– ಪತ್ನಿ, ಮಕ್ಕಳಿಗೆ ಗಂಭೀರ ಗಾಯ
ಹಾಸನ: ಪಾಪಿ ಪತಿ ಮಹಾಶಯನೊಬ್ಬ ತನ್ನ ಮಕ್ಕಳನ್ನು ನೋಡಲು ಬಿಡದಿದ್ದಕ್ಕೆ ಮನೆಗೇ ಬೆಂಕಿಯಿಟ್ಟ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ತಾಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ಮನೆಯೊಳಗಿದ್ದ ಪತ್ನಿ, ಇಬ್ಬರು ಗಂಡು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಾದ ಗೀತಾ, ಚಿರಂತನ್ (7), ನಂದನ್ (5)ಗೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಂಗಸ್ವಾಮಿ ಮನೆಗೆ ಬೆಂಕಿ (Fire) ಹಚ್ಚಿದ ಆರೋಪಿಯಾಗಿದ್ದು, ಜಮೀನು ವಿಚಾರಕ್ಕೆ ರಂಗಸ್ವಾಮಿ ಹಾಗೂ ಗೀತಾ ನಡುವೆ ಜಗಳವಾಗಿತ್ತು. ಈ ಸಂಬಂಧ ಗೊರೂರು ಪೊಲೀಸ್ ಠಾಣೆ (Geruru Police Station) ಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಹೀಗಾಗಿ ನಾಲ್ಕು ತಿಂಗಳಿನಿಂದ ಪತಿ ಹಾಗೂ ಪತ್ನಿ, ಮಕ್ಕಳು ಪ್ರತ್ಯೇಕವಾಗಿದ್ದರು. ಇದನ್ನೂ ಓದಿ: ಪೀಸ್ ಪೀಸ್ ಪ್ರೇಮಿಯ ಮತ್ತಷ್ಟು ಕ್ರೂರತೆ ಬಹಿರಂಗ- ದೆಹಲಿ ಮಾತ್ರವಲ್ಲ ಡೆಹ್ರಾಡೂನ್‍ನಲ್ಲೂ ದೇಹದ ತುಂಡು ಎಸೆತ
ಇತ್ತ ರಂಗಸ್ವಾಮಿ ಆಗಾಗ ಬಂದು ಮಕ್ಕಳನ್ನು (Children) ನೋಡಿಕೊಂಡು ಹೋಗುತ್ತಿದ್ದ. ಆದರೆ ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಪತ್ನಿ ಗೀತಾ ಬಿಡಲಿಲ್ಲ. ಇದರಿಂದ ಕೋಪಗೊಂಡ ರಂಗಸ್ವಾಮಿ, ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ (Petrol) ತಂದು ಮಧ್ಯರಾತ್ರಿ ಮನೆಗೆ ಸುರಿದು ಬೆಂಕಿ ಹಚ್ಚಿದ್ದಾನೆ.
ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಸ್ಥಳೀಯರ ನೆರವಿನಿಂದ ಗೀತಾ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಆರೋಪಿ ರಂಗಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.