ಚಿಕ್ಕಬಳ್ಳಾಪುರ: ಪತ್ನಿಯನ್ನು ಗೋಡೆಗೆ ಗುದ್ದಿ ಕೊಂದು ಬಳಿಕ ಹಸು ತಿವಿದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಹೊರಟ್ಟಿದ್ದ ಪತಿಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡರೆಡ್ಡಿಹಳ್ಳಿಯಲ್ಲಿ ನಡೆದಿದೆ. ರತ್ನಮ್ಮ(42) ಪತಿಯಿಂದಲೇ ಹತ್ಯೆಯಾದ ದುರ್ದೈವಿ ಪತ್ನಿ.
ಘಟನೆ ವಿವರ:
ಗ್ರಾಮದ ಸೂರಪ್ಪರೆಡ್ಡಿ ತೋಟದಿಂದ ಊಟಕ್ಕೆ ಅಂತ ಮನೆಗೆ ಬಂದಿದ್ದನು. ಈ ವೇಳೆ ಪತ್ನಿ ರತ್ನಮ್ಮ ಮೊಬೈಲ್ ನಲ್ಲಿ ಮಾತನಾಡುತ್ತಿದ್ದನ್ನು ಕಂಡು ಗಲಾಟೆ ಮಾಡಿದ್ದಾನೆ. ಈ ಜಗಳ ತಾರಕಕ್ಕೇರಿ ರತ್ನಮ್ಮಳಿಗೆ ಕಪಾಳಮೋಕ್ಷ ಮಾಡಿ, ನಂತ್ರ ಆಕೆಯ ತಲೆಯನ್ನ ಹಿಡಿದು ಗೋಡೆಗೆ ಗುದ್ದಿದ್ದಾನೆ. ಪರಿಣಾಮ ಕುಸಿದುಬಿದ್ದ ರತ್ನಮ್ಮಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತದನಂತರ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ ಅಷ್ಟರಲ್ಲೇ ರತ್ನಮ್ಮ ಮೃತಪಟ್ಟಿದ್ದಳು.
ಇದರಿಂದ ಭಯಬೀತಗೊಂಡ ಸೂರಪ್ಪರೆಡ್ಡಿ, ಮನೆ ಬಳಿ ಹಸು ತಲೆಗೆ ತಿವಿದು ಸಾವನ್ನಪ್ಪಿದ್ದಾಳೆ ಅಂತ ಸಂಬಂಧಿಕರೆಲ್ಲರಿಗೂ ಹೇಳಿ ಅಂತ್ಯಕ್ರಿಯೆಗೆ ಅಣಿ ಮಾಡಿದ್ದಾನೆ. ಆದರೆ ಅಕ್ಕನ ಸಾವಿನ ಬಗ್ಗೆ ಅನುಮಾನಗೊಂಡ ರತ್ನಮ್ಮಳ ತಮ್ಮ ಮಹೇಶ್ ಈ ಬಗ್ಗೆ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದನು. ದೂರು ಸ್ವೀಕರಿಸಿದ್ದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಸೂರಪ್ಪರೆಡ್ಡಿ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾನೆ.
ಸದ್ಯ ಪ್ರಕರಣ ಸಂಬಂಧಪಟ್ಟಂತೆ ಸೂರಪ್ಪ ರೆಡ್ಡಿಯನ್ನ ಬಂಧಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv