ಕಷ್ಟ ಹೇಳಿಕೊಳ್ಳುವಾಗ ಸಿಎಂ ಸತ್ಯಾಂಶ ಹೇಳಿದ್ರು: ಹೆಚ್‍ಡಿಕೆ

Public TV
2 Min Read

-ಚುನಾವಣೆ ನಡೆದ್ರೆ ಯಾರಿಗೂ ಬಹುಮತ ಸಿಗಲ್ಲ
-ಬಿಜೆಪಿಯನ್ನ ತಬ್ಬಿಕೊಳ್ಳಲು ನಾನ್ಯಾಕೆ ಹೋಗಲಿ

ಬೆಂಗಳೂರು: ಹುಬ್ಬಳ್ಳಿಯ ಪಕ್ಷದ ಮುಖಂಡರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಕಷ್ಟ ಹೇಳಿಕೊಳ್ಳುವಾಗ ಸತ್ಯಾಂಶ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಲವು ವಿಷಯಗಳನ್ನು ಹಂಚಿಕೊಂಡರು. ಇದೇ ವೇಳೆ ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಒಂದು ಕಡೆ ಮಳೆ ಹೆಚ್ಚಾದ್ರೆ, ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಬಿಜೆಪಿ ಸರ್ಕಾರ ರಚನೆಯಾದಾಗ ಸಂಪುಟ ರಚನೆ ಆಗಲಿಲ್ಲ. ಯಡಿಯೂರಪ್ಪನವರು ಏಕಾಂಗಿಯಾಗಿಯೇ ಓಡಾಡಿದರು. ಕೇಂದ್ರ ಸರ್ಕಾರ ಸಹ ಸತಾಯಿಸಿ ಒಂದಿಷ್ಟು ಹಣವನ್ನು ಬಿಡುಗಡೆ ಮಾಡಿತು. ಈ ಹಣದ ಸದ್ಬಳಕೆ ಆಗಬೇಕಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಜನರು ತುಂಬಾ ಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾವಣೆ ಬಂದ್ರೆ ಜನರು ಮತ್ತಷ್ಟು ತೊಂದರೆ ಅನುಭವಿಸುವಂತಾಗುತ್ತದೆ. ಹಾಗಾಗಿ ಚುನಾವಣೆ ಬರೋದು ಬೇಡ, ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ನೀಡೋಣ ಎಂದು ಹೇಳಿದ್ದೇನೆ. ಮಾಧ್ಯಮಗಳಲ್ಲಿ ಜೆಡಿಎಸ್ ಶಾಸಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ ಎಂದು ನೋಡಿದೆ. ಹೋಗುವವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರೆಬೆಲ್ ಶಾಸಕರ ವಿರುದ್ಧ ಗುಡುಗಿದರು.

ಬಹುಮತ ಬರಲ್ಲ: ಉಪ ಚುನಾವಣೆ ನಡೆದರೆ ಯಾವ ಪಕ್ಷಕ್ಕೂ ಬರಲ್ಲ. ಹಾಗಾಗಿ ಚುನಾವಣೆ ಬೇಡ ಎಂದು ಹೇಳಿದ್ದೇನೆ. ಒಂದೇ ಪಕ್ಷಕ್ಕೆ ಜನರು ಯಾವ ಕಾರಣಕ್ಕೂ ವೋಟ್ ಹಾಕಲ್ಲ. ಫಲಿತಾಂಶ ಬಂದ ನಂತರ ಮತ್ತೆ ಮೂರು ಪಕ್ಷಗಳು ಯಾರ ಜೊತೆ ಹೋಗಬೇಕೆಂದು ಓಡಾಡಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿಯ ಸದ್ಯದ ಪರಿಸ್ಥಿತಿಯನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮತ ಕೇಳಲು ಭಯಪಡುತ್ತಿದ್ದರು. ಮತ ಕೇಳದಿದ್ದರೂ ಜನರು ಕಾಂಗ್ರೆಸ್ ಗೆ ಮತ ನೀಡಿದರು. ಉತ್ತುಂಗದಲ್ಲಿದ್ದ ಬಿಜೆಪಿಯನ್ನು ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಜನ ವಿರೋಧ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾನ್ಯಾಕೆ ಬಿಜೆಪಿಯನ್ನು ತಬ್ಬಿಕೊಳ್ಳಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಇದನ್ನೂ ಓದಿ: ಅಪ್ಪ, ಮಕ್ಕಳು ಈಗ ಸುಧಾರಿಸಿದ್ದಾರೆ – ಸಿಎಂ ಬಿಎಸ್‍ವೈ

ಯಡಿಯೂರಪ್ಪ ಸತ್ಯ ಹೇಳಿದ್ರು: ಇಂದು ಯಾರು ಯಾರನ್ನು ನಂಬದ ಸ್ಥಿತಿಯಲ್ಲಿದ್ದೇವೆ. ಯಡಿಯೂರಪ್ಪನವರು ತಮ್ಮ ಮುಖಂಡರ ಮುಂದೆ ಮಾತನಾಡಿದ್ದ ವಿಡಿಯೋ ಇಂದು ವೈರಲ್ ಆಗಿದೆ. ಬಿಜೆಪಿಯವರೇ ಆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಅನರ್ಹರನ್ನ ಮುಂಬೈನಲ್ಲಿಟ್ಟಿದ್ದು ಶಾ – ಕಾಂಗ್ರೆಸ್‍ಗೆ ಸಿಕ್ತು ಯಡಿಯೂರಪ್ಪ ಆಡಿಯೋ ಅಸ್ತ್ರ

ಪಕ್ಷದ ಮುಖಂಡರ ಸಭೆಯಲ್ಲಿ ಯಡಿಯೂರಪ್ಪನವರು ತಮ್ಮ ಕಷ್ಟವನ್ನು ಹೇಳಿಕೊಳ್ಳುವಾಗ ಸತ್ಯಾಂಶ ಹೇಳಿದ್ರು. ಮೈತ್ರಿ ಸರ್ಕಾರ ಬೀಳಿಸಿಲ್ಲ ಅಂದವರೇ ಇಂದು ಒಪ್ಪಿಕೊಂಡಿರುವ ವಿಡಿಯೋ ಎಲ್ಲರೆದರು ಬಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರೇ 15 ಶಾಸಕರನ್ನು ಮುಂಬೈನಲ್ಲಿ ಇರಿಸಿದ್ದರು ಯಡಿಯೂರಪ್ಪನವರೇ ಹೇಳಿದ್ದಾರೆ. ಈ ವಿಡಿಯೋ ಬಗ್ಗೆ ಯಡಿಯೂರಪ್ಪನವರು ಉತ್ತರಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಆರ್.ಅಶೋಕ್, ಸಿಎಂಗೂ ಹೊಂದಾಣಿಕೆಯೇ ಆಗ್ತಿಲ್ಲ: ಹೆಚ್‍ಡಿಕೆ

ಜನಪರ ಸರ್ಕಾರಕ್ಕೆ ಬೆಂಬಲ: ನಾನು ಎಲ್ಲಿಯೂ ಬಿಜೆಪಿ ಜೊತೆ ಹೋಗುತ್ತೇನೆ ಎಂದು ಹೇಳಿಲ್ಲ. ಸಿಎಂ ಯಾರು ಬೇಕಾದ್ರೂ ಆಗಲಿ. ನಾನು ಹೇಳಿದ ರೀತಿಯಲ್ಲಿ ಜನರಿಗೆ ಪರಿಹಾರ ಹೋಗಬೇಕು. ಜನಪರ ಸರ್ಕಾರ ಮತ್ತು ಜನಪರ ಮುಖ್ಯಮಂತ್ರಿಗಳಿಗೆ ನನ್ನ ಬೆಂಬಲವಿದೆ ಎಂದರು. ಇದನ್ನೂ ಓದಿ: ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ- ಬಿಎಸ್‍ವೈ

Share This Article
Leave a Comment

Leave a Reply

Your email address will not be published. Required fields are marked *