ಕಿತ್ತು ಹೋಗ್ತಿದೆ ಹುಳಿಮಾವು ಕೆರೆಯ ಒಡ್ಡು – ನಿದ್ದೆಯಿಲ್ಲದೇ ರಾತ್ರಿ ಕಳೆದ ಸಾವಿರಾರು ಮಂದಿ

Public TV
3 Min Read

ಬೆಂಗಳೂರು: ಸಿಲಿಕಾನ್ ಸಿಟಿ ಹೊರ ವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹುಳಿಮಾವು ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದೆ. ಸ್ಥಳಿಯರು ಆತಂಕದಲ್ಲಿದ್ದರೆ, ರಾತ್ರಿ ಒಡ್ಡು ಹಾಕಿ ಹೋಗಿದ್ದ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಇನ್ನೂ ಇತ್ತ ಬಂದಿಲ್ಲ.

ಜೆಸಿಬಿ ಮೂಲಕ ಬಿಡಿಎ ಕಂಟ್ರಾಕ್ಟರ್ ಕಾರ್ತಿಕ್ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಕೆರೆ ಒಡೆದಿದ್ದು, ಸತತ ಐದಾರು ಗಂಟೆಗಳ ಕಾರ್ಯಾಚರಣೆ ಮಾಡಿ ಕೆರೆ ಒಡೆದ ಸ್ಥಳದಲ್ಲಿ ಮಣ್ಣು ಹಾಕಿ ರಾತ್ರಿ 8 ಗಂಟೆ ವೇಳೆಗೆ ನೀರಿಗೆ ತಡೆ ಒಡ್ಡಲಾಯ್ತು. ಇದರಿಂದ ಮುಂದಾಗಬಹುದಾಗಿದ್ದ ಇನ್ನಷ್ಟು ಅನಾಹುತ ತಪ್ಪಿತು. ಆದರೆ ಈಗ ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಇದನ್ನೂ ಓದಿ:ಕೆರೆಯ ಕಟ್ಟೆ ಒಡೆದು ನೂರಾರು ಮನೆಗಳಿಗೆ ನುಗ್ಗಿದ ನೀರು

ಹುಳಿಮಾವು ಕೆರೆ ಸುತ್ತಮುತ್ತಲ ಶಾಂತಿನಿಕೇತನ, ಕೃಷ್ಣನಗರ ಸೇರಿ ಆರಕ್ಕೂ ಹೆಚ್ಚು ಬಡಾವಣೆಗಳು ನಮ್ಮನಾಳುವ ಮಂದಿ ಸೃಷ್ಟಿಸಿದ ಕೃತಕ ಪ್ರವಾಹದಲ್ಲಿ ಸಿಲುಕಿವೆ. ಈ ಮಧ್ಯೆ ನೀರಿನಲ್ಲಿ ಬಂದ ಹಾವುಗಳ ಕಾಟವೂ ಹೆಚ್ಚಾಗಿದ್ದು, ಜನರು ಆತಂಕದಲ್ಲಿದ್ದಾರೆ. ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಸೊಂಟ ಮಟ್ಟಕ್ಕೆ ನೀರು ಆವರಿಸಿದೆ. ಅಪಾರ್ಟ್ ಮೆಂಟ್‍ಗಳು, ಅಂಗಡಿಗಳು ಸಂಪೂರ್ಣ ಜಲಾವೃತವಾಗಿವೆ. ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳು ನೀರಲ್ಲಿ ಮುಳುಗಿವೆ. ಓಡಾಡಲು ಜಾಗವೇ ಇಲ್ಲದಂತೆ ರಸ್ತೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿಯುತ್ತಿದೆ. ಮನೆಯಲ್ಲಿದ್ದ ಪಾತ್ರೆ ಪಗಡಿ, ಫ್ರಿಡ್ಜ್, ದವಸ ಧಾನ್ಯ ಸೇರಿ ನಿತ್ಯದ ವಸ್ತುಗಳು ಬೀದಿಪಾಲಾಗಿವೆ. ಆರು ಬಡಾವಣೆಗಳ ಸಾವಿರಾರು ಜನ ರಾತ್ರಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದಾರೆ. ಮಲಗಲು, ಕುಳಿತುಕೊಳ್ಳಲು ಜಾಗವಿಲ್ಲದೇ ರಾತ್ರಿಯಿಡೀ ಒದ್ದಾಡಿದ್ದಾರೆ.

ಬೀಳೆಕಳ್ಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿ ರೋಗಿಗಳು ಪರದಾಡಿದ್ದಾರೆ. ಹರಿವ ನೀರಿನ ಮಧ್ಯೆಯೇ ರಬ್ಬರ್ ಬೋಟ್‍ಗಳ ಮೂಲಕ ರೋಗಿಗಳನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ನೀರಲ್ಲಿ ಕೊಚ್ಚಿ ಹೋಗ್ತಿದ್ದ ಮೂರು ನಾಯಿಗಳನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಕೃಷ್ಣಲೇಔಟ್‍ನಲ್ಲಿ ನಡೆದಿದೆ. ಮೂರು ನಾಯಿಗಳು ರಭಸದಿಂದ ಹರಿಯುತ್ತಿದ್ದ ನೀರಲ್ಲಿ ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು, ನಾಯಿಗಳನ್ನು ಹಿಡಿದು ತಳ್ಳು ಗಾಡಿಯಲ್ಲಿರಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ:ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

ಸುಮಾರು 140 ಎಕರೆ ವಿಸ್ತೀರ್ಣದ ಕೆರೆ ಇತ್ತೀಚೆಗೆ ಸುರಿದ ಮಳೆಯ ಕಾರಣ ತುಂಬಿತ್ತು. ಇದೀಗ ಹುಳಿಮಾವು ಕೆರೆಯ ಅರ್ಧದಷ್ಟು ನೀರು ಖಾಲಿ ಆಗಿದೆ. ಕೃತಕ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರನ್ನು ಸಾಯಿ ಬಾಬಾ ಟೆಂಪಲ್, ಟೆನಿಸ್ ಕೋರ್ಟ್ ಹಾಗೂ ಮ್ಯಾರೇಜ್ ಹಾಲ್‍ಗಳಲ್ಲಿ ಸಂತ್ರಸ್ತರ ಶಿಬಿರ ತೆರೆದು ಇರಿಸಲಾಗಿದೆ.

ಆರ್.ಆರ್ ಲೇಔಟ್‍ನ ರಸ್ತೆಯ ಕೆಳಮಹಡಿಯಲ್ಲಿ ನಿಂತಿರೊ ಕೆರೆ ನೀರು ತೆರವು ಕಾರ್ಯಚರಣೆ ಮುಂದುವರಿದಿದೆ. ಕೆರೆ ನೀರು ನುಗ್ಗಿರೊ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರು ಮಾಯವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ಮುಂದುವರಿಸಿದ್ದಾರೆ. ಸ್ವಚ್ಚತಾ ಕಾರ್ಯಕ್ಕಾಗಿ 102 ಪೌರಕಾರ್ಮಿಕರ ನೇಮಕ ಮಾಡಲಾಗಿದೆ. ಪ್ರತಿ ಲೇಔಟ್‍ಗೂ 12 ಜನ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಹಾಗೆಯೇ ಮಾರ್ಷಲ್‍ಗಳಿಗೆ ಸ್ವಚ್ಚತಾ ಕಾರ್ಯದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

ಕೆರೆ ನೀರು ನಿಂತಿರೊ ಹಿನ್ನೆಲೆಯಲ್ಲಿ ಕರೆಂಟ್ ಜಲಾವೃತ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪವರ್ ಕಟ್ ಮಾಡಲಾಗಿದೆ. ವಿದ್ಯುತ್ ಅವಘಡ ಸಂಭವಿಸದಿರಲಿ ಎಂದು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

ಈ ಅನಾಹುತಕ್ಕೆ ಹೊಣೆ ಹೋರಲು ಯಾರು ಸಿದ್ಧರಿಲ್ಲ. ನಮಗೆ ಕಾಮಗಾರಿಯ ಬಗ್ಗೆ ಮಾಹಿತಿಯೇ ಗೊತ್ತಿರಲಿಲ್ಲ ಎಂದು ಕಾರ್ಪೋರೇಟರ್ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಮೇಯರ್ ಅಂತೂ ಯಾಕೆ ಈ ಅನಾಹುತ ಆಯ್ತು ಅನ್ನೋದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೇ, ಇದು ಕಿಡಿಗೇಡಿಯ ಕೃತ್ಯ ಎಂದು ಹೇಳುತ್ತಿದ್ದಾರೆ. ಜೊತೆಗೆ ಹಾನಿಯಾದ ಮನೆಗಳಿಗೆ 3800 ರೂಪಾಯಿಗಳ ಪುಡಿಗಾಸಿನ ನೆರವು ಘೋಷಿಸಿದ್ದಾರೆ. ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ಅವರು ಕಾಂಟ್ರಾಕ್ಟರ್ ವಿರುದ್ಧ ಕ್ರಮದ ಮಾತನಾಡಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *