ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್‌ ಆಡುವ ಯುವತಿಗೆ ಬೇಕಿದೆ ಸಹಾಯ

Public TV
2 Min Read

ಬೆಂಗಳೂರು: ಸಾಧಿಸುವ ಛಲ ಇದ್ದರೆ ಯಾವ ಸಮಸ್ಯೆಯೂ ಅಡ್ಡಿಯಾಗುವುದಿಲ್ಲ. ತಮ್ಮ ಸಮಸ್ಯೆಯನ್ನೂ ಮೆಟ್ಟಿ ನಿಂತು ಸಾಧನೆ ಮಾಡುವ ಹಲವರು ನಮ್ಮ‌ಮುಂದೆ ಇದ್ದಾರೆ. ಈ ರೀತಿಯ ಸಾಧಕರ ಸಾಲಿಗೆ ರಾಜ್ಯ ಯುವತಿ ಸೇರ್ಪಡೆಯಾಗಿದ್ದಾರೆ. ಅಂಧತ್ವ (Blind) ಇದ್ದರೂ ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂದು ಕ್ರಿಕೆಟ್ ಆಡಲು ಶುರು ಮಾಡಿದವರು ಇಂದು ಟೀಂ ಇಂಡಿಯಾದ ಮಹಿಳಾ ಅಂಧರ ತಂಡದ (India’s Blind Women’s Cricket Team) ನಾಯಕಿಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿಯ ಹಾದಿಹೊಲ ಗ್ರಾಮದ ವರ್ಷಾ (Varsha) ಅವರಿಗೆ 10ನೇ ತರಗತಿವರೆಗೆ ತನ್ನ ಕೆಲಸ ಮಾಡಿಕೊಳ್ಳುವಷ್ಟು ಕಣ್ಣಿನ ದೃಷ್ಟಿಯಿತ್ತು‌.‌ ಆಗ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವರ್ಷ ಕ್ರೀಡೆಯಲ್ಲೇ ಮುಂದುವರೆಯುವ ಮನಸ್ಸು ಮಾಡಿದ್ದರು. ಆದರೆ ಎಸ್‌ಎಸ್‌ಎಲ್‌ಸಿ (SSLC) ನಂತರ ಸಂಪೂರ್ಣ ದೃಷ್ಟಿ ಕಳೆದುಕೊಂಡರು.

 

ನಂತರ ಬ್ರೈಲ್ ಕಲಿಕೆಗಾಗಿ ಬೆಂಗಳೂರಿಗೆ ಬಂದು ಸದ್ಯ ಪದವಿ‌ ಮುಗಿಸಿರುವ ವರ್ಷ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ‌. ಅಂಧರ ಕ್ರಿಕೆಟ್‌ನಲ್ಲಿ ಕರ್ನಾಟಕದ (Karnataka) ನಾಯಕಿಯಾಗಿದ್ದ ವರ್ಷಾ 2023ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದು ನಾಯಕಿಯಾಗಿ ಈಗಾಗಲೇ ಎರಡು ಸಿರೀಸ್ ಆಡಿದ್ದಾರೆ. IBSA ವರ್ಲ್ಡ್ ಕಪ್ ಫೈನಲ್ ನಲ್ಲಿ‌ ಆಸ್ಟ್ರೇಲಿಯಾವನ್ನ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಭಾಗಶಃ ಕುರುಡು, ರೆಟಿನಾ ಸಮಸ್ಯೆ ಇರುವುದರಿಂದ ದೃಷ್ಟಿ ಸಂಪೂರ್ಣ ಕಡಿಮೆಯಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ದೃಷ್ಟಿ ದೋಷದಿಂದ ಆಡಲು ಸಾಧ್ಯವಾಗಲಿಲ್ಲ. ಸ್ನೇಹಿತೆಯ ಮೂಲಕ ಅಂಧರ ಕ್ರಿಕೆಟ್ ಬಗ್ಗೆ ಗೊತ್ತಾಯಿತು. ಸಂಪೂರ್ಣ ಧ್ವನಿ ಕೇಳಿಸಿಕೊಂಡೆ ಬಾಲ್ ಹಿಟ್ ಮಾಡುವುದನ್ನು ಕಲಿತೆ ಎನ್ನುತ್ತಾರೆ ವರ್ಷಾ.  ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

2019 ರಿಂದ ಕ್ರಿಕೆಟ್ ಆಡುವುದನ್ನು ಅಭ್ಯಾಸ ಮಾಡಿಕೊಂಡ ಇವರಿಗೆ ಕರ್ನಾಟಕ ತಂಡದಲ್ಲಿ ಅವಕಾಶ ಸಿಕ್ಕಿ ನಾಯಕಿಯೂ ಆದರು. ಸತತ ಮೂರ್ನಾಲ್ಕು ವರ್ಷಗಳ ಪರಿಶ್ರಮದಿಂದ ಟೀಮ್ ಇಂಡಿಯಾಗೆ ಆಯ್ಕೆ ಆಗುತ್ತಾರೆ. ಆಯ್ಕೆಯಾದ ಕೆಲ ದಿನಗಳಲ್ಲೇ ತಂಡದ ನಾಯಕಿಯಾಗಿ ಆಯ್ಕೆಯಾಗಿ ಒಂದು ಶತಕ ಸಹ ಸಿಡಿಸಿದ್ದಾರೆ. ಅಷ್ಟೇ ಅಲ್ಲದೇ ಕೇವಲ 13 ಎಸೆತಗಳಲ್ಲಿ 50 ರನ್ ಚಚ್ಚಿ ತಾನು ಅತ್ಯುತ್ತಮ ಆಟಗಾರ್ತಿ ಎಂಬುದನ್ನೂ ನಿರೂಪಿಸಿದ್ದಾರೆ.

ಕ್ರಿಕೆಟ್‌ (Cricket) ಆಡುವಾಗ ವರ್ಷ ಹೆಲ್ಮೆಟ್ ಬಳಸುತ್ತಿರಲಿಲ್ಲ.‌ ಇದರಿಂದ ಕಳೆದ ಪಂದ್ಯದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನೇಪಾಳ ವಿರುದ್ಧ ಕ್ರಿಕೆಟ್ ಸೀರಿಸ್ ಇದೆ. ಆ ಸೀರಿಸ್ ನಲ್ಲಿ ಹೆಲ್ಮೆಟ್ ಧರಿಸಿ ಆಡಬೇಕು ಎಂದು‌ ನಿರ್ಧಾರ ಮಾಡಿದ್ದಾರೆ. ಹೆಲ್ಮೆಟ್ ಜೊತೆಗೆ ಪ್ರೈವೆಟ್‌ ಕಿಟ್ ಸೌಲಭ್ಯ ಸಿಕ್ಕರೆ ಮತ್ತಷ್ಟು ಪರಿಶ್ರಮದೊಂದಿಗೆ ಟೀಮ್‌ ಇಂಡಿಯಾ ಗೆಲ್ಲಿಸಲು ಸಹಾಯ ಆಗುತ್ತದೆ ಎನ್ನುತ್ತಿದ್ದಾರೆ ವರ್ಷಾ. ಜೊತೆಗೆ ಅವರ ತಾಯಿ ಯಶೋಧಾ ಸಹ ಈ ಕ್ರೀಡಾಪಟುಗಳಿಗೆ ಸರ್ಕಾರ ಸಹಾಯ ಮಾಡಬೇಕು ಎಂದು‌ ಮನವಿ‌ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈಗೆ ಮರಳಿರುವುದು ಖುಷಿಯಾಗಿದೆ: ಹಾರ್ದಿಕ್ ಪಾಂಡ್ಯ

ಎಲ್ಲವೂ ಸರಿ ಇದ್ದರೂ ಹಿಂದಡಿ ಇಡುವವರ ನಡುವೆ ವರ್ಷಾ ದೇಶಕ್ಕಾಗಿ‌ ನಾನು ಆಡುತ್ತೇನೆ ಎನ್ನುತ್ತಿದ್ದಾರೆ. ತಮಗೆ‌ ಕ್ರಿಕೆಟ್ ಕಿಟ್ ಸಿಕ್ಕರೆ ಮತ್ತಷ್ಟು ಅಭ್ಯಾಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ವರ್ಷಾ.

Share This Article