಿಯಕರ ಅಂಜಿನಪ್ಪನ ಜೊತೆ ಸೇರಿ ಪತಿಯ ಕೊಲೆಗೆ ಪ್ಲಾನ್ ಮಾಡಿದ್ದಳು. ಫೋನ್ ಮೂಲಕ ಧರ್ಮೇಂದ್ರನ ಜೊತೆ ಟಚ್‍ನಲ್ಲಿದ್ದ ಶಿಲ್ಪಾ, ಬಹಳ ಬೇಜಾರಾಗಿದೆ ಬಾ ಅಂತ ಫೆಬ್ರವರಿ 07 ರಂದು ಮನೆಗೆ ಕರೆಸಿಕೊಂಡಿದ್ದಳು. ಆದರೆ ಪತ್ನಿ ಕೊಲೆ ಮಾಡಲು ಪ್ಲಾನ್ ಮಾಡಿದ್ದಾಳೆ ಎಂದು ತಿಳಿಯದೆ ಮನೆಗೆ ಹೋಗಿದ್ದ.

ಅಲ್ಲಿಂದ ತನ್ನದೇ ಕಾರಲ್ಲಿ ಧರ್ಮೆಂದ್ರ, ಶಿಲ್ಪಾ ಹಾಗೂ ಶಿಲ್ಪಾಳ ಕಾರು ಚಾಲಕ ಹೊಸಕೋಟೆ ಕಡೆಯಿಂದ ಚಿಂತಾಮಣಿಗೆ ಬಂದಿದ್ದರು. ಇವರ ಹಿಂದೆ ಮತ್ತೊಂದು ಕಾರಿನಲ್ಲಿ ಶಿಲ್ಪಾಳ ಪ್ರಿಯಕರ ಅಂಜಿನಪ್ಪ ಹಾಗೂ ಅಭಿಷೇಕ್ ಬಂದಿದ್ದಾರೆ. ಮೊದಲೇ ಪ್ಲಾನ್ ಮಾಡಿದಂತೆ ಹೊಸಕೋಟೆ ಬಳಿ ಬಾರೊಂದರಲ್ಲಿ ಮದ್ಯ, ಊಟ ತಗೊಂಡು ಕಾರು ಹತ್ತಿದ್ದಾರೆ. ಕಾರಲ್ಲೇ ಮದ್ಯದ ವ್ಯಸನಿಯಾಗಿದ್ದ ಧರ್ಮೆಂದ್ರನಿಗೆ ಕಂಠಪೂರ್ತಿ ಕುಡಿಸಿದ್ದಾರೆ.

ಮೊದಲೇ ಮದ್ಯ ಹಾಗೂ ಊಟದಲ್ಲಿ ನಿದ್ರೆ ಮಾತ್ರೆ ಮಿಕ್ಸ್ ಮಾಡಿದ್ದರು. ಹೀಗಾಗಿ ನಶೆ ಹೆಚ್ಚಾಗಿ ಧರ್ಮೇಂದ್ರ ನಿದ್ರೆಗೆ ಜಾರಿದ್ದಾನೆ. ದಾರಿ ಮಧ್ಯೆ ಪೆಟ್ರೋಲ್ ಬಂಕ್‍ವೊಂದರಲ್ಲಿ 4 ಲೀಟರ್ ಪೆಟ್ರೋಲ್ ಖರೀದಿ ಮಾಡಿಕೊಂಡು ಪತಿ ಸಮೇತ ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ಕೇತನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿಗೆ ಹೋಗಿದ್ದಾರೆ. ಅಲ್ಲಿ ಕಾರು ಸಮೇತ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು. ತದನಂತರ ಅಲ್ಲಿಂದ ಅಂಜಿನಪ್ಪ ಬಂದಿದ್ದ ಕಾರಲ್ಲಿ ನಾಲ್ವರು ಬೆಂಗಳೂರಿಗೆ ವಾಪಸ್ ಆಗಿದ್ದರು.

ಫೆಬ್ರವರಿ 08 ರಂದು ಸುಟ್ಟ ಕಾರು ಕಂಡು ಸ್ಥಳೀಯರು ಚಿಂತಾಮಣಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕಾರಿನಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿ ತಲೆ ಬುರುಡೆ ಮಾತ್ರ ಇದ್ದ ಮೃತದೇಹ ಮಾತ್ರ ಪತ್ತೆಯಾಗಿತ್ತು. ಹೀಗಾಗಿ ತನಿಖೆಗಿಳಿದ ಪೊಲೀಸರು ಕಾರಿನ ಚಾರ್ಸಿ ನಂಬರ್ ಆಧರಿಸಿ ನಂಬರ್ ಪತ್ತೆ ಹಚ್ಚಿದ್ದಾರೆ. ಕಾಡುಗುಡಿ ಠಾಣೆಯಲ್ಲೂ ವಿಚಾರಿಸಿದಾಗ ಧರ್ಮೆಂದ್ರನ ಪೂರ್ವಾಪರ ಗೊತ್ತಾಗಿದೆ. ಈ ಸಂಬಂಧ ಎರಡನೇ ಪತ್ನಿಯ ವಶಕ್ಕೆ ಪಡೆದಾಗ ನಡೆದ ಘಟನೆಯ ಅಸಲಿ ಸತ್ಯ ಬಾಯ್ಬಿಟ್ಟಿದ್ದಾಳೆ.

ರೌಡಿಶೀಟರ್ ಧರ್ಮೇಂದ್ರ ಸಹ ಕೊಲೆ ಮಾಡಿದ್ದ:
ರೌಡಿಶೀಟರ್ ಧರ್ಮೇಂದ್ರ ಸಹ ಈ ಮೊದಲು ಕೊಲೆ ಮಾಡಿದ್ದ. ಮೊದಲು ಪುಟ್ಟಪರ್ತಿಗೆ ಆಗಮಿಸುವ ವಿದೇಶಿ ಭಕ್ತರಿಗೆ ಗೈಡ್ ಆಗಿ ಕೆಲಸ ಮಾಡುತ್ತಾ, ಚೆನ್ನಾಗಿ ದುಡ್ಡು ಸಂಪಾದನೆ ಮಾಡುತ್ತಿದ್ದನು. ಮೈ ಮೇಲೆ ಅರ್ಧ ಮುಕ್ಕಾಲು ಕೆಜಿ ಬಂಗಾರ ಹಾಕಿಕೊಂಡು ಏರಿಯಾದಲ್ಲಿ ಹವಾ ಮೈಂಟೇನ್ ಮಾಡುತ್ತಿದ್ದ. ನಂತರ ರಮಣಿಯನ್ನ ಮದುವೆಯಾಗಿದ್ದನು. ಈತ ರಮಣಿ ಮನೆಗೆ ಹೋದಾಗ ರಮಣಿ ತಾಯಿ ಜೊತೆ ಗಲಾಟೆ ಮಾಡಿಕೊಂಡಿದ್ದನಂತೆ. ಈ ವಿಚಾರದಲ್ಲಿ ರಮಣಿಯ ಸಹೋದರನನ್ನು ಮದ್ಯ ಕುಡಿಯೋಣ ಎಂದು ಕರೆದುಕೊಂಡು ಹೋಗಿದ್ದನು. ಆತನಿಗೆ ಮದ್ಯ ಕುಡಿಸಿ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನಂತೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿತ್ತು. ಈತನ ವಿರುದ್ಧ ಹಲವು ಕೇಸ್‍ಗಳು ದಾಖಲಾಗಿದ್ದವು.

Share This Article
Leave a Comment

Leave a Reply

Your email address will not be published. Required fields are marked *