ಭೂಕುಸಿತಕ್ಕೆ ಬಲಿಯಾದ ಗರ್ಭಿಣಿಯ ಮೃತದೇಹಕ್ಕಾಗಿ ಶೋಧ- ಪತ್ನಿಗಾಗಿ ಪತಿ ಕಣ್ಣೀರು

Public TV
1 Min Read

ಮಡಿಕೇರಿ: ಭೂಕುಸಿತಕ್ಕೆ ಒಳಗಾಗಿರುವ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಭೂಕುಸಿತವಾದ ಪ್ರದೇಶದಲ್ಲಿ ಕೆಸರು ತುಂಬಿಕೊಂಡಿದ್ದು, ಕಾರ್ಯಾಚರಣೆಗೆ ಅಡ್ಡಿ ಆಗುತ್ತಿದೆ.

ತೋರ ಗ್ರಾಮದ ನಿವಾಸಿ ಹರೀಶ್ ಅವರು ತಮ್ಮ 8 ತಿಂಗಳ ಗರ್ಭಿಣಿ ಪತ್ನಿ ವೀಣಾ ಸೇರಿದಂತೆ ಕುಟುಂಬಸ್ಥರಾದ ಅಮ್ಮು ಹಾಗೂ ಲೀಲಾ ಭೂಕುಸಿತದಿಂದ ಮೃತಪಟ್ಟಿದ್ದಾರೆ. ಆದರೆ ಇಷ್ಟು ದಿನವಾದರೂ ಅವರ ಮೃತ ದೇಹಗಳು ಸಿಕ್ಕಿಲ್ಲ. ಜಿಲ್ಲಾಡಳಿತ, ಪೊಲೀಸ್, ಗರುಡ ಟೀಂ, ಎನ್‍ಡಿಆರ್‍ಎಫ್ ಎಲ್ಲರೂ ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ಹರೀಶ್ ರೋಧಿಸುತ್ತಿದ್ದಾರೆ.

1996ರಲ್ಲಿ ನಾನು ಚಿಕ್ಕವನಾಗಿದ್ದಾಗ ತೋರ ಗ್ರಾಮಕ್ಕೆ ಬಂದೆ. ಇಲ್ಲಿನ ನಿವಾಸಿ ಪೊನ್ನಪ್ಪ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದೆ. ಅವರ ಮನೆಯಲ್ಲೇ ವಾಸಿಸುತ್ತಿದ್ದೆ. ಇತ್ತೀಚೆಗಷ್ಟೇ ಮದುವೆ ಅಗಿದ್ದೆನು. ನಮ್ಮ ಮಾಲೀಕರ ಹಂದಿಗಳು, ಹಸುಗಳನ್ನು ನೋಡಿಕೊಂಡು, ಅವರು ಕೊಟ್ಟಿದ್ದ ಸ್ವಲ್ಪ ಜಾಗದಲ್ಲಿ ತೋಟ ಮಾಡಿಕೊಂಡು ಇದ್ದೆ. ಆದರೆ ಈಗ ಯಾವುದೂ ಇಲ್ಲ. ಎಲ್ಲವನ್ನು ಕಳೆದುಕೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಪತ್ನಿ ಹಾಗೂ ಮನೆಯವರ ಮೃತದೇಹವೂ ಸಿಕ್ಕಲ್ಲ. ಎಲ್ಲರು ಹುಡುಕುತ್ತಿದ್ದಾರೆ. ಮುಂದೆ ಹೇಗೆ ಇರಬೇಕು ಎಂದು ಅಲೋಚನೆ ಮಾಡಿಲ್ಲ. ಇಷ್ಟರವರೆಗೆ ಸಂಪಾದನೆ ಮಾಡಿದ್ದನ್ನೆಲ್ಲ ಕಳೆದುಕೊಂಡಿದ್ದೇನೆ. ನನ್ನ ಹೆಂಡತಿ 8 ತಿಂಗಳ ಗರ್ಭಿಣಿ ಅವಳು ಸಿಕ್ಕಿಲ್ಲ. ನನಗಾಗಿ ಯಾವುದೂ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ವಿರಾಜಪೇಟೆ ಮುಖ್ಯರಸ್ತೆಯಿಂದ ಸುಮಾರು 6 ಕಿ.ಮೀ. ದೂರದಲ್ಲಿ ಅಂದಾಜು 500ಕ್ಕೂ ಅಧಿಕ ಎಕರೆಗಳಷ್ಟು ಜಾಗದಲ್ಲಿ ಬೆಟ್ಟ ಕುಸಿದಿದ್ದು, ಕಾಲಿಟ್ಟಲೆಲ್ಲ ಹೂತುಕೊಳ್ಳುವ ರೀತಿಯಲ್ಲಿ ಕೆಸರಿನ ಸ್ಥಿತಿ ಇರುವುದರಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ಪ್ರದೇಶದಲ್ಲಿ ಮನೆ, ತೋಟಗಳು ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ದುರ್ಘಟನೆಯಿಂದಾಗಿ ಅವುಗಳ ಯಾವುದೇ ಕುರುಹು ಕಾಣದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *