ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಮೇಲೆ ಅಕ್ರಮವಾಗಿ ಎದ್ದಿರುವ ಬೃಹತ್ ಕಟ್ಟಡ ಯಾರದ್ದು?- ಹೆಚ್‌ಡಿಕೆ ಪ್ರಶ್ನೆ

Public TV
2 Min Read

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಾನ್ಯತಾ ಟೆಕ್ ಪಾರ್ಕ್ ಬಳಿ ಭೇಟಿ ನೀಡಿದ್ದು ನೆರೆ ಮತ್ತು ಮಳೆ ಅನಾಹುತ ವೀಕ್ಷಿಸೋದಕ್ಕಾ? ಅಥವಾ ರಾಜಕಾಲುವೆ (Rajakaluve) ಒತ್ತುವರಿದಾರನ್ನು ರಕ್ಷಣೆ ಮಾಡೋದಕ್ಕಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು (H.D Kumaraswamy) ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡಿ.ಕೆ ಶಿವಕುಮಾರ್ ಅವರು ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಬಳಿಗೆ ಭೇಟಿ ಕೊಟ್ಟು ಮಳೆ, ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿರುವುದೇನೋ ಸರಿ. ಆದರೆ, ಅವರ ಭೇಟಿ ಪ್ರವಾಹ ವೀಕ್ಷಣೆಗೋ ಅಥವಾ ರಾಜಕಾಲುವೆ ರಕ್ಕಸರ ರಕ್ಷಣೆಗೋ..? ಈ ಬಗ್ಗೆ ಬೆಂಗಳೂರು ಮಹಾಜನತೆಗೆ ಬೆಂಗಳೂರು ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡ ತೆರವಿಗೆ ಸೂಚನೆ: ಡಿಕೆಶಿ

ಡಿಸಿಎಂ ಅವರು ಪಾದಸ್ಪರ್ಶ ಮಾಡಿದ್ದ ರಾಜಕಾಲುವೆ ಪುನೀತವಾಗಿರಬೇಕು. ಪಾಪ.. ಅದೇ ರಾಜಕಾಲುವೆ ಮೇಲೆ ಬೃಹದಾಕಾರವಾಗಿ ಎದ್ದು ನಿಂತಿರುವ ‘ಭಾರೀ ಆಸಾಮಿ’ಯೊಬ್ಬರ ಕಟ್ಟಡ ಅವರ ಕಣ್ಣಿಗೆ ಕಾಣಲಿಲ್ಲವೆ? ರಾಜಾರೋಷವಾಗಿ ರಾಜಕಾಲುವೆಯನ್ನು ಮುಕ್ಕಿ ತಿಂದಿರುವ ಆಸಾಮಿಯ ಬಗ್ಗೆ ಅವರು ಚಕಾರವನ್ನೇ ಎತ್ತಲಿಲ್ಲ.‌ ಕೊನೆಪಕ್ಷ ಅವರ ಹೆಸರನ್ನೂ ಹೇಳಲಿಲ್ಲ ಎಂದು ಡಿಕೆಶಿಯವರ ಕಾಲೆಳೆದಿದ್ದಾರೆ.

ರಾಜಕಾಲುವೆಗಳ ಮೇಲೆ ಐಷಾರಾಮಿ ಸೌಧಗಳನ್ನು ಕಟ್ಟಿಕೊಂಡು ಕೋಟಿ ಕೋಟಿ ದುಡಿಯುತ್ತಿರುವ ರಾಜಕಾಲುವೆ ರಕ್ಕಸರ ವಿರುದ್ಧ ಕ್ರಮ ಜರುಗಿಸುವ ದಮ್ಮು ತಾಕತ್ತು ನಿಮಗೆ ಇದೆಯಾ ಡಿ.ಕೆ. ಶಿವಕುಮಾರ್ ಅವರೇ? ಹೋಗಲಿ, ಅಂಥವರ ವಿರುದ್ಧ ಕ್ರಮ ಜರುಗಿಸಲು ನಿಮ್ಮ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ, ಅಧಿಕಾರ ನೀಡಿದ್ದೀರಾ? ಒಂದು ವೇಳೆ ನೀಡಿದ್ದರೆ ಆ ಅಕ್ರಮ ಕಟ್ಟಡಗಳು ಇನ್ನೂ ಯಾಕೆ ಹಾಗೆಯೇ ಇವೆ? ಎಂಬುದನ್ನು ನೀವು ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ನೀವು ಕುರ್ಚಿ ಮೇಲೆ ಕೂತು ಎರಡು ವರ್ಷವೇ ಆಯಿತು. ಅದೆಷ್ಟೋ ಬಾರಿ ಸಾಯಿ ಬಡಾವಣೆ ಮುಳುಗಿದ್ದೂ ಆಯಿತು, ತೇಲಿದ್ದೂ ಆಯಿತು! ನಿಮ್ಮಿಂದ ಆಗಲಿ ಅಥವಾ ಕಾಂಗ್ರೆಸ್ ಸರ್ಕಾರದಿಂದ ಆಗಲಿ ಯಾವುದೇ ಪರಿಹಾರ ಸಿಗಲಿಲ್ಲ! ಬಡಾವಣೆಯ ಜನರು ನರಳುತ್ತಿರುವುದು ಮಾತ್ರ ತಪ್ಪಿಲ್ಲ. ಈ ಅಸಡ್ಡೆ ಯಾಕೆ? ಇವರೆಲ್ಲ ತೆರಿಗೆ ಕಟ್ಟುತ್ತಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಮಳೆ | ಮೇ 30, 31 ರಂದು DC , CEO ಸಭೆ ಕರೆದ ಸಿಎಂ

Share This Article