ಕೊಲೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಪತಿಗೆ ಶಾಕ್‌ – 4 ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ!

Public TV
3 Min Read

ಮಡಿಕೇರಿ: ಪತ್ನಿ (Wife) ನಾಪತ್ತೆಯಾಗಿದ್ದಾಳೆ ಪತಿಯಿಂದ ದೂರು. ಮೃತ ಪತ್ನಿಯ ಶವಕ್ಕೆ ಪತಿಯಿಂದ ಅಂತ್ಯಸಂಸ್ಕಾರ. ಪತ್ನಿಯನ್ನು ಕೊಲೆಗೈದ ಆರೋಪದ ಅಡಿ ಪತಿ (Husband) ಜೈಲುಪಾಲು. ಜೈಲು ಶಿಕ್ಷೆಯಿಂದ ಹೇಗೋ ಪಾರಾಗಿ ಬಂದಿದ್ದ ಪತಿಗೆ 4 ವರ್ಷದ ನಂತರ ʼಮೃತ ಪತ್ನಿʼಯನ್ನು ನೋಡಿ ಶಾಕ್‌!

ಇದು ಯಾವುದೋ ಸಿನಿಮಾ ಕಥೆಯಲ್ಲ. ಕೊಡಗಿನ ಕುಶಾಲನಗರ (Kushalnagar) ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದ ನೈಜ ಘಟನೆ. ಪತಿಯಿಂದ ʼಕೊಲೆʼಯಾಗಿದ್ದ ಪತ್ನಿ 4 ವರ್ಷದ ಬಳಿಕ ದಿಢೀರ್‌ ಪ್ರತ್ಯಕ್ಷವಾಗುವ ಮೂಲಕ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ.

ಪತಿಯಿಂದ ದೂರು:
ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಸುರೇಶ್‌ ಮತ್ತು ಮಲ್ಲಿಗೆಯ ಸಂಸಾರ ಚೆನ್ನಾಗಿ ಸಾಗುತ್ತಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಈ ಮಧ್ಯೆ ಒಂದು ದಿನ ಮಲ್ಲಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸುರೇಶ್‌ ಅವರು ಕುಟುಂಬದ ಸಂಬಂಧಿಕರಲ್ಲಿ ವಿಚಾರಿಸಿದಾಗ ಆಕೆಗೆ ಅಕ್ರಮ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ದೂರವಾಣಿ ಮೂಲಕ ಸುರೇಶ್‌ ಕರೆ ಮಾಡಿ ತನ್ನೊಂದಿಗೆ ಜೀವನ ಮಾಡದೇ ಇದ್ದರೂ ಪರವಾಗಿಲ್ಲ ತನ್ನ ಮಕ್ಕಳಿಗೆ ತಾಯಿಯಾಗಿ ಇರು ಎಂದು ಪರಿ ಪರಿಯಾಗಿ ಮನವಿ ಮಾಡಿದ್ದರೂ ಆಕೆ ಮಾತ್ರ ಬರಲೇ ಇಲ್ಲ.

ಮುಂದೆ ನನ್ನ ಮೇಲೆ ಯಾವುದೇ ಆರೋಪ ಬರಬಾರದು ಎಂದು ಸುರೇಶ್‌ ಅವರು 2021 ರಲ್ಲಿ ಕುಶಾಲನಗರ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿ ಪೊಲೀಸರ ಬಳಿ ನಡೆದ ಎಲ್ಲಾ ವಿಚಾರವನ್ನು ತಿಳಿಸುತ್ತಾರೆ. ಹೀಗಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಕಾಣೆಯಾಗಿದ್ದ ಸುರೇಶ್ ಪತ್ನಿ ಮಲ್ಲಿಗೆಯನ್ನು ಪತ್ತೆ ಮಾಡಲು ಹೋಗಲಿಲ್ಲ.

ಮೃತದೇಹಕ್ಕೆ ಅಂತ್ಯಸಂಸ್ಕಾರ
ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು 2022 ರಲ್ಲಿ ಸುರೇಶ್ ಗೆ ಕರೆ ಮಾಡಿ ನಿಮ್ಮ ಪತ್ನಿಯ ಶವ ಪತ್ತೆಯಾಗಿದೆ ಎಂದು ಹೇಳಿ ಠಾಣೆಗೆ ಬರಲು ಹೇಳಿದ್ದರು. ಈ ವೇಳೆ ಠಾಣೆಗೆ ಬಂದಿದ್ದ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಶಿಕ್ಷಕಿ ಬಲಿ

ಬೆಟ್ಟದಪುರದಲ್ಲಿ ಸುರೇಶ್‌ ಅವರಿಗೆ ಒಂದು ಅಸ್ಥಿಪಂಜರ ತೋರಿಸಿ,”ಇದು ನಿಮ್ಮ ಪತ್ನಿಯ ಅಸ್ಥಿಪಂಜರ. ಅಂತ್ಯ ಸಂಸ್ಕಾರ ಮಾಡಿ” ಎಂದು ಅಲ್ಲೇ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಸಿದ್ದರು. ನಂತರ ಸುರೇಶ್‌ ಅವರೇ ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಜೈಲಿಗೆ ಅಟ್ಟಿದ್ದರು. ಈ ವೇಳೆ ಸುರೇಶ್‌ ಅವರು ನಾನು ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಪೊಲೀಸರು ನೀನೇ ಕೃತ್ಯ ಎಸಗಿದ್ಯಾ ಎಂದು ಹೇಳಿ ಬಲವಂತವಾಗಿ ಜೈಲಿಗೆ ಕಳುಹಿಸಿದ್ದರು.

ಜೈಲಿನಿಂದ ರಿಲೀಸ್‌
ಎರಡು ವರ್ಷದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅಂತ್ಯಸಂಸ್ಕಾರಗೊಂಡ ಮೃತದೇಹದ ಡಿಎನ್‌ಎ ವರದಿ ಬರುತ್ತದೆ. ಮೃತ ವ್ಯಕ್ತಿಯ ಡಿಎನ್‌ಎಗೂ ಮಲ್ಲಿಗೆ ಕುಟುಂಬಕ್ಕೂ ಯಾವುದೇ ಸಾಮ್ಯತೆ ಇಲ್ಲದ ಕಾರಣ ಸುರೇಶ್‌ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!

ಪ್ರಿಯತಮನೊಂದಿಗೆ ಸಿಕ್ಕಿಬಿದ್ಳು:
4 ವರ್ಷದಿಂದ ನಾಪತ್ತೆಯಾಗಿದ್ದ ಮಲ್ಲಿಗೆ ಏ.1 ರಂದು ಮಡಿಕೇರಿಯ ಹೋಟೆಲಿಗೆ ಪ್ರಿಯಕರನೊಂದಿಗೆ ಬಂದಿದ್ದಾಳೆ. ಈ ವೇಳೆ ಅಲ್ಲಿ ಸುರೇಶ್‌ ಅವರ ಸ್ನೇಹಿತರು ಆಕೆಯ ಫೋಟೋವನ್ನು ತೆಗೆದು ಸುರೇಶ್‌ ಅವರಿಗೆ ಮತ್ತು ಪೊಲೀಸರಿಗೆ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಲರ್ಟ್‌ ಆಗಿ ಮಲ್ಲಿಗೆ ನೆಲೆಸಿರುವ ಜಾಗವವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಮೃತದೇಹ ಯಾರದ್ದು?
ಅಂದು ಸುರೇಶ್ ‌ಅಂತ್ಯ ಸಂಸ್ಕಾರ ಮಾಡಿದ ಆ ಅಸ್ಥಿಪಂಜರ ಯಾರದ್ದು? ಯಾವುದೇ ಸಾಕ್ಷ್ಯಗಳು ಇಲ್ಲದೇ ಇದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಸುರೇಶ್‌ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

 

Share This Article