ಮುಂಬೈ: ವಿಶ್ವವ್ಯಾಪಿ ತಲ್ಲಣ ಮೂಡಿಸಿರುವ ಕೊರೊನಾ ವೈರಸ್ ಹಾವಳಿಯಿಂದ ಚೀನಾ ನಿದಾನವಾಗಿ ಚೇತರಿಕೊಳ್ಳುತ್ತಿದ್ದು, ವೈರಸ್ ಅಟ್ಟಹಾಸಕ್ಕೆ ಬಂದ್ ಆಗಿದ್ದ ಚಿತ್ರ ಮಂದಿರಗಳನ್ನು ನಿಧಾನವಾಗಿ ತೆರೆಯುತ್ತಿವೆ. ಈ ಮಧ್ಯೆ ಸದ್ಯದಲ್ಲೇ ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ಸೂಪರ್ ಹಿಟ್ ಸಿನಿಮಾವೊಂದು ಚೀನಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.
ಹೌದು. ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಚೀನಾದಲ್ಲಿ ಮೊದಲ ಬಾಲಿವುಡ್ ಸಿನಿಮಾ ಬಿಡುಗಡೆ ಆಗುತ್ತಿದೆ. ಅದು ಹೃತಿಕ್ ರೋಷನ್ ಅಭಿನಯದ ಸೂಪರ್ ಹಿಟ್ ‘ಸೂಪರ್ 30’ ಸಿನಿಮಾ ಎಂದು ಮೂಲಗಳಿಂದ ತಿಳಿದುಬಂದಿದೆ. ಕೊರೊನಾ ಅಟ್ಟಹಾಸಕ್ಕೆ ವಿಶ್ವದಲ್ಲಿ ಅನೇಕ ರಾಷ್ಟ್ರಗಳಲ್ಲಿ ಲಾಕ್‍ಡೌನ್ ಜಾರಿಯಲ್ಲಿದೆ. ಸಿನಿಮಾ ಉದ್ಯಮ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಉದ್ಯಮಗಳು ನೆಲಕಚ್ಚಿವೆ.
ಎಲ್ಲೆಡೆ ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಯಾವುದೆ ಚಟುವಟಿಗಳು ನಡೆಯುತ್ತಿಲ್ಲ, ಎಲ್ಲವೂ ಸಂಪೂರ್ಣ ಬಂದ್ ಆಗಿವೆ. ಆದರೆ ಈಗ ಚೇತರಿಕೊಳ್ಳುತ್ತಿರುವ ಚೀನಾದಲ್ಲಿ ಚಿತ್ರ ಮಂದಿರಗಳು ನಿದಾನವಾಗಿ ತೆರೆಯುತ್ತಿದ್ದು, ರಾಷ್ಟ್ರ ಸಹಜ ಸ್ಥಿತಿಗೆ ಬಂದಮೇಲೆ ಕೆಲವು ಹಾಲಿವುಡ್ ಸಿನಿಮಾಗಳನ್ನು ಪ್ರದರ್ಶನ ಮಾಡಲು ಚೀನಾ ಸಜ್ಜಾಗಿದೆ. ಈ ಮಧ್ಯೆ ಚೀನಾದಲ್ಲಿ ಹಿಂದಿ ಸಿನಿಮಾ ಕೂಡ ರಿಲೀಸ್ ಆಗುತ್ತಿರೋದು ವಿಶೇಷವಾಗಿದೆ.
ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ‘ಸೂಪರ್ 30’ ಸಿನಿಮಾ ಚೀನಾದಲ್ಲಿ ರಿಲೀಸ್ ಆಗಲಿದೆ. ‘ಸೂಪರ್ 30’ ಸಿನಿಮಾ ಭಾವನಾತ್ಮಕ ಮತ್ತು ಸ್ಪೂರ್ತಿದಾಯಕ ಅಂಶಗಳನ್ನು ಹೊಂದಿರುವ ಚಿತ್ರವಾಗಿದ್ದು, ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ನಿರೀಕ್ಷೆ ಇದೆ. ಈಗಾಗಲೇ ರಿಲಯನ್ಸ್ ಎಂಟಟೈನ್‍ಮೆಂಟ್ ಗ್ರೂಪ್‍ನ ಸಿಇಒ ಶಿಬಾಶಿಶ್ ಸರ್ಕಾರ್ ಸಿನಿಮಾದ ಸೆನ್ಸಾರ್‍ಶಿಪ್ ಅಪ್ಲೈ ಮಾಡಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಚೀನಾದಲ್ಲಿ ‘ಸೂಪರ್ 30’ ಯಾವಾಗ ತೆರೆಮೇಲೆ ಬರಲಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.