ಪ್ರೇಯಸಿಯ ಜೊತೆ ಸೇರಿ ಪತ್ನಿಯ ಹತ್ಯೆ- 19 ದಿನಗಳ ಬಳಿಕ ಕೆರೆಯಲ್ಲಿ ಶವ ಪತ್ತೆ

Public TV
1 Min Read

ದಾವಣಗೆರೆ: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಜೊತೆ ಸೇರಿ ಪತ್ನಿಯನ್ನೇ ಹತ್ಯೆಗೈದ ಘಟನೆ ದಾವಣಗೆರೆಯ (Davanagere) ಕೊಡಗನೂರಿನಲ್ಲಿ ನಡೆದಿದೆ. ಹತ್ಯೆಯ ಬಳಿಕ ಶವವನ್ನು ಗೋಣಿಚೀಲದಲ್ಲಿ ತುಂಬಿ ಗ್ರಾಮದ ಬಳಿಯ ಕೆರೆಗೆ ಎಸೆದಿದ್ದು, ಇದೀಗ ಕೊಲೆ ನಡೆದು 19 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಹತ್ಯೆಯಾದ ಮಹಿಳೆಯನ್ನು ಹೊಳಲ್ಕೆರೆಯ ಸಾಸಲುಹಳ್ಳ ಗ್ರಾಮದ ಕಾವ್ಯಾ ಎಂದು ಗುರುತಿಸಲಾಗಿದೆ. ಕಾವ್ಯಾಳನ್ನು ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎಂಬಾತನಿಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಮಗು ಕೂಡ ಇತ್ತು. ಇಷ್ಟಾದರೂ ಸಚಿನ್ ಬೇರೆ ಹೆಣ್ಣಿನ ಸಹವಾಸದಿಂದ ಪತ್ನಿಯನ್ನು ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಗನಿಗೆ ಗುಂಡಿಟ್ಟು ಹತ್ಯೆಗೈದ ತಂದೆ!

ದಾವಣಗೆರೆಯ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರಾ ಎಂಬಾಕೆಯ ಹಿಂದೆ ಬಿದ್ದ ಸಚಿನ್ ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಗಲಾಟೆಯಾಗಿ ಕಾವ್ಯ ತವರು ಸೇರಿದ್ದಳು. ಮತ್ತೆ ಜ.6ರಂದು ಆಕೆಯನ್ನು ಸಚಿನ್ ಮರಳಿ ಕರೆದುಕೊಂಡು ಬಂದಿದ್ದ. ಈ ವೇಳೆ ಮತ್ತೆ ಗಲಾಟೆಯಾಗಿದ್ದು, ಚೈತ್ರಾ ಹಾಗೂ ಸಚಿನ್ ಸೇರಿ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಬಳಿಕ ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದು ಹೋಗಿದ್ದಾರೆ.

ಇತ್ತ ಕಾವ್ಯಾಳ ಸುಳಿವಿಲ್ಲದೇ ಇರುವುದರಿಂದ ಅನುಮಾನಗೊಂಡ ಆಕೆಯ ಪೋಷಕರು ಚಿಕ್ಕಜಾಜೂರು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಸಚಿನ್‍ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆಗೈದಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಇದೀಗ ಪೊಲೀಸರು ಚೈತ್ರಾ ಹಾಗೂ ಸಚಿನ್‍ನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ

Share This Article