ಮತ್ತೆ ಚರ್ಚೆಗೆ ಗ್ರಾಸವಾದ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ

Public TV
1 Min Read

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮೂರುಸಾವಿರ ಮಠ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಠದ ಉತ್ತರಾಧಿಕಾರಿ ವಿಷಯ ಮತ್ತೀಗ ಮುನ್ನೆಲೆಗೆ ಬಂದಿದೆ. ರಾಜಕಾರಣಿಗಳು ತಮ್ಮ ಗೊಂದಲವನ್ನ ಮುಂದುವರಿಸುತ್ತಿದ್ದು ಉತ್ತರಾಧಿಕಾರಿ ವಿಷಯಕ್ಕೆ ಉತ್ತರವೇ ಸಿಗದಾಗಿದೆ.

ಸದ್ಯ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳಿದ್ದಾರೆ. ಇವರೇ ಮನಸ್ಸು ಮಾಡಿ ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳನ್ನ ಉತ್ತರಾಧಿಕಾರಿ ಎಂದು ನೇಮಕ ಮಾಡಿಕೊಂಡಿದ್ದರು. ಈ ಮೊದಲು 2014ರಲ್ಲಿ ಇದಕ್ಕೆ ಕೆಲವರು ವಿರೋಧ ಮಾಡಿ ಗೊಂದಲ ಸೃಷ್ಟಿ ಮಾಡಿದ್ದರು. ಅಂದಿನಿಂದಲೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಇತ್ತೀಚೆಗೆ ಕೆಲವು ಸ್ವಾಮೀಜಿಗಳು ಸಿಎಂ ಅವರನ್ನು ಭೇಟಿ ಮಾಡಿ ಉತ್ತರಾಧಿಕಾರಿಯಾಗಿ ದಿಂಗಾಲೇಶ್ವರ ಸ್ವಾಮೀಜಿಯವರನ್ನ ನೇಮಕ ಮಾಡುವಂತೆ ಚರ್ಚೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ ಉನ್ನತ ಸಮಿತಿ ಮುಂದೆ ಬಂದಿಲ್ಲವೆಂದು ಮಠದ ಉನ್ನತ ಸಮಿತಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿರುವುದು ಮತ್ತೆ ಉತ್ತರಾಧಿಕಾರಿ ವಿಷಯ ಮುನ್ನೆಲೆಗೆ ಬಂದಿದೆ.

ಮಠದ ಉತ್ತರಾಧಿಕಾರಿ ವಿಷಯವೇ ಇಂದು ಅಪ್ರಸ್ತುತ. ಈ ವಿಷಯದಲ್ಲಿ ನನ್ನ ಹೆಸರನ್ನು ಸುಖಾಸುಮ್ಮನೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈಗಿರುವ ಸ್ವಾಮೀಜಿಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ಕೊಡುತ್ತ ನಾವು ಭಕ್ತರಾಗಿ ಮುಂದುವರಿಯುತ್ತೇವೆ. ಅಲ್ಲದೇ ಉತ್ತರಾಧಿಕಾರಿ ಬದಲಾವಣೆ ವಿಚಾರದಲ್ಲಿ ನನ್ನ ಹೆಸರು ತರುತ್ತಿರುವುದು ಸರಿಯಲ್ಲವೆಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಮೂರುಸಾವಿರ ಮಠದ ಹಾಲಿ ಶ್ರೀಗಳ ಅಭಿಲಾಷೆಯನ್ನ ಈಡೇರಿಸಲು ಈಗಲೂ ಹಿಂದೇಟು ಹಾಕಲಾಗುತ್ತಿದೆ. ಶ್ರೀ ದಿಂಗಾಲೇಶ್ವರ ಶ್ರೀಗಳನ್ನ ಕೆಲವರು ಮೊದಲಿಂದಲೂ ವಿರೋಧ ಮಾಡುತ್ತ ಬರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪುರಾತನ ಇತಿಹಾಸ ಹೊಂದಿರುವ ಶ್ರೀ ಮಠಕ್ಕೆ ಬಾಲೆಹೊಸೂರಿನ ಶ್ರೀಗಳು ಬರುವುದನ್ನೇ ಕಾಯುತ್ತಿರುವ ಹಾಲಿ ಶ್ರೀಗಳ ಬಯಕೆ ಯಾವಾಗ ಈಡೇರತ್ತೋ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *