ಇಹಲೋಕ ತ್ಯಜಿಸಿದ ʻಅಭಿನಯ ಸರಸ್ವತಿʼ – ಕನ್ನಡದ ಮೊದಲ ಮಹಿಳಾ ಸೂಪರ್ ಸ್ಟಾರ್‌ನ ಸಿನಿ ಪಯಣ ಹೇಗಿತ್ತು?

Public TV
3 Min Read

– 200 ಚಿತ್ರಗಳಲ್ಲಿ ನಟಿಸಿದ್ರೂ ಅಮ್ಮನ ಮಾತು ಮೀರದ ಅಭಿನೇತ್ರಿ

ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಭಿನೇತ್ರಿಯೇ ಸರೋಜಾ ದೇವಿ (B Saroja Devi) ಅವ್ರು.. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಭಿನಯ ಸರಸ್ವತಿಯನ್ನೇ ತನ್ನ ಕಲೆ ಅಡಗಿಸಿಟ್ಟುಕೊಂಡಿದ್ದ ಮಹಾನ್ ಕಲಾವಿದೆ ಇವರು.. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಅಭಿನಯಿಸಿ.. ಸೈ ಎನಿಸಿಕೊಂಡಿದ್ದಲ್ಲದೇ ಸಿನಿರಸಿಕರನ್ನ ರಂಜಿಸಿದ್ದಾರೆ.

13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾ (Cinema) ಆಫರ್ ಬಂದಿತ್ತು. ಬಿ.ಆರ್ ಕೃಷ್ಣಮೂರ್ತಿ ಮೊದಲು ದೇವಿಯನ್ನ ಹಾಡು ಹೇಳುವಾಗ ನೋಡಿದ್ದರು. ನಂತರ ಅವರೇ ಮೊದಲು ಸಿನಿಮಾ ಆಫರ್? ಮಾಡಿದ್ದರು. ಇದಕ್ಕೂ ಮೊದಲು ಸಿನಿ ಕ್ಷೇತ್ರಕ್ಕೆ ಕಾಲಿಡೋ ಮುನ್ನ ಸರೋಜಾದೇವಿ ತಾಯಿ ಒಂದು ಷರತ್ತು ಹಾಕಿದ್ರು. ಅದುವೇ ಎಂದಿಗೂ ಸ್ವಿಮ್ಮಿಂಗ್ ಸ್ಯೂಟ್ ಹಾಕುವಂತಿಲ್ಲ, ಸ್ಲೀವ್‌ಲೆಸ್ ಧರಿಸದಂತೆ ತಾಕೀತು ಮಾಡಿದ್ರು. ಅದರಂತೆ ಅವ್ರು ಅಭಿನಯಿಸಿರೋ ಯಾವೊಂದು ಸ್ಲೀವ್‌ಲೆಸ್ ಡ್ರೆಸ್ ಹಾಕಿಲ್ಲ. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡರು.

ಡಾ.ರಾಜ್‌, ಎಂಜಿಆರ್, ಎನ್‌ಟಿರ್ ಜೊತೆ ನಟನೆ
ಇನ್ನೂ 1958ರಲ್ಲಿ ತಮಿಳಿನಲ್ಲಿ (Tamil) ಬಹುಬೇಡಿಕೆ ನಟಿಯಾಗಿದ್ದರು ಸರೋಜಾದೇವಿ. ಅವರಿಗೆ `ನಾಡೋಡಿ ಮಾನಾನ್..?’ ಸಿನಿಮಾ ತಮಿಳಿನಲ್ಲಿ ಸಕ್ಸಸ್ ತಂದುಕೊಟ್ಟ ಸಿನಿಮಾ. 1959ರಲ್ಲಿ `ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1970ರ ವರೆಗೂ ತೆಲುಗು ಇಂಡಸ್ಟ್ರೀಯಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರ ವರೆಗೂ ತಮಿಳಿನಲ್ಲಿ ಬೇಡಿಕೆ ನಟಿಯಾಗಿದ್ದರು. 1980ರ ವರೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959 ರಿಂದ ಬಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿರೋ ಅಭಿನಯ ಸರಸ್ವತಿಯಾಗಿದ್ದರು. ಡಾ. ರಾಜ್‌ಕುಮಾರ್ ಜೊತೆ `ಬಬ್ರುವಾಹನ’, `ಭಾಗ್ಯವಂತರು’, `ತಂದೆ ಮಕ್ಕಳು’ ಎಂಬ ಸಿನಿಮಾಗಳಲ್ಲಿ ಅವರು ನಟಿಸಿ, ಖ್ಯಾತಿ ಪಡೆದಿದ್ದ ಮೇರು ನಟಿ ಇವರಾಗಿದ್ದರು. ಅಷ್ಟೇ ಅಲ್ಲದೇ `ಕಿತ್ತೂರು ರಾಣಿ ಚೆನ್ನಮ್ಮ’ `ಕೋಕಿಲವಾಣಿ’, `ಶ್ರೀರಾಮಪೂಜಾ’, `ರತ್ನಗಿರಿ ರಹಸ್ಯ’, `ಸ್ಕೂಲ್ ಮಾಸ್ಟರ್’, `ಭೂಕೈಲಾಸ’, `ಜಗಜ್ಯೋತಿ ಬಸವೇಶ್ವರ’, ‘ದೇವಸುಂದರಿ’ ಸಿನಿಮಾ ಜನಪ್ರಿಯವಾಗಿದ್ದವು.

ಇನ್ನು, ಎನ್‌ಟಿಆರ್, ಎಂಜಿಆರ್, ಶಿವಾಜಿ ಗಣೇಶನ್ ನಂಥಹ ಖ್ಯಾತನಾಮರ ಜೊತೆ ಬಿ. ಸರೋಜಾ ದೇವಿ ತೆರೆ ಹಂಚಿಕೊಂಡಿದ್ದರು. ಮರುವರ್ಷ `ತಿರುಮಣಂ’ ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1957ರಲ್ಲಿ `ಪಾಂಡುಗರಂ ಮಹಾತ್ಮ’ ತೆಲುಗಿನಲ್ಲಿ ನಟಿಸಿದ್ದ ಮೊದಲ ಸಿನಿಮಾ ಆಗಿತ್ತು. ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಅವರು ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು.

ಪುನೀತ್ ರಾಜ್‌ಕುಮಾರ್ ಜೊತೆಯೂ ನಟನೆ
ಸರೋಜಾ ದೇವಿ ಅವರು ಪುನೀತ್ ರಾಜ್ ಕುಮಾರ್‌ನ ಬಾಲ್ಯದಿಂದಲೂ ನೋಡುತ್ತಾ ಬಂದವರು. ಅವರ ನಡುವಿನ ಆತ್ಮೀಯ ಬಾಂಧವ್ಯ ಎಲ್ಲರ ಕಣ್ಣಿಗೂ ಕಟ್ಟಿದಂತೆಯೇ ಇದೆ. ಸರೋಜಾ ದೇವಿ ಅವರು ಪುನೀತ್ ಅವರನ್ನು ತಮ್ಮ ಮಗನಂತೆ ಕಾಣುತ್ತಿದ್ದರು. 1984ರಲ್ಲಿ `ಯಾರಿವನು’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಸ್ಕ್ರೀನ್‌ ಶೇರ್ ಮಾಡಿದ್ರು ಮತ್ತು `ನಟಸಾರ್ವಭೌಮ’ ಚಿತ್ರಗಳಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. `ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ’ ಎಂಬ ಹಾಡು ಇವತ್ತಿಗೂ ಫೇಮಸ್ ಆಗಿದೆ. ಆ ಹಾಡಿನ ದೃಶ್ಯ ನೋಡಿ ಸರೋಜಾ ದೇವಿ ಅವರು `ಈ ಮಗು ನನ್ನ ಮಗುವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು. ಆದ್ರೆ ದುರಾದೃಷ್ಟವಶಾತ್ ಇವತ್ತು ಈ ಎರಡೂ ನಕ್ಷತ್ರಗಳೂ ನಮ್ಮೊಂದಿಗೆ ಇಲ್ಲ.

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಿ.ಸರೋಜಾದೇವಿ ಅವರಿಗೆ ಹತ್ತು-ಹಲವು ಪ್ರಶಸ್ತಿಗಳು ಲಭಿಸಿವೆ. ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳೂ ಲಭಿಸಿವೆ. ಪ್ರಶಸ್ತಿಗಳ ವಿವರ ನೋಡೋದಾದ್ರೆ…

ರಾಷ್ಟ್ರಪ್ರಶಸ್ತಿಗಳು
* 2008ರಲ್ಲಿ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ
* 1992ರಲ್ಲಿ ಪದ್ಮಭೂಷಣ ಪ್ರಶಸ್ತಿ
* 1969ರಲ್ಲಿ ಪದ್ಮಶ್ರೀ ಪ್ರಶಸ್ತಿ

ರಾಜ್ಯಪ್ರಶಸ್ತಿಗಳು
* 2010ರಲ್ಲಿ ಜೀವಮಾನ ಸಾಧನೆಗಾಗಿ ತಮಿಳುನಾಡು ಸರ್ಕಾರದಿಂದ ಗೌರವ
* 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜಕುಮಾರ್ ರಾಷ್ಟ್ರ ಪ್ರಶಸ್ತಿ
* 2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ
* 2001ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ
* 1993ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ
* 1989ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
* 1980ರಲ್ಲಿ ಕರ್ನಾಟಕ ರಾಜ್ಯದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
* 1969ರಲ್ಲಿ ಕುಲ ವಿಲಕ್ಕು ಸಿನಿಮಾದ ಉತ್ತಮ ನಟನೆಗಾಗಿ ಫಿಲ್ಮ್ ಅವಾರ್ಡ್
* 1965ರಲ್ಲಿ ಕರ್ನಾಟಕ ಸರ್ಕಾರದಿಂದ ಅಭಿನಯ ಸರಸ್ವತಿ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.

Share This Article