ಗದಗ: ಜೂಜು ಚಟಕ್ಕೆ ಬಿದ್ದು ತಾಳಿಯನ್ನೇ ಅಡವಿಟ್ಟಿದ್ದ ಪತಿಯನ್ನು ಆತನ ಪತ್ನಿ ಹಾಗೂ ಮನೆಯವರು ಸೇರಿ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆಯ ಚಿಂಚಲಿ ಗ್ರಾಮದಲ್ಲಿ ನಡೆದಿದೆ.
ಚಿಂಚಲಿ ಗ್ರಾಮದ ಬಸವರಾಜ ಕಟ್ಟಿ(39) ಕೊಲೆಯಾದ ಪತಿ. ಬಸವರಾಜ್ ಜೂಜಾಟಕ್ಕೆ ದಾಸನಾಗಿದ್ದ. ಹಣ ಇಲ್ಲದ ಕಾರಣ ಹೆಂಡತಿಯ ತಾಳಿಯನ್ನೇ ಅಡವಿಡಟ್ಟಿದ್ದ. ಹಾಗಾಗಿ ಪತ್ನಿ ಶ್ವೇತಾ ತನ್ನ ಗಂಡನಿಗೆ ಬುದ್ಧಿ ಹೇಳುವಂತೆ ತನ್ನ ತವರು ಮನೆಯವರಿಗೆ ತಿಳಿಸಿದ್ದಾಳೆ.
ಅಕ್ಕನ ಮಾತನ್ನು ಕೇಳಿದ ತವರು ಮನೆಯವರು ತಾಳಿ ಅಡವಿಟ್ಟಿದ್ದು ಯಾಕೆ ಎಂದು ಕೇಳಲು ತಮ್ಮ ಬಾಲೆಹೊಸರು ಗ್ರಾಮದಿಂದ ಬಸವರಾಜ್‍ನ ಮನೆಗೆ ಬಂದಿದ್ದರು. ಈ ವೇಳೆ ಬಸವರಾಜ್ ಹಾಗೂ ಶ್ವೇತಾ ಮನೆಯವರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ.
ಈ ಸಂದರ್ಭದಲ್ಲಿ ಶ್ವೇತಾ ಹಾಗೂ ಮನೆಯವರು ಸೇರಿ ಬಸವರಾಜನನ್ನು ಮನೆ ಒಳಗಡೆ ಬಾಗಿಲು ಹಾಕಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಮುಳಗುಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ.
ಮುಳಗುಂದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪತ್ನಿ ಶ್ವೇತಾ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.