`ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್

Public TV
2 Min Read

– ಹೆಣ ಸುಡಲು ಬೆಂಗ್ಳೂರಿನಿಂದ ರವಾನೆಯಾಗಿತ್ತು ಪೆಟ್ರೋಲ್

ಮಡಿಕೇರಿ: ಇಬ್ಬರು ಪ್ರಿಯಕರರ ಜೊತೆ ಸೇರಿ ಪತಿಯನ್ನೇ ಕೊಂದು ಕಾಫಿ ತೋಟದಲ್ಲಿ ಸುಟ್ಟುಹಾಕಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushal Nagar) ತಾಲೂಕಿನ ಸುಂಟಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹೈದರಾಬಾದ್ (Hyderabad) ಮೂಲದ ರಮೇಶ್ ಕುಮಾರ್ (54) ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿಯ 2ನೇ ಪತ್ನಿ ನಿಹಾರಿಕಾ ಹಾಗೂ ಬಾಯ್‌ಫ್ರೆಂಡ್‌ಗಳಾದ ಹರಿಯಾಣ ಮೂಲದ ಅಂಕುಲ್ ರಾಣ ಹಾಗೂ ನಿಖಿಲ್‌ನನ್ನ ಪೊಲೀಸರು ಬಂಧಿಸಿದ್ದಾರೆ.

ಕೊಡಗಿನ ಕಾಫಿ ತೋಟವೊಂದರಲ್ಲಿ ನಿಗೂಢವಾಗಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಿ, ಸುಟ್ಟು ಹಾಕಲಾಗಿತ್ತು. ಈ ಕುರಿತು ಅ.8 ರಂದು ಮೃತದೇಹ ಪತ್ತೆಯಾಗಿತ್ತು. ವ್ಯಕ್ತಿಯ ಬಹುತೇಕ ಭಾಗಗಳು ಸುಟ್ಟು ಕರಕಲಾಗಿ ಕಾಲುಗಳು ಮಾತ್ರ ಸುಟ್ಟು ಹೋಗದೇ ಹಾಗೇ ಉಳಿದಿತ್ತು. ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿ: ಸತೀಶ್ ಸೈಲ್‌ಗೆ 6 ಕೇಸ್‌ನಲ್ಲಿ 7 ವರ್ಷ ಜೈಲು – ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ: ಡಿಕೆಶಿ

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್‌ನನ್ನು ನಿಹಾರಿಕಾ ವಿವಾಹವಾಗಿದ್ದಳು. ಆಸ್ತಿ ಮಾರಾಟದಲ್ಲಿ 8 ಕೋಟಿ ರೂ. ಹಣ ಪಡೆಯುವ ಉದ್ದೇಶದೊಂದಿಗೆ ಆತನನ್ನು ವಿವಾಹವಾಗಿದ್ದಳು. ಆದರೆ ನಿಹಾರಿಕಾ ಹರಿಯಾಣ ಮೂಲಕ ಅಂಕುಲ್ ರಾಣ ಎಂಬಾತನನ್ನು ಪ್ರೀತಿಸುತ್ತಿದ್ದಳು.

ಕಾರಿನಲ್ಲಿ ಡ್ರಾಪ್ ಮಾಡುವ ಉದ್ದೇಶದಿಂದ ತನ್ನ ಮರ್ಸಿಡಿಸ್ ಬೆಂಜ್ ಟಿಎಸ್ 07 ಎಫ್‌ಎಸ್ 5679 ಕಾರಿನಲ್ಲಿ ಹೊರಟು ಬಳಿಕ ಉಪ್ಪಲ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಕೊಲೆ ಮಾಡಿದ್ದರು. ಅಲ್ಲಿಂದ ಬೆಂಗಳೂರಿನ ಹೊರಮಾವುದಲ್ಲಿದ್ದ ತನ್ನ ಇನ್ನೊಬ್ಬ ಬಾಯ್‌ಫ್ರೆಂಡ್ ನಿಖಿಲ್ ಬಳಿ ಬಂದು ವಿಚಾರ ತಿಳಿಸಿದ್ದರು. ಮೃತದೇಹವನ್ನು ನಾಶ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ನೇರವಾಗಿ ಗೂಗಲ್ ಮ್ಯಾಪ್ ಹಾಕಿಕೊಂಡು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಬಳಿ ಪನ್ಯ ಎಸ್ಟೇಟ್‌ಗೆ ಬಂದಿದ್ದರು. ಅಲ್ಲಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಬೆಂಗಳೂರಿನಿಂದಲೇ ತಂದಿದ್ದ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಅದೇ ಕಾರಿನಲ್ಲಿ ವಾಪಸ್ ತೆರಳಿದ್ದಾರೆ ಎನ್ನುವುದು ಪೊಲೀಸರ ತನಿಖೆಯ ಬಳಿಕ ಬೆಳಕಿಗೆ ಬಂದಿದೆ.

ಪೊಲೀಸ್ ತಂಡವು ತಾಂತ್ರಿಕ, ವೈಜ್ಞಾನಿಕ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿ ಸುಮಾರು 500ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಪರೀಶಿಲನೆ ಮಾಡಿದ್ದಾರೆ. ಈ ಮೂಲಕ ಸಂಚರಿಸಿದಂತಹ ವಾಹನಗಳ ಪರಿಶೀಲನೆ, ಮೊಬೈಲ್ ಕರೆಗಳ ಜಾಡನ್ನು ಹಿಡಿದು ಸತತ 10 ದಿನಗಳವರೆಗೆ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ಕಾರ್ಯಾಚರಣೆ ನಡೆಸಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿರಬಹುದಾದ ಸಂಶಯಾಸ್ಪದ ಕಾರಿನ ಮಾಹಿತಿ ಆಧಾರದ ಮೇಲೆ ಮೃತ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಿದ್ದಾರೆ. ಇನ್ನೂ ಕೊಲೆ ಮಾಡಿರುವ ಆರೋಪಿಗಳನ್ನು ಹಿಡಿಯಲು ಮುಂದಾದ ಪೊಲೀಸರಿಗೆ ಇದೊಂದು ಸವಾಲಾಗಿತ್ತು.

ಪ್ರಕರಣವನ್ನು ಭೇದಿಸಿದ ತನಿಖಾ ತಂಡ ಅ.22 ರಂದು ನಿಹಾರಿಕಾ ಹಾಗೂ ನಿಖಿಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಕೃತ್ಯಕ್ಕೆ ಬಳಸಿದ ಕಾರು, ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಅಂಕುಲ್ ರಾಣಾ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಹರಿದ್ವಾರಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ.ಇದನ್ನೂ ಓದಿ:ಆತುರದಲ್ಲಿ ಬಿಪಿಎಲ್ ಕಾರ್ಡ್‌ಗೆ ಆಹಾರ ಇಲಾಖೆ ಕೊಕ್ಕೆ- ತೆರಿಗೆ ಕಟ್ಟದಿದ್ದರೂ, ಆದಾಯ ಇಲ್ಲದಿದ್ದರೂ ರದ್ದು

ಒಟ್ಟಿನಲ್ಲಿ ಈ ಪ್ರಕರಣದ ಬಳಿಕ ಯಾರು ಎಲ್ಲೇ ಹತ್ಯೆ ಮಾಡಿದರೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಪೊಲೀಸರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

Share This Article