ಬದುಕಿನ ಪಾಠ ಹೇಳಿದ ಪತ್ನಿಯನ್ನೇ ಕೊಂದು ಮನೆಯಲ್ಲೇ ಹೂತಿದ್ದ ಪತಿರಾಯ ಅರೆಸ್ಟ್

Public TV
2 Min Read

ಚಿತ್ರದುರ್ಗ: ಜೀವನದಲ್ಲಿ ಚೆನ್ನಾಗಿ ಬದುಕಲು ಹಣ ಸಂಗ್ರಹಿಸಿಡಬೇಕೆಂದು ಬುದ್ಧಿವಾದ ಹೇಳಿದ ಚಿತ್ರದುರ್ಗ ತಾಲೂಕಿನ ಕೋಣನೂರಿನಲ್ಲಿ ಪತ್ನಿಯನ್ನು ಕೊಲೆಗೈದು, ಮನೆಯಲ್ಲೇ ಹೆಣವನ್ನು ಹೂತಿಟ್ಟಿದ್ದ ಆರೋಪಿ ನಾರಪ್ಪ ಅರೆಸ್ಟ್ ಆಗಿದ್ದಾನೆ.

ಮದ್ಯವ್ಯಸನ ಜೊತೆಗೆ ಜೂಜಾಡೋ ಚಟ ಮೈಗೂಡಿಸಿಕೊಂಡಿದ್ದ ನಾರಪ್ಪ ದುಡಿದ ದುಡ್ಡನ್ನೆಲ್ಲ ಮದ್ಯ, ಇಸ್ಪೀಟು ಅಂತ ಹಾಳು ಮಾಡ್ತಿದ್ದನು. ಈ ದುರಾಭ್ಯಾಸಗಳಿಂದ ಬೇಸತ್ತ ಪತ್ನಿ ಸುಮಾ ಪದೇ ಪದೇ ಬುದ್ಧಿಮಾತು ಹೇಳ್ತಾ ಇದ್ಳು. ಆದರೆ ಪತ್ನಿ ಬುದ್ಧಿಮಾತು ಹೇಳಿದಳು ಅಂತ ಮದುವೆ ವಾರ್ಷಿಕೋತ್ಸವದ ದಿನವೇ ಆಕೆಯನ್ನು ಕೊಂದು ಕಾಣೆಯಾಗಿದ್ದಾಳೆ ಎಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ನಾರಪ್ಪ ದೂರು ಕೊಟ್ಟಿದ್ದನು. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

ನಾರಪ್ಪನಿಂದ ಪೊಲೀಸರು ದೂರು ದಾಖಲಿಸಿಕೊಂಡು ಸುಮಾಳನ್ನು ಹುಡುಕುತ್ತಿದ್ದರು. ಸುಮಾ ಕಾಣೆಯಾಗಿ 12 ದಿನ ಕಳೆದರೂ ಸಿಗದೇ ಇದ್ದಾಗ ಪೊಲೀಸರು ಅನುಮಾನಗೊಂಡು ನಾರಪ್ಪನ ಮನೆ ಪರಿಶೀಲನೆ ನಡೆಸಿದ್ದರು. ಆಗ ನಾರಪ್ಪನೇ ಪತ್ನಿಯನ್ನು ಕೊಂದು ಮನೆಯೊಳಗೆ ಹೂತಿಟ್ಟಿರುವ ಶಂಕೆ ಬಂದಿದೆ. ಬಳಿಕ ಸುಮಾಳ ತಂದೆ ಬಳಿ ದೂರು ದಾಖಲಿಸಿಕೊಂಡು ಮನೆಯೊಳಗಿನ ಮಂಚದ ಕೆಳಗೆ ಅಗೆದು ನೋಡಿದಾಗ ಅಸಲಿ ಸತ್ಯ ಬಯಲಾಗಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.

ಪತ್ನಿಯಾದ ಸುಮಾಳನ್ನು ಬರ್ಬರವಾಗಿ ಹತ್ಯೆ ಮಾಡಿ ಮನೆಯೊಳಗಿನ ಕಡಪಾ ಬಂಡೆ ಕೆಳಗೆ ಪತ್ನಿ ಶವ ಹೂತಿಟ್ಟಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಖತರ್ನಾಕ್ ಪತಿ ನಾರಪ್ಪ ತಲೆ ಮರೆಸಿಕೊಂಡಿದ್ದನು. ಆದರೆ ಕೊಲೆ ಪ್ರಕರಣ ಬೆಳಕಿಗೆ ಬಂದ 48 ಗಂಟೆಯೊಳಗೆ ಭರಮಸಾಗರ ಪೊಲೀಸರು ಆರೋಪಿ ನಾರಪ್ಪನನ್ನು ದಾವಣಗೆರೆ ಬಸ್ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸಿಂಗಲ್ ಡಿಜಿಟ್‍ನಲ್ಲಿದ್ದ ಸೋಂಕು 78ಕ್ಕೆ ಏರಿಕೆ – ಆತಂಕದಲ್ಲಿ ಕಾಫಿನಾಡಿಗರು

ಈ ಪ್ರಕರಣದಿಂದ ದಾಂಪತ್ಯ ಜೀವನ ಚೆನ್ನಾಗಿರಲಿ ಅಂತ ಪತಿಗೆ ಬುದ್ಧಿಮಾತು ಹೇಳಿದ ಹಿನ್ನೆಲೆಯಲ್ಲಿ ಅಮಾಯಕ ಪತ್ನಿ ಕೊಲೆಯಾಗಿರೋದು ಮಾತ್ರ ದುರಂತ ಎನಿಸಿದೆ. ಆದರೆ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಲೆಗೈದ ಆರೋಪಿ ನಾರಪ್ಪ ಜೈಲು ಸೇರಿದ್ದಾನೆ. ಈ ಪ್ರಕರಣದಿಂದಾಗಿ ಪತ್ನಿಯರು ಕುಡುಕ ಗಂಡಂದಿರಿಗೆ ಬುದ್ಧಿ ಹೇಳುವ ಮುನ್ನ ಒಂದು ಕ್ಷಣ ಯೋಚಿಸುವ ಪರಿಸ್ಥಿತಿ ಆ ಗ್ರಾಮದಲ್ಲಿ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *