ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಯ್ಯಪ್ಪನಹಳ್ಳಿಯ ಸುದ್ದುಗುಂಟೆ ಪಾಳ್ಯದಲ್ಲಿ ನಡೆದಿದೆ.
35 ವರ್ಷದ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಕನಕಪುರದ ಸಾತನೂರು ಮೂಲದವರಾಗಿರುವ ಅಶ್ವಿನಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮಹಾಂತೇಶ್ ಹಾಗೂ ಅಶ್ವಿನಿ ಕಳೆದ ಏಳು ವರ್ಷಗಳ ಹಿಂದೆ ಪರಸ್ಪರ ಒಪ್ಪಿ ಮದುವೆ ಆಗಿದ್ದರು.
ಮದುವೆ ಆದಾಗಿನಿಂದ ಸಂತೋಷವಾಗಿದ್ದ ಸಂಸಾರದಲ್ಲಿ ಕಳೆದ ಆರೇಳು ತಿಂಗಳಿಂದ ಕ್ಷುಲ್ಲಕ ಕಾರಣಕ್ಕೆ ಪತಿ- ಪತ್ನಿ ನಡುವೆ ಗಲಾಟೆ ಆಗುತ್ತಿತ್ತು. ಎರಡು ಮನೆಯ ದೊಡ್ಡವರು ಸೇರಿ ಇತ್ತೀಚೆಗೆ ಪತಿ-ಪತ್ನಿ ನಡುವೆ ರಾಜಿ ಪಂಚಾಯ್ತಿ ಮಾಡಿ ಬುದ್ಧಿವಾದ ಹೇಳಿದ್ದರು.
ದೊಡ್ಡವರ ಮಾತಿಗೆ ಪಂಚಾಯ್ತಿ ವೇಳೆ ತಲೆ ಆಡಿಸಿದ್ದ ದಂಪತಿ ಪಂಚಾಯ್ತಿ ಆದ ಮೇಲೂ ಕೂಡ ಗಲಾಟೆ ಮಾಡುತ್ತಿದ್ದರು. ಮಹಾಂತೇಶ್ ಹಾಗೂ ಅಶ್ವಿನಿ ನಡುವೆ ಹಣಕಾಸಿನ ವಿಚಾರಕ್ಕೆ ಆಗಾಗ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ. ಅದೇ ವಿಚಾರಕ್ಕೆ ನೊಂದ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಶ್ವಿನಿ ಸಾವಿಗೆ ಪತಿ ಮಹಾಂತೇಶ್ ಕಾರಣ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಮಹಾಂತೇಶ್‍ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಅಶ್ವಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.