ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ!

Public TV
1 Min Read

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ತೀವ್ರ ಪೈಪೋಟಿ ಶುರುವಾಗಿದೆ. ಹುಬ್ಬಳ್ಳಿ ಧಾರವಾಡ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದೊಳಗೆ ಪೈಪೋಟಿ ಶುರುವಾಗಿದ್ದು, ಒಟ್ಟು 13 ಜನ ಆಕಾಂಕ್ಷಿಗಳು ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ.

ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಿಕ್ಕಾಟ ಶುರುವಾದ ಪರಿಣಾಮ 13 ಜನ ಆಕಾಂಕ್ಷಿಗಳ ಪೈಕಿ 5 ಹೆಸರನ್ನು ಜಿಲ್ಲಾ ಕೋರ್ ಕಮಿಟಿ ಅಂತಿಮಗೊಳಿಸಿ ರಾಜ್ಯ ಘಟಕಕ್ಕೆ ಕಳುಹಿಸಿದೆ. ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಧಾರವಾಡದಿಂದ ವೀರೇಶ್ ಅಂಚಟಗೇರಿ, ಸಂಜಯ ಕಪಟಕರ, ಅರವಿಂಗ ಏಗನಗೌಡ, ಶಿವು ಹಿರೇಮಠ, ಪ್ರಕಾಶ್ ಗೋಡಬೋಲೆ, ಹುಬ್ಬಳ್ಳಿಯಿಂದ ಮಲ್ಲಿಕಾರ್ಜುನ್ ಸಾಹುಕಾರ್, ತಿಪ್ಪಣ್ಣ ಮಜ್ಜಗಿ, ಶಿವಾನಂದ ಮುತ್ತಣ್ಣನವರ್, ಸತೀಶ್ ಶೇಖವಾಡಕರ್. ವೀರೇಶ್ ಸಂಗಳದ, ಶಿವು ಮೆಣಸಿನಕಾಯಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಪ್ರಮುಖರಾಗಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಶುರುವಾಗಿದ್ದು ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಲು ಕಾರಣವಾಗಿದೆ. ಅಲ್ಲದೇ ಈ ಬಾರಿ ಮಹಾನಗರ ಘಟಕದ ಅಧ್ಯಕ್ಷ ಸ್ಥಾನ ಧಾರವಾಡದವರಿಗೆ ನೀಡಬೇಕು ಅನ್ನೋ ಒತ್ತಡ ಸಹ ಜೋರಾಗಿ ನಡೀತಿದೆ. ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಹೆಸರನ್ನು ಅಂತಿಮಗೊಳಿಸುವ ಸಂಬಂಧ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕೋರ್ ಕಮಿಟಿ ಸಭೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಪರಿಣಾಮ ಸೋಮವಾರ ಮತ್ತೊಂದು ಸಭೆ ನಡೆಸಿದ್ದರೂ ಅಧ್ಯಕ್ಷ ಸ್ಥಾನ ಅಂತಿಮವಾಗಿಲ್ಲ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ್ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಎಂಎಲ್ ಸಿ ವಿಜಯ ಸಂಕೇಶ್ವರ್, ಪ್ರದೀಪ್ ಶೆಟ್ಟರ್ ಮೂಲಕ ಹಲವರು ಹಿರಿಯ ನಾಯಕರ ಮೇಲೆ ಒತ್ತಡ ಹೇರುತ್ತಿರುವುದಕ್ಕೆ ಅಧ್ಯಕ್ಷ ಸ್ಥಾನದ ಹಂಚಿಕೆ ಮಾಡಲು ವಿಳಂಬವಾಗಿದೆ. ಹೀಗಾಗಿ ಇನ್ನೊಂದು ಸುತ್ತಿನ ಸಭೆ ನಡೆಸಿ ಒಂದು ವಾರದೊಳಗೆ ನೂತನ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *