ಅತ್ತೆ ಮಗಳನ್ನ ಡಿವೋರ್ಸ್ ಕೊಡಿಸಿ ತಾನು ಮದುವೆಯಾದ

Public TV
2 Min Read

– ಒಂದು ಮಗುವನ್ನು ಕರುಣಿಸಿ ಕೈ ಬಿಟ್ಟ ಭೂಪ

ತುಮಕೂರು: ಕೊಡಗಿನ ವಿರಾಜಪೇಟೆ ತಾಲೂಕಿನ ವಿಜಯಾ ಬ್ಯಾಂಕಿನ ನೌಕರನೊಬ್ಬ ತುಮಕೂರಿನ ಅತ್ತೆ ಮಗಳಿಗೆ ಪತಿಯಿಂದ ಡಿವೋರ್ಸ್ ಕೊಡಿಸಿ ತಾನು ಮದುವೆಯಾಗಿ ಒಂದು ಮಗುವನ್ನು ಕರುಣಿಸಿ ಅರ್ಧ ದಾರಿಯಲ್ಲಿ ಕೈಬಿಟ್ಟ ಪ್ರಕರಣ ಬೆಳಕಿಗೆ ಬಂದಿದೆ.

ತುಮಕೂರು ನಗರದ ಎನ್‍ಆರ್ ಕಾಲೋನಿಯವಳಾದ ಜ್ಯೋತಿ ಕೊಡಗಿನ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಮೂಲದ ಸ್ವಂತ ಅತ್ತೆ ಮಗನಾದ ಪ್ರಸಾದ್ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಇದಕ್ಕೆ ಪ್ರಸಾದ್ ಮನೆಯವರ ವಿರೋಧ ಇದ್ದದ್ರಿಂದ ಬಲವಂತವಾಗಿ ಜ್ಯೋತಿಯನ್ನು ಬೇರೆ ಕಡೆ ಮದುವೆ ಮಾಡಲಾಗಿತ್ತು. ಮದುವೆಯಾದ ಮೇಲೆ ಸುಮ್ಮನಾಗದ ಪ್ರಸಾದ್ ಮತ್ತೆ ಈಕೆಯ ಹಿಂದೆ ಬಿದ್ದಿದ್ದ ನೀ ಇಲ್ಲದೆ ಬದುಕೋಕೆ ಆಗಲ್ಲ. ಸತ್ತು ಹೋಗುತ್ತೇನೆ ಎಂದು ಕತೆ ಕಟ್ಟಿದ್ದನು.

ಮದುವೆಯಾದ ಕೇವಲ ಎರಡೇ ತಿಂಗಳಿಗೆ ಕಿಡ್ನಾಪ್ ಮಾಡಿ ಆಕೆಯ ತಲೆ ಕೆಡಿಸಿ ನಂಬಿಸಿದ್ದನು. ಕೊನೆಗೆ ಆಕೆಯಿಂದಲೇ ಮೊದಲ ಪತಿಗೆ ಡಿವೋರ್ಸ್ ಕೊಡಿಸಿದ್ದನು. ಇದಾದ ಬಳಿಕ ಹುಣಸೂರಿನ ದೇವಾಲಯವೊಂದರಲ್ಲಿ ಪ್ರಸಾದ್, ಜ್ಯೋತಿಗೆ ತಾಳಿ ಕಟ್ಟಿದ್ದನು. ಇವರ ಮದುವೆಗೆ ಮೂರು ತಿಂಗಳ ಗಂಡು ಮಗು ಸಾಕ್ಷಿಯಾಗಿದೆ. ಆದರೂ ಜ್ಯೋತಿಯನ್ನು ಬಿಟ್ಟು ಪ್ರಸಾದ್ ಇನ್ನೊಬ್ಬಳೊಂದಿಗೆ ಮದುವೆಯಾಗಲು ತಯಾರಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಪ್ರಸಾದ್, ಜ್ಯೋತಿಯ ಸ್ವಂತ ಅತ್ತೆಯ ಮಗ. ಹೀಗಾಗಿ ಇಬ್ಬರಿಗೂ ಮೊದಲಿನಿಂದಲೂ ಪ್ರೀತಿ ಇತ್ತು. ಆ ದಿನ ಪೊಲೀಸ್ ಠಾಣೆಯಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದ ಪ್ರಸಾದ್ ತನ್ನ ಪತ್ನಿಯನ್ನಯ ಜೊತೆಯಲ್ಲೇ ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಇರಿಸಿಕೊಂಡಿದ್ದನು. ಈಕೆ ತುಂಬು ಗರ್ಭಿಣಿಯಾಗಿದ್ದರಿಂದ ಹೆರಿಗೆಗಾಗಿ ಜ್ಯೋತಿಯ ತವರು ಮನೆ ತುಮಕೂರಿಗೆ ಕಳುಹಿಸಿ ಕೊಟ್ಟಿದ್ದನು. ಅಷ್ಟೆ ಅಂದಿನಿಂದ ಇಂದಿನವರೆಗೆ ಹೇಗಿದ್ದಿಯ ಎಂದು ಒಂದೇ ಒಂದು ಮಾತಾನ್ನು ಸಹ ಕೇಳಿಲ್ಲ. ಆದರೆ ಈಗ ಪ್ರಸಾದ್ ಬೇರೆ ವರಸೆ ಶುರು ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ನಿನ್ನ ನನ್ನ ಮಧ್ಯೆ ಪತಿ-ಪತ್ನಿ ಸಂಬಂಧವೇ ಇಲ್ಲ. ನಾನು ನಿನ್ನನ್ನ ಮದುವೆಯೇ ಆಗಿಲ್ಲ. ಆ ಮಗು ನನ್ನದಲ್ಲ ಎಂದು ಪ್ರಸಾದ್ ಹೇಳುತ್ತಿದ್ದಾನೆ. ಅಲ್ಲದೇ ಈಗಾಗಲೇ ಹುಣಸೂರು ಮೂಲಕದ ಯುವತಿ ಜೊತೆ ಇನ್ನೊಂದು ಮದುವೆಯಾಗೋಕೆ ಸಿದ್ಧತೆ ಮಾಡಿಕೊಂಡಿರುವ ಪ್ರಸಾದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ದಿಕ್ಕು ಕಾಣದ ಜ್ಯೋತಿ ನನಗೆ ಗಂಡ ಬೇಕು ಎಂದು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ವಿರಾಜ್‍ಪೇಟೆಯ ಪಾಲಿಬೆಟ್ಟದ ವಿಜಯಾ ಬ್ಯಾಂಕಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಪ್ರಸಾದ್‍ಗೆ ಒಳ್ಳೆಯ ಸಂಬಳ ಇದೆ. ಜೀವನಕ್ಕೇನು ಸಮಸ್ಯೆ ಇಲ್ಲ ಜೊತೆಗೆ ಏನೇ ಸಮಸ್ಯೆ ಬಂದರು ದುಡ್ಡು ಕೊಟ್ಟು ಡೀಲ್ ಮಾಡಿಕೊಳ್ಳುತ್ತೀನಿ ಎಂಬ ಅಹಂಕಾರ ಪ್ರಸಾದ್‍ಗೆ ಇದೆ. ನಿನ್ನ ಮೇಲೆ ಹೀಗೆ ಆರೋಪ ಇದ್ಯಲ್ಲಪ್ಪ ಎಂದು ಕೇಳಿದರೆ, ನಾನು ಆಕೆಯನ್ನು ಮದುವೆಯನ್ನೇ ಆಗಿಲ್ಲ. ಯಾವುದೇ ಸಾಕ್ಷಿಗಳಿಲ್ಲ. ಆ ಮಗು ಕೂಡ ನನ್ನದಲ್ಲ ಬೇಕಾದರೆ ಡಿಎನ್‍ಎ ಟೆಸ್ಟ್ ಮಾಡಿಸಿ ಎಂದು ಪ್ರಸಾದ್ ಹೇಳುತ್ತಾನೆ.

ಸದ್ಯ ಜ್ಯೋತಿ ತುಮಕೂರು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಸಾದ್ ಇನ್ನೊಂದು ಮದುವೆ ಆಗುವುದನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *