– ಕೊಲೆ ನಂತ್ರ ಮನೆಯಲ್ಲೇ ಇದ್ದ ಪತಿ
ಮೈಸೂರು: ವ್ಯಕ್ತಿಯೊಬ್ಬ ತನ್ನ ಮಾವ ಮತ್ತು ಮಗನ ಮುಂದೆಯೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಕಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮಮತಾ (23) ಕೊಲೆಯಾದ ದುರ್ದೈವಿ. ಕೊಲೆಯಾದ ಮಮತಾ ಆರೋಪಿ ನಾಗೇಶ್‍ನ ಎರಡನೇ ಪತ್ನಿಯಾಗಿದ್ದು, ಮಮತಾ ತಂದೆ ಎದುರೇ ನಾಗೇಶ್ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಲ್ಲದೇ ಕೊಲೆ ಮಾಡಿದ ನಂತರ ಆರೋಪಿ ನಾಗೇಶ್ ಮನೆಯಲ್ಲೇ ಇದ್ದನು.
ಆರೋಪಿ ನಾಗೇಶ್‍ಗೆ ಈ ಹಿಂದೆ ಮದುವೆಯಾಗಿತ್ತು. ಮೊದಲನೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ನಂತರ ನಾಗೇಶ್ ಮಮತಾಳನ್ನು ಎರಡನೇ ಮದುವೆ ಮಾಡಿಕೊಂಡಿದ್ದನು. ಈ ದಂತಿಗೆ 8 ವರ್ಷದ ಮಗ ಕೂಡ ಇದ್ದಾನೆ. ಆಗಾಗ ಈ ದಂಪತಿಯ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿತ್ತು.
ಆರೋಪಿ ನಾಗೇಶ್ ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದನು. ಹೀಗಾಗಿ ಗಲಾಟೆ ಬಿಡಿಸಲು ಮಮತಾ ತಂದೆ ಬಂದಿದ್ದರು. ಇದೇ ವೇಳೆ ಜಗಳದಿಂದ ಕೋಪಗೊಂಡ ಆರೋಪಿ ನಾಗೇಶ್ ಪತ್ನಿಯ ತಂದೆಯ ಎದುರೇ ಮೊದಲು ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮಚ್ಚಿನಿಂದ ಕೊಚ್ಚಿದ್ದಾನೆ. ಪರಿಣಾಮ ಮಮತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಇಲವಾಲ ಪೊಲೀಸರು ಬಂದು ಆರೋಪಿ ನಾಗೇಶ್‍ನನ್ನು ಬಂಧಿಸಿದ್ದಾರೆ.