ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ಪತ್ನಿಯ ಕೊಲೆ – ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ

Public TV
2 Min Read

ಕಲಬುರಗಿ: ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.

ಜೇವರ್ಗಿ (Jevargi) ತಾಲೂಕಿನ ಕುರನಳ್ಳಿ ಗ್ರಾಮದ ಮಹಾಂತಪ್ಪ ನಿಂಗಪ್ಪ ದೊಡ್ಡಮನಿಗೆ ಕಲಬುರಗಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲವು ಜೀವಾವಧಿ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಬೆಟ್ಟಿಂಗ್ ಚಟ | ಅಪ್ಪನ ಆಸ್ತಿ ಮಾರಿ ಕಳ್ಳತನ ಮಾಡ್ತಿದ್ದ ಟೆಕ್ಕಿ ಅರೆಸ್ಟ್

ಏನಿದು ಪ್ರಕರಣ?
ಕುರನಳ್ಳಿ (Kuranalli) ಗ್ರಾಮದ ಮಲ್ಕಪ್ಪ ಕಟ್ಟಿಮನಿ ಎಂಬುವವರ ಮಗಳು ಸಂಗೀತಾರನ್ನು 10 ವರ್ಷಗಳ ಹಿಂದೆ ಮಹಾಂತಪ್ಪ ದೊಡ್ಡಮನಿ ವಿವಾಹವಾಗಿದ್ದ. ಈತ ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಿದ್ದ.

2023ರ ಡಿ. 26ರಂದು ಸಂಜೆ ಪತ್ನಿ ಸಂಗೀತಾಗೆ ಕುಡಿಯಲು ಹಣ ನೀಡುವಂತೆ ಪೀಡಿಸಿದ್ದ. ಆ ಸಂದರ್ಭದಲ್ಲಿ ದುಡ್ಡು ಕೊಡಲು ನಿರಾಕರಿಸಿದ್ದ ಪತ್ನಿ ಸಂಗೀತಾಗೆ ಕೊಡಲಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದ. ತೀವ್ರ ಗಾಯಗೊಂಡಿದ್ದ ಸಂಗೀತಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಈ ವೇಳೆ ತಂದೆ-ತಾಯಿಯ ಜಗಳ ಬಿಡಿಸಲು ಬಂದ ಮಗನಿಗೂ ಮಹಾಂತಪ್ಪ ಹೊಡೆದಿದ್ದ ಎನ್ನಲಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಡಿಫೆನ್ಸ್ ಕಾರಿಡಾರ್ ಬಗ್ಗೆ ಚರ್ಚಿಸಲು ನಾಳೆ ಸಿಎಂ ಜೊತೆ ರಾಜನಾಥ್ ಸಿಂಗ್ ಭೇಟಿ: ಎಂ.ಬಿ.ಪಾಟೀಲ್

ಈ ಘಟನೆ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ (Nelogi Police Station) ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು, ಆರೋಪಿ ಮಹಾಂತಪ್ಪನನ್ನು ಬಂಧಿಸಿದ್ದರು. ತನಿಖಾಧಿಕಾರಿಗಳಾದ ಪಿಎಸ್‌ಐ ಜ್ಯೋತಿ ಹಾಗೂ ಸಿಪಿಐ ರಾಜೇಸಾಬ್ ನದಾಫ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ – ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

ಪ್ರಕರಣದ ಕುರಿತಾಗಿ ವಾದ-ಪ್ರತಿವಾದ ಆಲಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಹಮ್ಮದ್ ಮುಝೀರ್ ಉಲ್ಲಾ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣ ಕುರಿತಾಗಿ ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್. ಬಳಬಟ್ಟಿ ವಾದ ಮಂಡಿಸಿದ್ದರು.

Share This Article