ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

Public TV
2 Min Read
Prahlad Joshi and ashwini vaishnaw

-ಸೆಪ್ಟೆಂಬರ್ ತಿಂಗಳಿಂದ ಪ್ರತಿ ವಾರ ವಿಶೇಷ ರೈಲು ಸಂಚಾರ

ನವದೆಹಲಿ: ಕರ್ನಾಟಕಕ್ಕೆ (Karnataka) ಅನೇಕ ರೈಲ್ವೆ ಯೋಜನೆಗಳ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಇದೀಗ ಗಣೇಶ ಹಬ್ಬದ ವೇಳೆ ಮತ್ತೊಂದು ವಿಶೇಷ ಕೊಡುಗೆ ನೀಡಿದ್ದು, ಹುಬ್ಬಳ್ಳಿ-ಜೋಧಪುರ್ (Hubli-Jodhpur) ನೇರ ರೈಲು ಸಂಚಾರಕ್ಕೆ ಅಸ್ತು ಎಂದಿದೆ.

ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲು ಸೆಪ್ಟೆಂಬರ್ ತಿಂಗಳಿನಿಂದಲೇ ಸಂಚಾರ ಪ್ರಾರಂಭಿಸಲಿದೆ. ಪ್ರಸ್ತುತ ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿಯತಕಾಲಿಕವಾಗಿ ಪರಿವರ್ತನೆಗೊಳಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭರವಸೆ ನೀಡಿದ್ದಾರೆಂದು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿಳಿಸಿದ್ದಾರೆ.ಇದನ್ನೂ ಓದಿ: ನಗರದ ಹಲವೆಡೆ ನಾಳೆ, ನಾಳಿದ್ದು ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ-ಜೋಧಪುರ್ ನೂತನ ರೈಲು (ಸಂಖ್ಯೆ: 07359) ಹುಬ್ಬಳ್ಳಿಯಿಂದ ಸಂಜೆ 7:30ಕ್ಕೆ ತೆರಳಿ BGKT (ಭಗತ ಕಿ ಕೋಟಿ)ಗೆ ಬೆಳಿಗ್ಗೆ 5:30ಕ್ಕೆ ತಲುಪಲಿದೆ. ಸದ್ಯ ಪ್ರತಿ ರವಿವಾರ ಈ ರೈಲು ಸಂಚಾರವಿರಲಿದ್ದು, ಸೆಪ್ಟೆಂಬರ್ 28ರಿಂದ ಸಂಚಾರ ಆರಂಭಿಸಲಿದೆ.

ಟಿಕೆಟ್ ಬುಕಿಂಗ್ ಶುರು:
ನೂತನವಾಗಿ ಸಂಚಾರ ಆರಂಭವಾಗುತ್ತಿರುವ ಹುಬ್ಬಳ್ಳಿ-ಜೋಧಪುರ್ ರೈಲ್ವೆ ಸಂಚಾರಕ್ಕೆ ಪ್ರಯಾಣಿಕರಿಂದ ಈಗಾಗಲೇ ಟಿಕೆಟ್ ಬುಕಿಂಗ್ ಸಹ ಶುರುವಾಗಿದೆ. ರೈಲ್ವೆ ಇಲಾಖೆ ಸೆಪ್ಟೆಂಬರ್ 28, ಅಕ್ಟೋಬರ್ 05, ಅಕ್ಟೋಬರ್ 12, ಅಕ್ಟೋಬರ್ 19, ಅಕ್ಟೋಬರ್ 26ರಂದು ಪ್ರಯಾಣಕ್ಕೆ ಮುಂಗಡ ಟಿಕೆಟ್ ಬುಕಿಂಗ್ ಆರಂಭಿಸಿದೆ.

ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆ ಈಡೇರಿಕೆ:
ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದವರಿಂದ ಅನೇಕ ದಿನಗಳಿಂದಲೂ ಬಹು ಬೇಡಿಕೆಯಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ ಇದೀಗ ಸಾಕಾರಗೊಂಡಿದೆ.

Prahlad Joshi and ashwini vaishnaw 1

ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸೇರಿದಂತೆ ರಾಜ್ಯಕ್ಕೆ ವಿವಿಧ ರೈಲ್ವೆ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿರುವ ಸಚಿವ ಜೋಶಿ ಅವರು, ಇದೀಗ ಹುಬ್ಬಳ್ಳಿ-ಜೋಧಪುರ್ ವಿಶೇಷ ರೈಲು ಸಂಚಾರ ಆರಂಭಿಸುವಲ್ಲಿ ಸಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನ ಸೆಳೆದು ರೈಲು ಸಂಚಾರವನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದಾರೆ.

ಬಹುಜನರ ಬೇಡಿಕೆಯಂತೆ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿ-ಜೋಧಪುರ್ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿ, ನಿರಂತರವಾಗಿ ಗಮನ ಸೆಳೆಯುತ್ತಲೇ ಇದ್ದರು. ಜೋಶಿ ಅವರ ಒತ್ತಾಸೆ, ಮನವಿಗೆ ಸ್ಪಂದಿಸಿ ಸಚಿವ ಅಶ್ವಿನಿ ವೈಷ್ಣವ್ ಅವರು ಹುಬ್ಬಳ್ಳಿ-ಜೋಧ್‌ಪುರಕ್ಕೆ ನೇರ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ.

ರೈಲ್ವೆ ಸಚಿವರಿಗೆ ಜೋಶಿ ಧನ್ಯವಾದ:
ತಮ್ಮ ಮನವಿ, ಒತ್ತಾಸೆಗೆ ಸ್ಪಂದಿಸಿ ಉತ್ತರ ಕರ್ನಾಟಕ ಭಾಗದ ಅದರಲ್ಲೂ ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೆ ಯೋಜನೆ-ಸೌಲಭ್ಯಗಳಿಗೆ ವಿಶೇಷ ಆಸಕ್ತಿ ತೋರಿ ಅನುಮೋದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.ಇದನ್ನೂ ಓದಿ: ಹದಗೆಟ್ಟ ಅನಾರೋಗ್ಯ.. ಉಲ್ಬಣಗೊಂಡ ಕ್ಯಾನ್ಸರ್: ಸಹಾಯ ಕೇಳಿ ಕಣ್ಣೀರಿಟ್ಟ KGF ಚಾಚಾ

Share This Article