ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

Public TV
3 Min Read

– ಹೆಂಡ್ತಿ ದೆವ್ವ ಆಗಬಾರದು, ತಾನು ಪೊಲೀಸರಿಗೆ ಸಿಗಬಾರ್ದು ಅಂತ ಪ್ರಾಣಿಬಲಿ

ಚಿಕ್ಕಮಗಳೂರು: ಹೆಂಡತಿ ಕೊಂದು ಕೊಳವೆ ಬಾವಿಗೆ ಹಾಕಿ ದಫನ್ ಮಾಡಿ ದೇವರಿಗೆ ಮೂರು ಪ್ರಾಣಿ ಬಲಿ (Animal sacrifice) ನೀಡಿ, ಕಬ್ಬಿಣದ ತಗಡಿಗೆ ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವೈಫಲ್ಯ ಆಗಬೇಕು, ಕೋರ್ಟಿನಿಲ್ಲಿ ಕೇಸ್ ನಿಲ್ಲಬಾರದು ಎಂದು ಬರೆದು ಹೆಂಡತಿ ಫೋಟೋವನ್ನ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಕೇಡಿ-ಕಿರಾತಕ ಪತಿ ಬಂಧನವಾಗಿರೋ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.

ಮೃತಳನ್ನ 28 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಹೆಂಡತಿಯನ್ನ ಕೊಂದಿದ್ದ ಗಂಡ ವಿಜಯ್ ಯಾರಿಗೂ ತಿಳಿಯಂತೆ ತಮ್ಮ ತೋಟದ ಕೊಳವೆ ಬಾವಿಯಲ್ಲಿ ಆಕೆಯನ್ನ ಹೂತಿದ್ದನು. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಎಲ್ಲೋ ಹೋಗಿದ್ದಾಳೆ. ಹುಡುಕಿಕೊಡಿ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಆದ್ರೆ, ಒಂದೂವರೆ ತಿಂಗಳ ಹಿಂದೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯ ಬೆನ್ನು ಬಿದ್ದಿದ್ದರು. ಹುಡುಗಿಯ ಪೋಷಕರು ಕೂಡ ನಮಗೆ ನಮ್ಮ ಮಗಳನ್ನ ಹುಡುಕಿಕೊಂಡು ಎಂದು ಕೈಮುಗಿದಿದ್ದರು. ಇದೀಗ ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂಬುದು ಸಾಬೀತಾಗಿದ್ದು, ಗಂಡ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಹಾರರ್‌ ಸ್ಟೋರಿ?
ಮೃತ ಭಾರತಿ ತನ್ನ ಅಜ್ಜಿ ನೋಡಲು ಶಿವಮೊಗ್ಗಕ್ಕೆ ಹೋದವಳು ವಾಪಸ್ಸು ಬಾರದೇ ಕಾಣೆಯಾಗಿದ್ದಾಳೆ ಎಂದು ಸೆಪ್ಟೆಂಬರ್ 5ರಂದು ಪಾಪಿ ಗಂಡ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪೋಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಸುಮಾರು ಒಂದೂವರೆ ತಿಂಗಳ ಬಳಿಕ ಅಕ್ಟೋಬರ್ 13 ರಂದು ಭಾರತಿಯ ತಾಯಿ ಎಮ್ಮೆದೊಡ್ಡಿ ಪ್ರದೇಶದ ಪರದೇಶಿಹಾಳ್ ನಿವಾಸಿ ಲಲಿತಮ್ಮ ಅವರು ಕಡೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನನ್ನ ಮಗಳು ಭಾರತಿಯನ್ನ 6 ವರ್ಷಗಳ ಹಿಂದೆ ಆಲಘಟ್ಟದ ವಿಜಯಕುಮಾರ್ ಎಂಬುವವರಿಗೆ ವಿವಾಹ ಮಾಡಿಕೊಟ್ಟಿದ್ದೆವು. ನಂತರ ಹಲವಾರು ಬಾರಿ ವರದಕ್ಷಿಣೆ ವಿಚಾರವಾಗಿ ಭಾರತಿಗೆ ಹೊಡೆದು ಹಿಂಸೆ ನೀಡಿದ್ದರು. ಈಗ ಕೆಲ ದಿನಗಳ ಹಿಂದೆಯೂ ವರದಕ್ಷಿಣೆ ವಿಚಾರವಾಗಿ ಆಕೆಯ ಕಾಲು ಮುರಿಯುವಂತೆ ಹೊಡೆದಿದ್ದರು. ರಾಜಿ ಪಂಚಾಯಿತಿ ಮಾಡಿ ಆಕೆಯನ್ನು ಗಂಡನ ಮನೆಗೆ ಕಳುಹಿಸಿದ್ದೆವು. ಹತ್ತು ದಿನಗಳ ಹಿಂದೆ ಮತ್ತೆ ಭಾರತಿಗೆ ಬಹಳ ಹಿಂಸೆ ನೀಡಿದ್ದಾರೆಂಬ ವಿಚಾರ ತಿಳಿದು ಅವರ ಮನೆಗೆ ಹೋದಾಗ ಅವರ ಅಜ್ಜಿಗೆ ಹುಷಾರಿಲ್ಲ. ಹಾಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ನೋಡಲು ಹೋಗಿದ್ದಾಳೆ ಎಂದು ಹೇಳಿದ್ದರು.

ಆ ನಂತರ ನಮಗೆ ತಿಳಿಯದಂತೆ ಭಾರತಿ ನಾಪತ್ತೆಯಾಗಿದ್ದಾಳೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ವಿಚಾರ ತಿಳಿದು ಮತ್ತೆ ಆಲಘಟ್ಟಕ್ಕೆ ಹೋಗಿ ಕೇಳಿದಾಗ ನಿಮ್ಮ ಮಗಳು ಬರುವುದಿಲ್ಲ. ಆಕೆಯನ್ನು ಮರೆತು ಬಿಡಿ ಎಂದು ಹೇಳಿದ್ದರಂತೆ. ನನ್ನ ಮಗಳನ್ನು ಇವರು ಕೊಲೆ ಮಾಡಿದ್ದಾರೆ. ಶವ ಎಲ್ಲಿದೆ? ಎಂದು ಹೇಳಿಲ್ಲ ಎಂದು ಭಾರತಿಯ ಪತಿ ವಿಜಯ ಕುಮಾರ್, ಆತನ ತಂದೆ ಗೋವಿಂದಪ್ಪ ಹಾಗೂ ತಾಯಿ ತಾಯಮ್ಮ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಅಂತಿಮವಾಗಿ ದೂರು ನೀಡಿದ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿ ಕಾಣೆಯಾಗಿರುವ ಬಗ್ಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದು ಆತನನ್ನು ಬಂಧಿಸಿದ್ದಾರೆ. ಜೊತೆಗೆ ಆತನ ತಂದೆ ತಾಯಿಯನ್ನೂ ಬಂಧಿಸಲಾಗಿದೆ.

ಆರೋಪಿಗಳನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಲಾಗಿದೆ. ಕೊಲೆ ಮಾಡಿದ ನಂತರ ಹೆಂಡತಿಯ ಮೃತ ದೇಹವನ್ನು ತನ್ನದೇ ಜಮೀನಿನಲ್ಲಿ ಹಿಂದೆ ತೆಗೆಸಿ ನೀರು ಬಾರದೇ ಹಾಗೆಯೇ ಮುಚ್ಚದೇ ಬಿಟ್ಟಿದ್ದ ಕೊಳವೆ ಬಾವಿಗೆ ಹಾಕಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಡೂರು ಪೊಲೀಸರು ಮೃತದೇಹ ಹಾಕಿದ್ದಾರೆ ಎನ್ನಲಾದ ಕೊಳವೆ ಬಾವಿ ಮುಂತಾದೆಡೆ ಮಹಜರು ನಡೆಸಿದರು. ಮೃತದೇಹವನ್ನು ಹೊರತೆಗೆಯಲು ಅಗತ್ಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share This Article