ಚಂಡೀಗಢ: ರಸ್ತೆ ಕುಸಿದು ಉಕ್ಕಿ ಹರಿಯುತ್ತಿದ್ದ ನೀರಿನ ನಡುವೆ ಎರಡೂ ಬದಿಗೆ ಸೇತುವೆಯಂತೆ ನಿಂತು ಶಾಲಾ ಮಕ್ಕಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಿಸಿದ ಘಟನೆ ಪಂಜಾಬ್‌ನಲ್ಲಿ (Punjab) ನಡೆದಿದೆ.
ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಗದ್ದೆಗಳು ಜಲಾವೃತಗೊಂಡಿದ್ದವು. ಪಂಜಾಬ್‌ನ ಮೋಗಾದಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನ ಮಧ್ಯೆ ರಸ್ತೆ ಎರಡೂ ಬದಿಗೆ ಸಂಪರ್ಕ ಕೊಂಡಿಯಂತೆ ನಿಂತು 35 ಶಾಲಾ ಮಕ್ಕಳನ್ನು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಿಸಿದ್ದಾರೆ. ‘ಜುಗಾಡ್’ ಎಂದು ಕರೆಯಲ್ಪಡುವ ಈ ವಿಶಿಷ್ಟ ವಿಧಾನದ ಮೂಲಕ ಶಾಲಾ ಮಕ್ಕಳಿಗೆ ನೆರವಾದವರನ್ನು ಮಲ್ಲೆಯನ್ ಗ್ರಾಮದ ಪಂಚಾಯಿತಿ ಗೌರವಿಸಿದೆ. ಇದನ್ನೂ ಓದಿ: Digital Arrest | ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ – ಬ್ಯಾಂಕ್ ಅಧಿಕಾರಿಗೆ 56 ಲಕ್ಷಕ್ಕೂ ಅಧಿಕ ಹಣ ವಂಚನೆ
ಮಲ್ಲೆಯಾನ್‌ನಲ್ಲಿ ಭಾರೀ ಮಳೆಯಿಂದಾಗಿ ಹೊಲ, ಗದ್ದೆಗಳು ಜಲಾವೃತಗೊಂಡಿದ್ದವು. ಶಾಲೆಗೆ ಹೋಗಿದ್ದ ಮಕ್ಕಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ, ಮಕ್ಕಳು ಶಾಲೆಯಿಂದ ವಾಪಸ್ ಆಗಬೇಕಾಯಿತು. ಆದರೆ, ಗುರುದ್ವಾರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಕನಿಷ್ಠ 35 ಮಕ್ಕಳು ಸಿಲುಕಿಕೊಂಡಿದ್ದರು. ಸುಖ್ಬಿಂದರ್ ಸಿಂಗ್ ಮತ್ತು ಗಗನ್‌ದೀಪ್ ಸಿಂಗ್ ಇತರರೊಂದಿಗೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
ರಸ್ತೆ ಕುಸಿದು ಎರಡೂ ತುದಿಯ ಅಂತರ 5 ಅಡಿ ಇತ್ತು. ನೀರು ಉಕ್ಕಿ ಹರಿಯುತ್ತಿತ್ತು. ಮಾನವ ಸೇತುವೆ ನಿರ್ಮಿಸಿ ಮಕ್ಕಳಿಗೆ ನೆರವಾಗಲಾಯಿತು. ಈ ಕಾರ್ಯದಿಂದ 35 ಶಾಲಾ ಮಕ್ಕಳು ಮತ್ತು ಕನಿಷ್ಠ 10 ಜನರು ಸುರಕ್ಷಿತವಾಗಿ ದಾಟಲು ಸಾಧ್ಯವಾಯಿತು. ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ 6 ತಿಂಗಳು ವಿಸ್ತರಣೆ – ಸದನದಲ್ಲಿ ಅನುಮೋದನೆ
ಮಲ್ಲೆಯಾನ್ ಮತ್ತು ರಸೂಲ್ಪುರ್ ಗ್ರಾಮಗಳನ್ನು ಸಂಪರ್ಕಿಸುವ ಮತ್ತು ಜನರು ಕೆಲಸಕ್ಕೆ ಹೋಗಲು, ಮಕ್ಕಳು ಶಾಲೆಗೆ ಹೋಗಲು ಇರುವ ಏಕೈಕ ಮಾರ್ಗವಾಗಿರುವ ರಸ್ತೆಯನ್ನು ದುರಸ್ತಿ ಮಾಡಲು ಲುಧಿಯಾನ ಜಿಲ್ಲಾಡಳಿತವಾಗಲಿ ಅಥವಾ ರಸೂಲ್ಪುರ್ ಗ್ರಾಮ ಪಂಚಾಯತ್ ಆಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದು ಪಂಚಾಯತ್ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ. ಗ್ರಾಮದ ಜನರು ರಾಜ್ಯ ಸರ್ಕಾರ ಮತ್ತು ಲುಧಿಯಾನ ಆಡಳಿತಕ್ಕೆ ರಸ್ತೆಯನ್ನು ತಕ್ಷಣ ದುರಸ್ತಿ ಮಾಡುವಂತೆ ಮನವಿ ಮಾಡಿದ್ದಾರೆ.