– ಮೋದಿ, ಶಾಗೆ ಕಾರ್ಯಕರ್ತರು ಟ್ವೀಟ್
ಹುಬ್ಬಳ್ಳಿ: ಸಚಿವ ಸಿ.ಎಸ್ ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್-ಬಿಜೆಪಿಯಲ್ಲೀಗ ಭಿನ್ನಮತ ಸೃಷ್ಟಿಸಿದೆ.
ಬಿಜೆಪಿಯಿಂದ ಎಸ್.ಐ ಚಿಕ್ಕನಗೌಡ್ರು ಮತ್ತು ಎಂ.ಆರ್ ಪಾಟೀಲ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾಗಿದ್ರೂ ಚಿಕ್ಕನಗೌಡ್ರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಪಾಟೀಲ್ ಈಗ ಕಮಲ ನಾಯಕರ ಕೈಗೆ ಸಿಗ್ತಿಲ್ಲ. ಇತ್ತ ಶಿವಳ್ಳಿ ಪತ್ನಿ ಕುಸುಮಾಗೆ ಟಿಕೆಟ್ ಕೊಟ್ಟಿರುವುದು ಕಾಂಗ್ರೆಸ್‍ನಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಿಂದ 19 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಭಿನ್ನಮತೀಯ ಶಿವಾನಂದ ಬೆಂಥೂರ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿರ್ಧರಿಸಿದ್ದಾರೆ.
ಮಾಜಿ ಸಿಎಂ ಶೆಟ್ಟರ್ ಈ ಬಗ್ಗೆ ಪ್ರತಿಕ್ರಿಯಿಸಿ ಅಸಮಾಧಾನ ಬಗೆಹರಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಎಸ್ಐ ಚಿಕ್ಕನಗೌಡ್ರು ಹಾಗೂ ಎಂ.ಆರ್ ಪಾಟೀಲ್ ಇಬ್ಬರೂ ಪ್ರಬಲ ಆಕಾಂಕ್ಷಿಗಳಾದ್ರು. ಹಾಗಾಗಿ ಕಳೆದ ಬಾರಿ ಭಾರೀ ಕಡಿಮೆ ಅಂತರದಿಂದ ಸೋತ ಎಸ್ ಐ ಚಿಕ್ಕನಗೌಡರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ ಎಂ.ಆರ್ ಪಾಟೀಲ್ ಅವರು ಟಿಕೆಟ್ ಕೇಳಿದ್ರು. ಆದರೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹಾಗಾಗಿ ಸೂಕ್ತ ಸ್ಥಾನ ಮಾನ ನೀಡೋದಾಗಿ ಭರವಸೆ ನೀಡಿದ್ರೂ ಸಹ ಅವರು ಮಾತ್ರ ನಾಯಕರ ಕೈಗೆ ಸಿಗುತ್ತಿಲ್ಲ. ಇನ್ನೆರಡು ದಿನದಲ್ಲಿ ಎಂ.ಆರ್ ಪಾಟೀಲರನ್ನು ಸಮಾಧಾನಪಡಿಸಿ ಒಗ್ಗಟ್ಟಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದಾರೆ.
ಆದ್ರೆ ಇತ್ತ ಬಿಜೆಪಿ ಕಾರ್ಯಕರ್ತರು ಮಾತ್ರ ಎಮ್.ಆರ್ ಪಾಟೀಲ್ ಅವರಿಗೆ ಟಿಕೆಟ್ ಕೈ ತಪ್ಪಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಮತ್ತು ಅಮಿತ್ ಶಾ ಅವರಿಗೆ ಟ್ವೀಟ್ ಮಾಡಿದ್ದು ಕ್ಷೇತ್ರದಲ್ಲಿ ಉತ್ತಮ ಹೆಸರಿರುವ ಅಭ್ಯರ್ಥಿಗೆ ರಾಜ್ಯ ನಾಯಕರು ಟಿಕೆಟ್ ಕೊಡುತ್ತಿಲ್ಲ. ದಯಮಾಡಿ ಅರ್ಹ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದಾರೆ.