ಮದ್ವೆಯಾಗಿ 12 ದಿನಕ್ಕೇ ದೂರವಾದ ಪತ್ನಿಗಾಗಿ ಕಣ್ಣೀರು ಹಾಕಿದ ಪತಿ

Public TV
2 Min Read

ಹಾಸನ: ಹುಡುಗಿ ಮನೆಯವರ ತೀವ್ರ ವಿರೋಧದಿಂದಾಗಿ ಅಂತರ್ಜಾತಿ ವಿವಾಹವಾಗಿದ್ದ ನವ ಜೋಡಿಯೊಂದು 12 ದಿನಕ್ಕೇ ಬೇರೆ ಬೇರೆಯಾಗಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆದಿದೆ.

ಪಟ್ಟಣದ ಮಾರುತಿ ನಗರದ ಚಂದ್ರೇಗೌಡ ಎಂಬುವರ ಪುತ್ರಿ ಶೋಭಾ ಮತ್ತು ಹಾಸನ ರಸ್ತೆಯ ನಿವಾಸಿ ಶೇಖರಪ್ಪ ಎಂಬುವರ ಪುತ್ರ ಗುರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಗುರು ಮನೆಯವರ ನೆಂಟರಿಷ್ಠರ ಸಮ್ಮುಖದಲ್ಲಿ ಕಳೆದ ಜುಲೈ 27 ರಂದು ದೇವಾಲಯವೊಂದರಲ್ಲಿ ಲವ್ ಮ್ಯಾರೇಜ್ ಆಗಿದ್ದರು. ಈ ಸಂಬಂಧ ಅರಸೀಕೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜುಲೈ 31 ರಂದು ನೋಂದಣಿಯನ್ನೂ ಮಾಡಿಸಿಕೊಂಡಿದ್ದಾರೆ.

ಗುರು ಎಲೆಕ್ಟ್ರಿಷಿಯನ್ ಆಗಿದ್ದರೆ, ಶೋಭಾ ಅಂತಿಮ ಬಿಎ ಓದುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಆದ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆ ಸಹ ಆಗಿದ್ದರು. ಆದ್ರೆ ನಮ್ಮ ಮದುವೆಗೆ ಶೋಭಾ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ ಅರಸೀಕೆರೆ ನಗರ ಪೊಲೀಸರ ಸಹಾಯ ಪಡೆದು ನನ್ನ ಮೇಲೆ ಹಲ್ಲೆ ಮಾಡಿ, ಪತ್ನಿಯನ್ನು ಬಲವಂತವಾಗಿ ಅವರ ಮನೆಗೆ ಕಳಿಸಿಕೊಟ್ಟಿದ್ದಾರೆ ಎಂದು ಗುರು ಇದೀಗ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ:  ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

ನನಗೇನು ಬೇಡ ನನಗೆ ನನ್ನ ಹೆಂಡ್ತಿ ಬೇಕು: ಕಳೆದ ತಿಂಗಳು 27ರಂದು ದೇವಸ್ಥಾನದಲ್ಲಿ ಮದುವೆ ಆಗಿದ್ವಿ. ಆ ಬಳಿಕ ಅಲ್ಲಿಂದ ಬೆಂಗಳೂರಿನಲ್ಲಿರೋ ಪರಿಚಯಸ್ಥರ ಮನೆಗೆ ಹೋದ್ವಿ. ಅಲ್ಲಿಂದ ಭಾನುವಾರ ಸಂಜೆ ಬಂದು ಅರಸೀಕೆರೆಯಲ್ಲಿರೋ ಪರಿಚಯಸ್ಥರ ಮನೆಯಲ್ಲಿ ಉಳಿದುಕೊಂಡ್ವಿ. ಸೋಮವಾರ ಬೆಳಗ್ಗೆ ತಾಲೂಕು ಸಬ್ ರಿಜಿಸ್ಟಾರ್ ಆಫೀಸಿಗೆ ತೆರಳಿ ಕಾನೂನು ಪ್ರಕಾರ ಮದುವೆಯಾಗಿ ರಿಜಿಸ್ಟಾರ್ ಮಾಡಿಕೊಂಡ್ವಿ. ಮರುದಿನ ಅಂದ್ರೆ ಮಂಗಳವಾರ ಪೊಲೀಸ್ ಠಾಣೆಗೆ ಬರುವಂತೆ ನನಗೆ ಕರೆ ಬಂತು. ಅದರಲ್ಲಿ ಹುಡುಗಿ ಮನೆಯವರಿಗೆ ಮುಚ್ಚಳಿಕೆ ಬರೆದುಕೊಡಲು ಠಾಣೆಗೆ ಬರುವಂತೆ ಹೇಳಿದ್ದರು. ಹೀಗಾಗಿ ನಾನು ಠಾಣೆಗೆ ತೆರಳುತ್ತಿದ್ದಂತೆಯೇ ನನ್ನ ಕೈಯಿಂದ ಸರ್ಟಿಫಿಕೆಟ್ ಎಳೆದುಕೊಂಡು, ನನ್ನ ಪಕ್ಕಕ್ಕೆ ದೂಡಿ, ಹುಡುಗಿಯನ್ನು ಆಕೆಯ ತಾಯಿ ಬಳಿ ಕಳುಹಿಸಿದ್ರು. ನಂತ್ರ ಪೊಲೀಸರು ನನ್ನ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ಕೆ ಪ್ರಭಾಕರ್ ಹಲ್ಲೆ ಮಾಡಿದ್ದರು. ಅಲ್ಲದೇ ಹುಡುಗಿಯತ್ರ ನಿನ್ನ ತಾಳಿ, ಕಾಲುಂಗುರ ಅವನಿಗೆ ಬಿಚ್ಚಿ ಕೊಡು, ಅವನಿಗೆ ಹೊಡೆತೀವಿ ಅಂತ ಬೆದರಿಸಿದ್ದಾರೆ. ಈಗ ನನಗೇನು ಬೇಡ ನನಗೆ ಹೆಂಡ್ತಿ ಬೇಕು. ಆಕೆ ಇಲ್ಲವೆಂದಲ್ಲಿ ನಾನು ಸಾಯ್ತೀನಿ. ಖಂಡಿತಾ ಬದುಕಲ್ಲ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಗುರು ಕಣ್ಣೀರು ಹಾಕಿದ್ರು.

ನಮಗೆ ನ್ಯಾಯಬೇಕು: ಮಗನ ಸಂಕಟಕ್ಕೆ ದನಿಯಾಗಿರುವ ಗುರು ತಾಯಿ ಚಂದ್ರಮ್ಮ, ನಮಗೆ ನನ್ನ ಸೊಸೆ ಬೇಕು. ಸ್ಟೇಷನ್ ನಲ್ಲಿ ನನ್ನ ಮಗನಿಗೆ ಸರಿಯಾಗಿ ಹೊಡೆದ್ರು. ಅವರು ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದರೂ ನಾನೇನು ಚಿಂತೆ ಮಾಡುತ್ತಿರಲಿಲ್ಲ. ನನ್ನ ಎದುರುಗಡೆನೇ ಮಗನಿಗೆ ಹೊಡೆದಿದ್ದಾರೆ. ನನ್ನ ಮಗನಿಂದ ಸೊಸೆ ದೂರವಾಗಲು ಪೊಲೀಸರೇ ಕಾರಣ. ನಮಗೆ ನ್ಯಾಯಬೇಕು ಎಂದು ಅವರೂ ಕೂಡ ಕಣ್ಣೀರು ಹಾಕಿದ್ರು.

ಇದನ್ನೂ ಓದಿ: ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, Sorry ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

Share This Article
Leave a Comment

Leave a Reply

Your email address will not be published. Required fields are marked *