ಪತಿಯಿಂದಲೇ ವಿಪ್ರೋ ಮಾಜಿ ಉದ್ಯೋಗಿಯ ಬರ್ಬರ ಹತ್ಯೆ

Public TV
2 Min Read

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವಿಪ್ರೋ ಮಾಜಿ ಉದ್ಯೋಗಿಯನ್ನು ಪತಿಯೇ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಅಕ್ಷತಾ(30) ಕೊಲೆಯಾದ ಮಹಿಳೆ. ಪ್ರಕರಣದ ಸಂಬಂಧ ಪತಿ ಚಂದ್ರಕಾಂತ್ ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಅಡಿ ರಾಜ್ ವೀರ್ ಸಿಂಗ್ ನನ್ನು ಸಂಪಂಗಿರಾಮ ನಗರ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಶಾಂತಿನಗರದಲ್ಲಿ ಸಿಲ್ವರ್ ಸ್ಪೂನ್ ಹೋಟೆಲ್ ನಡೆಸುತ್ತಿದ್ದ ಚಂದ್ರಕಾಂತ್ ಮತ್ತು ಅಕ್ಷತಾಗೆ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಹೆಬ್ಬಾಳ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ದಂಪತಿ ವಾಸವಿದ್ದು, ಇವರಿಗೆ ನಾಲ್ಕು ವರ್ಷದ ಗಂಡು ಮಗು ಇದೆ.

ದಂಪತಿ ಮಧ್ಯೆ ಆಗಾಗ ಜಗಳವಾಗುತಿತ್ತು. ಜ.6 ರಂದು ಮನೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಪತಿ ಚಂದ್ರಕಾಂತ್ ಅಕ್ಷತಾ ಮೇಲೆ ಹಲ್ಲೆ ನಡೆಸಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ತನ್ನ ಸ್ನೇಹಿತ ರಾಜ್ ವೀರ್ ಸಿಂಗ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದ. ರಾಜ್ ವೀರ್ ಸಿಂಗ್ ತಕ್ಷಣವೇ ತನ್ನ ಐ10 ಕಾರಿನಲ್ಲಿ ಅಪಾರ್ಟ್ ಮೆಂಟ್ ಬಳಿ ಬಂದಿದ್ದಾನೆ. ರಾತ್ರಿ ಯಾರಿಗೂ ತಿಳಿಯದಂತೆ ಅಕ್ಷತಾ ಮೊಬೈಲ್ ಜೊತೆ ಮೃತದೇಹವನ್ನು ಕಾರಿನಲ್ಲಿ ತುಂಬಿ ರಾಜ್‍ವೀರ್ ತಮಿಳುನಾಡಿಗೆ ಪ್ರಯಾಣಿಸಿದ್ದಾನೆ. ಶೂಲಗಿರಿ ಠಾಣಾ ವ್ಯಾಪ್ತಿಯ ಕಾಮನದೊಡ್ಡಿ ಅರಣ್ಯದಲ್ಲಿ ಶವ ಎಸೆದು, ಅದರ ಮೇಲೆ ಡೀಸೆಲ್ ಸುರಿದು ರಾಜ್‍ವೀರ್ ಬೆಂಕಿ ಹಚ್ಚಿದ್ದಾನೆ.

ಪೋಷಕರಿಂದ ನಾಪತ್ತೆ ದೂರು:
ಮಗಳ ನಂಬರ್ ರೀಚ್ ಆಗದ ಹಿನ್ನೆಲೆಯಲ್ಲಿ ಅಕ್ಷತಾ ಪೋಷಕರು ಸಂಪಂಗಿರಾಮ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸುತ್ತಾರೆ. ಪೊಲೀಸರು ಅಕ್ಷತಾ ಮೊಬೈಲ್ ನಂಬರ್ ಪರಿಶೀಲಿಸಿದಾಗ ಬೇರೆ ಬೇರೆ ರಾಜ್ಯದ ಟವರ್ ಗಳು ಪತ್ತೆಯಾಗಿದೆ. ಕರೆ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಪೊಲೀಸರು ಹೊರರಾಜ್ಯಕ್ಕೆ ಹೋಗಿರಬಹುದು ಎಂದು ತಿಳಿದುಕೊಂಡಿದ್ದರು.

ಪತಿ ಮತ್ತು ಪತ್ನಿಯ ನಡುವೆ ಆಗಾಗ ಜಗಳವಾಗುತ್ತಿದ್ದ ವಿಚಾರವನ್ನು ಅಕ್ಷತಾ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ಶಂಕೆಯ ಆಧಾರದಲ್ಲಿ ಪೊಲೀಸರು ಚಂದ್ರಕಾಂತ್ ನನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ಶೂಲಗಿರಿ ಪೊಲೀಸರನ್ನು ಸಂಪರ್ಕಿಸಿದಾಗ ಅಲ್ಲಿ ಪತ್ತೆಯಾದ ಮೃತದೇಹ ಅಕ್ಷತಾಳದ್ದೇ ಎನ್ನುವುದು ಗೊತ್ತಾಗಿದೆ.

ಕೊಲೆ ಮಾಡಿದ್ದು ಯಾಕೆ?
ಪತ್ನಿಗೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇತ್ತು. ಈ ವಿಚಾರ ಕುಟುಂಬದವರಿಗೆ ತಿಳಿದಿತ್ತು. ಅಷ್ಟೇ ಅಲ್ಲದೇ ಆಕೆ ವಿಪರೀತವಾಗಿ ಮದ್ಯವನ್ನು ಕುಡಿಯುತ್ತಿದ್ದಳು. ಹೀಗಾಗಿ ನಾನು ಆಕೆಯನ್ನು ಕೊಲೆ ಮಾಡಿದ್ದೇನೆ ಎಂದು ತನಿಖೆ ವೇಳೆ ಚಂದ್ರಕಾಂತ್ ತಪ್ಪೊಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *