ಚಿಕ್ಕಮಗಳೂರು: ಸದ್ಯ ಬೆಂಗಳೂರಿನಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಜನರನ್ನ ಬೆಚ್ಚಿಬೀಳಿಸಿದೆ. ಈ ನಡುವೆ ಚಿಕ್ಕಮಗಳೂರಿನಲ್ಲಿ (Chikkamagaluru) ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಅಜ್ಜಂಪುರ (Ajjampura) ತಾಲೂಕಿನ ಚಿಕ್ಕನಾವಂಗಲ ಗ್ರಾಮದಲ್ಲಿ ಘಟನೆ ನಡೆದಿದೆ. ತನು (25) ಕೊಲೆಯಾದ ಮಹಿಳೆ, ರಮೇಶ್ ಕೊಲೆಗೈದ ಪತಿ. ಮನೆಯ ರೂಮಿನ ತುಂಬೆಲ್ಲ ರಕ್ತ ಚೆಲ್ಲಿದ್ದು, ರಕ್ತದ ಮಡುವಿನಲ್ಲಿ ಪತ್ನಿಯ ಶವ ಪತ್ತೆಯಾಗಿದೆ.
ತನು & ರಮೇಶ್ 7 ವರ್ಷಗಳ ಹಿಂದೆ ಮದ್ವೆಯಾಗಿದ್ದರು. ದಂಪತಿಗೆ 6 ವರ್ಷದ ಗಂಡು ಮಗು ಇದೆ. ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದ ತನು ಕಳೆದ 2 ವರ್ಷದಿಂದ ತೋಟದ ಮನೆಯಲ್ಲಿ ಪ್ರತ್ಯೇಕ ವಾಸವಿದ್ದಳು. ಹೀಗಾಗಿ ಇಬ್ಬರ ನಡುವೆ ಕಲಹ ಇತ್ತು. ಬುಧವಾರ ರಾತ್ರಿ ಕುಡಿದು ಬಂದಿದ್ದ ರಮೇಶ್, ಪತ್ನಿಯನ್ನ ಕ್ರೂರವಾಗಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನ ಕೊಂದ ಬಳಿಕ ತಾನೂ ಕೂಡ ಕೈ ಕೊಯ್ದುಕೊಂದು ಅಪಘಾತವಾಗಿದೆ ಎಂದು ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಅಪಘಾತವಲ್ಲ ಎಂದು ಹೇಳಿದಾಗ ನನ್ನ ಮೇಲೆ ನನ್ನ ಪತ್ನಿಯಿಂದ ಕೊಲೆ ಯತ್ನ ನಡೆದಿದೆ ಎಂದು ಕಥೆ ಹೇಳಿದ್ದಾನೆ. ವಿಷಯ ಗೊತ್ತಾಗಿ ಮನೆಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ.
ತನುಜಾ ಪೋಷಕರು ಗಂಡ, ಅತ್ತೆ-ಮಾವ ಸೇರಿ ಒಂಬತ್ತು ಜನರ ವಿರುದ್ಧ ದೂರು ನೀಡಿದ್ದಾರೆ. ರಮೇಶ್ ಆತನ ಅಪ್ಪ-ಅಮ್ಮ, ಅಕ್ಕ-ತಂಗಿಯ ಮಾತು ಕೇಳಿ ಹಿಂದೆ ತನುಜಾಳಿಗೆ ಹಿಂಸೆ ಕೊಡುತ್ತಿದ್ದ. ಈಗ ಪ್ರಾಣವನ್ನೇ ತೆಗೆದಿದ್ದಾನೆ ಎಂದು ಆರೋಪಿಸಿದ್ದಾರೆ. ಅಜ್ಜಂಪುರ ಪೊಲೀಸರು (Ajjampura Police Station) ಪ್ರಕರಣ ದಾಖಲಿಸಿಕೊಂಡು 9 ಜನರಲ್ಲಿ ಗಂಡ ರಮೇಶ್ ಹಾಗೂ ಆತನ ಅಪ್ಪ-ಅಮ್ಮನನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.