ನವದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಬಾಲಿವುಡ್ ನಟಿ ಹುಮಾ ಖುರೇಷಿ (Huma Qureshi) ಅವರ ಸೋದರ ಸಂಬಂಧಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ದೆಹಲಿಯ (Delhi) ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದೆ.
ಆಸಿಫ್ ಖುರೇಷಿ ಕೊಲೆಯಾದ ವ್ಯಕ್ತಿ. ಉಜ್ವಲ್ (19) ಮತ್ತು ಗೌತಮ್ (18) ಕೊಲೆ ಮಾಡಿದ ಆರೋಪಿಗಳೆಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಗುಂಡೇಟಿಗೆ ಬಲಿ – ವ್ಯಕ್ತಿ ಬಂಧನ
ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ಆಸಿಫ್ ಖುರೇಷಿಯವರ ಮನೆಯ ಮುಂದೆ ಇಬ್ಬರು ಯುವಕರು ತಮ್ಮ ಸ್ಕೂಟರ್ ನಿಲ್ಲಿಸಿದ್ದರು. ಈ ವೇಳೆ ಆಸಿಫ್ ಖುರೇಷಿ ಅವರು ಮನೆಯ ಮುಖ್ಯ ದ್ವಾರದಿಂದ ದೂರ ನಿಲ್ಲಿಸುವಂತೆ ಹೇಳಿದಾಗ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಇಬ್ಬರು ಯುವಕರು ಆಸಿಫ್ ಖುರೇಷಿಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಾಪಾಸ್ ಹೋಗುವಂತೆ ಬೆದರಿಕೆ ಹಾಕಿದ್ದರು. ಬಳಿಕ ಇಬ್ಬರು ಸೇರಿ ಆಸಿಫ್ ಖುರೇಷಿಯವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಇದನ್ನೂ ಓದಿ: ನನಗೆ ಗನ್‌ಮ್ಯಾನ್ ಭದ್ರತೆ ನೀಡಿ: ಎಸ್‌ಐಟಿ ಮುಂದೆ ದೂರುದಾರನಿಂದ ಬೇಡಿಕೆ
ಘಟನೆಯ ಕುರಿತು ಆಸಿಫ್ ಖುರೇಷಿ ಅವರ ಪತ್ನಿ ಮಾತನಾಡಿ, ಇಬ್ಬರು ಯುವಕರು ನಮ್ಮ ಮನೆಯ ಮುಂದೆ ಸ್ಕೂಟರ್ ನಿಲ್ಲಿಸಿದರು. ಈ ವೇಳೆ ನನ್ನ ಪತಿ ವಾಹನವನ್ನು ದೂರ ನಿಲ್ಲಿಸುವಂತೆ ಅವರ ಬಳಿ ಕೇಳಿಕೊಂಡರು. ಆದರೆ ಅವರು ನನ್ನ ಪತಿಯನ್ನು ನಿಂದಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಕಣ್ಣೀರು ಹಾಕಿದ್ದಾರೆ.
ಹುಮಾ ಖುರೇಷಿ ಅವರ ತಂದೆ ಸಲೀಮ್ ಖುರೇಷಿ ಅವರು ಸೋದರಳಿಯನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.