ಅತಿರೇಖದ ಅಭಿಮಾನ ಎಂತಹ ಅನಾಹುತಕ್ಕೀಡುಮಾಡುತ್ತದೆ ಅನ್ನೋದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣವೇ (Stampede Case) ಸ್ಪಷ್ಟ ನಿದರ್ಶನ.
ಹೌದು. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಜೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳ ನಿರೀಕ್ಷೆಯಂತೆ ಟ್ರೋಫಿ ಎತ್ತಿ ಹಿಡಿಯಿತು. ಆ ದಿನ ಇಡೀ ರಾತ್ರಿ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೇಳುತ್ತಿದ್ದರು. ಕೆಲವರಂತೂ ಹುಚ್ಚೆದ್ದು ಕುಣಿಯುತ್ತಿದ್ದರು, ಆದ್ರೆ ಅಭಿಮಾನಿಗಳ ಈ ಖುಷಿ ಒಂದು ದಿನವೂ ಉಳಿಯಲಿಲ್ಲ. ಆರ್‌ಸಿಬಿ ತಂಡವನ್ನು ಸನ್ಮಾನಿಸುವ ಸಂಭ್ರಮಾಚರಣೆ ಕಾರ್ಯಕ್ರಮವು ಸೂತಕವಾಗಿ ಪರಿವರ್ತನೆಯಯಾಗಿದ್ದಂತೂ ದುರದೃಷ್ಟಕರ. ಏಕೆಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಸುಮಾರು 65 ಮಂದಿ ಗಾಯಗೊಂಡಿರುವುದು ಐಪಿಎಲ್ (IPL) ಇತಿಹಾಸದಲ್ಲೇ ಘನಘೋರ ದುರಂತ. ಅಷ್ಟೇ ಅಲ್ಲ, ಬೆಂಗಳೂರಿನ ಕಾಲ್ತುಳಿತ ಭಾರತದ ಕ್ರೀಡಾಂಗಣಗಳಲ್ಲಿ ಸಂಭವಿಸಿದ ಅತಿದೊಡ್ಡ ದುರಂತ ಕೂಡ ಆಗಿದೆ.
View this post on Instagram
ದುರಂತ ಸಂಭವಿಸುತ್ತಿದ್ದಂತೆ ಸುತ್ತಮುತ್ತಲಿನ ಮೆಟ್ರೋ ನಿಲ್ದಾಣಗಳಲ್ಲೂ ಸಹ ಜನದಟ್ಟಣೆಯಿಂದ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು. ಹೀಗಾಗಿ ಕೆಲ ನಿಲ್ದಾಣಗಳನ್ನು ಕೆಲಹೊತ್ತು ಬಂದ್ ಮಾಡಿ ದಟ್ಟಣೆ ನಿಯಂತ್ರಿಸುವ ಪ್ರಯತ್ನವನ್ನೂ ಮಾಡಲಾಯಿತು. ಅಷ್ಟರಲ್ಲಾಗಲೇ 11 ಹೆಣಗಳು ಬಿದ್ದಿದ್ದವು. ಆದ್ರೆ ಈ ಪ್ರಕರಣ ಇಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ಇಂತಹ ಅನಾಹುತಗಳು ಸಂಭವಿಸುವ ವೇಳೆ ನಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದರ ಕುರಿತು ತಜ್ಞರು ಒಂದಿಷ್ಟು ಸಲಹೆಗಳನ್ನ ನೀಡಿದ್ದಾರೆ. ವಿಡಿಯೋವನ್ನೂ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ 1 ಸ್ಕ್ವೇರ್ ಮೀಟರ್‌ನಲ್ಲಿ ಒಬ್ಬರು ನಿಲ್ಲುವುದು ಉತ್ತಮ, ಹೆಚ್ಚೆಂದರೆ 5 ಜನ ನಿಲ್ಲಬಹುದು. ಹೀಗೆ ಮಾಡಿದಾಗ ಪರಸ್ಪರ ಉಸಿರಾಟಕ್ಕೂ ಯಾವುದೇ ತೊಂದರೆ ಇರೋದಿಲ್ಲ ಎನ್ನುತ್ತಾರೆ ತಜ್ಞರು. ಆದ್ರೆ ಐಪಿಎಲ್ ಇನ್ನಿತರ ಅದ್ಧೂರಿ ಸಮಾರಂಭಗಳಲ್ಲಿ ಕೆಲ ಮುನ್ನೆಚ್ಚರಿಕೆ ಅನುಸರಿಸುವುದು ಕಾಲ್ತುಳಿತವನ್ನು ತಡೆಯುತ್ತವೆ. ಜೊತೆಗೆ ಕಾಲ್ತುಳಿತ ಸಂಭವಿಸಿದ್ರೂ, ಪ್ರಾಣಾಪಾಯದಿಂದಂತೂ ಪಾರಾಬಹುದು. ಇದನ್ನ ವಿಡಿಯೋ ಸಮೇತ ತಜ್ಞರು ಸಾಕ್ಷ್ಯ ನೀಡಿದ್ದಾರೆ. ಅದೇನೆಂಬುದನ್ನಿಲ್ಲಿ ನೋಡೋಣ..
ಕಾಲ್ತುಳಿತದ ಸಂದರ್ಭದಲ್ಲಿ ಜನ ಪರಸ್ಪರ ತಳ್ಳುವುದು, ಒಬ್ಬರ ಮೇಲೊಬ್ಬರು ಹತ್ತುವುದು ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಎಕ್ಸಿಟ್ ಗೇಟ್‌ಗಳನ್ನು ನಿರ್ಬಂಧಿಸಿದಾಗ ಅಪಘಾತಗಳ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳೂ ಇರುತ್ತವೆ. ಹೀಗಾದಾಗ ಉಸಿರುಗಟ್ಟುವಿಕೆ, ತೀವ್ರ ಒತ್ತಡ ಉಂಟಾಗುತ್ತದೆ, ಇದರಿಂದ ಹೃದಯ ಮತ್ತು ಶ್ವಾಸಕೋಶದ ಮೇಲೆ ಹೆಚ್ಚಿನ ಒತ್ತಡಿಂದ ಪ್ರಾಣಹಾನಿ ಸಹ ಸಂಭವಿಸಬಹುದು. ಇಂತಹ ಅಪಾಯಗಳಿಂದ ಪಾರಾಗಲು ಒಂದಿಷ್ಟು ಉಪಾಯಗಳನ್ನು ತಜ್ಞರು ತಿಳಿಸಿಕೊಟ್ಟಿದ್ದಾರೆ.
ಸುರಕ್ಷಿತವಾಗಲು ಏನು ಮಾಡಬೇಕು?
ಕಾಲ್ತುಳಿದ ಸಂದರ್ಭದಲ್ಲಿ ದೇಹದ ಸೂಕ್ಷ್ಮ ಅಂಗಗಳು, ಹೃದಯ, ಶ್ವಾಸಕೋಶದ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳಲು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಾಲ್ತುಳಿತ ಸಂಭವಿಸುವ ಸಾಧ್ಯತೆಗಳು ತಿಳಿಯುತ್ತಿದ್ದಂತೆ ಒಂದು ಕಾಲು ಮುಂದಿಟ್ಟು ʻಬಾಕ್ಸರ್ ಭಂಗಿʼಯಲ್ಲಿ ನಿಲ್ಲಬೇಕು. ಇದು ಮುಂಭಾಗದ ವ್ಯಕ್ತಿಯಿಂದ ಶ್ವಾಸಕೋಶಕ್ಕೆ ಅಂತರ ನೀಡಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಹಿಂಭಾಗದಿಂದ ಒತ್ತಡ ತಡೆಯುವ ಶಕ್ತಿ ಕೊಡುತ್ತದೆ. ದೇಹದ ಯಾವುದೇ ಅಂಗಗಳಿಗೂ ಇದರಿಂದ ಹಾನಿಯಾಗುವುದಿಲ್ಲ.
ಕೆಳಗೆ ಬಿದ್ದರೆ ಏನು ಗತಿ?
ಒಂದು ವೇಳೆ ಮಿತಿಮೀರಿದ ಒತ್ತಡದಿಂದ ಕೆಳಗೆ ಬಿದ್ದರೆ ಒಂದು ಬದಿಯಾದಂತೆ ಮಲಗಬೇಕು. ತಲೆಯ ಭಾಗವನ್ನು ಕೈಗಳಿಂದ ಮುಚ್ಚಿಕೊಂಡು ʻಸಿʼ ಆಕಾರದಲ್ಲಿ ಮಲಗಬೇಕು. ಇದು ತಲೆಯನ್ನು ಅಪಾಯಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಸಣ್ಣಪುಟ್ಟ ಗಾಯಗಳು ಸಂಭವಿಸಿದ್ರೂ, ಗಂಭೀರ ಗಾಯ ಮತ್ತು ಪ್ರಾಣಹಾನಿಯಂತಹ ಅಪಾಯಗಳಿಂದ ದೂರ ಮಾಡುತ್ತದೆ. ಜೊತೆಗೆ ಶ್ವಾಸಕೋಶ ಮತ್ತು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ, ದೇಹದ ಪ್ರಮುಖ ಅಂಗಗಳಿಗೆ ಪೆಟ್ಟಾಗುವುದನ್ನೂ ತಪ್ಪಿಸುತ್ತದೆ ಎನ್ನುತ್ತಾರೆ ತಜ್ಞರು.
ಕಳೆದ ವರ್ಷ ಜುಲೈ 2 ರಂದು ಹತ್ರಾಸ್‌ನಲ್ಲಿ ನಡೆದ ಸತ್ಸಂಗದ ಸಂದರ್ಭದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಲ್ಲಿ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದರು, ಅವರಲ್ಲಿ 110ಕ್ಕೂ ಹೆಚ್ಚು ಮಹಿಳೆಯರೇ ಇದ್ದರು.
ಇನ್ನೂ ಕ್ರೀಡಾ ಕಾಲ್ತುಳಿತ ಪ್ರಕರಣ ಸಂಭವಿಸಿರುವುದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ಒಮ್ಮೆ ಕ್ರೀಡಾ ಇತಿಹಾಸವನ್ನು ನೋಡಿದಾಗ, ಇಂಥ ಹತ್ತಾರು ಕಾಲ್ತುಳಿತ ವಿದ್ಯಮಾನಗಳು ಜಗತ್ತಿನಲ್ಲಿದಾಖಲಾಗಿವೆ. ಈ ಪೈಕಿ ಎಲ್ಲವೂ ಫುಟ್ಬಾಲ್ ಕ್ರೀಡಾಂಗಣಗಳಲ್ಲೇ ಘಟಿಸಿವೆ. ಇಂಥ ಅವಘಡಗಳ ನಂತರ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಾಮರ್ಥ್ಯ ಕುಸಿದಿದೆ. ಅವುಗಳಲ್ಲಿ ಪ್ರಮುಖ ಸಂಗತಿಗತ್ತ ಒಮ್ಮೆ ಚಿತ್ತ ಹಾಯಿಸೋಣ…
1. ಅಂಪೈರ್ ತೀರ್ಪಿನಿಂದ ಸಿಡಿದ ಆಕ್ರೋಶಕ್ಕೆ 328 ಜೀವಗಳು ಬಲಿ
1964ರ ಮೇ 24ರಂದು ಪೆರುವಿನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಫುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯ ನಡೆಯುತ್ತಿತ್ತು. ಪೆರುವಿನ ಲಿಮಾ ನಗರದಲ್ಲಿ ಅರ್ಜೆಂಟೀನಾ ಮತ್ತು ಪೆರು ನಡುವೆ ರೋಚಕ ಹಣಾಹಣಿ ನಡೆಯುತ್ತಿತ್ತು. ಪಂದ್ಯದಲ್ಲಿ, ಪೆರುವಿಯನ್ ಆಟಗಾರರು ಕೊನೆಯ ನಿಮಿಷಗಳಲ್ಲಿಗೋಲು ಬಾರಿಸಿದರು. ಆದರೆ, ರೆಫರಿ ಅದನ್ನು ‘ಅಕ್ರಮ’ ಎಂದು ತೀರ್ಪಿತ್ತು, ಆತಿಥೇಯ ತಂಡಕ್ಕೆ ಗೋಲನ್ನೇ ನೀಡಲಿಲ್ಲ. ರೆಫರಿಯ ನಿರ್ಧಾರದಿಂದ ಕೋಪಗೊಂಡ ಅಭಿಮಾನಿಗಳು ಹಿಂಸಾಚಾರಕ್ಕಿಳಿದರು. ಪೊಲೀಸರು ಮತ್ತು ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಎಷ್ಟೇ ಯತ್ನಿಸಿದರೂ, ಅಭಿಮಾನಿಗಳ ಆಕ್ರೋಶ ತಡೆಯಲಾಗಲಿಲ್ಲ. ಈ ದುರ್ಘಟನೆಯಲ್ಲಿ2 ಪೊಲೀಸರು ಸೇರಿದಂತೆ 328 ಜನರು ಸಾವನ್ನಪ್ಪಿದರು. ಇದು ಕ್ರೀಡಾ ಜಗತ್ತಿನ ಅತಿಘೋರ ದುರಂತ.
2. ಇಡೋನೇಷ್ಯಾದಲ್ಲಿ ನೆಚ್ಚಿನ ತಂಡ ಸೋತಾಗ… 174 ಜೀವ ಬಲಿ
ಇಂಡೋನೇಷ್ಯಾದ ಕಂಜುರುಹಾನ್ ಕ್ರೀಡಾಂಗಣದಲ್ಲಿಅರೆಮಾ ಕ್ಲಬ್ ಮತ್ತು ಪರ್ಸೆಬಯಾ ಸುರಬಯಾ ನಡುವೆ ಫುಟ್ಬಾಲ್ ಪಂದ್ಯ. 42,000 ಪ್ರೇಕ್ಷಕರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿಹೆಚ್ಚಿನ ಅಭಿಮಾನಿಗಳು ಅರೆಮಾ ಕ್ಲಬ್‌ಗೆ ಬೆಂಬಲಿಗರು. ಆದರೆ, ಪರ್ಸೆಬಯಾ ತಂಡವು 3-2 ಅಂತರದಿಂದ ಅರೆಮಾ ಕ್ಲಬ್ ಅನ್ನು ಸೋಲಿಸಿತು. 2 ದಶಕಗಳಲ್ಲಿಅರೆಮಾವು ಪರ್ಸೆಬಯಾ ವಿರುದ್ಧ ಸೋತಿದ್ದು ಅದೇ ಮೊದಲು. ಇದನ್ನು ಸಹಿಸದ ಅಭಿಮಾನಿಗಳು ಮೈದಾನ ಪ್ರವೇಶಿಸಿದರು. ಅವರು ಪರ್ಸೆಬಯಾ ಆಟಗಾರರು ಮತ್ತು ಅಧಿಕಾರಿಗಳ ಮೇಲೆ ಬಾಟಲಿಗಳನ್ನು ಎಸೆಯತೊಡಗಿದರು. ಪರಿಸ್ಥಿತಿ ನಿಯಂತ್ರಿಸಲು, ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಅಭಿಮಾನಿಗಳು ಭಯಭೀತರಾಗಿ ಎಕ್ಸಿಟ್ ಗೇಟ್‌ನತ್ತ ಓಡಿದಾಗ ಭಯಾನಕ ಕಾಲ್ತುಳಿತ ಸಂಭವಿಸಿತು. ಸಾಲದ್ದಕ್ಕೆ, ರೊಚ್ಚಿಗೆದ್ದ ಅಭಿಮಾನಿಗಳು ಮೈದಾನದ ಹೊರಗೆ 5 ಪೊಲೀಸ್ ಕಾರುಗಳಿಗೆ ಬೆಂಕಿ ಹಚ್ಚಿದರು. ಕಾಲ್ತುಳಿತದಿಂದ ಅಲ್ಲೇ ಜೀವಬಿಟ್ಟವರು 174 ಮಂದಿ.
3. ಭಾರತದ ಮೊದಲ ಕ್ರೀಡಾ ಕಾಲ್ತುಳಿತಕ್ಕೆ 16 ಮಂದಿ ಸಾವು
ಭಾರತದಲ್ಲಿ ಮೊದಲ ಕ್ರೀಡಾ ಕಾಲ್ತುಳಿತ ಸಂಭವಿಸಿದ್ದು 1980ರಲ್ಲಿ. ಕೋಲ್ಕತ್ತಾದಲ್ಲಿ ಮೋಹನ್ ಬಗಾನ್ ಮತ್ತು ಈಸ್ವ್ ಬೆಂಗಾಲ್ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಎರಡೂ ತಂಡಗಳ ಸಾವಿರಾರು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಕಿಕ್ಕಿರಿದಿದ್ದರು. ಈಸ್ಟ್ ಬೆಂಗಾಲ್ ಡಿಫೆಂಡರ್ ದಿಲೀಪ್ ಪಾಲಿತ್ ಅವರು ಮೋಹನ್ ಬಗಾನ್ ತಂಡದ ಬಿಡೇಶ್ ಬಸು ಅವರನ್ನು ಕೆಳಕ್ಕುರುಳಿಸಿದರು. ಇಬ್ಬರ ನಡುವೆ ಜಗಳ ಶುರುವಾಯಿತು. ರೆಫರಿ ಕೈಯಿಂದಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಆಗ ರೊಚ್ಚಿಗೆದ್ದ ಪ್ರೇಕ್ಷಕರು ಬಾಟಲಿ, ಕಲ್ಲುಗಳನ್ನು ಎಸೆಯತೊಡಗಿದರು. ಇದರಿಂದ ಇತರ ಪ್ರೇಕ್ಷಕರಲ್ಲಿ ಭೀತಿಯುಂಟಾಗಿ ಕಾಲ್ಕೀಳಲು ಪ್ರಾರಂಭಿಸಿದ್ರು ಈ ವೇಳೆ ಕಾಲ್ತುಳಿತ ಸಂಭವಿಸಿ, 16 ಮಂದಿ ಪ್ರಾಣ ಬಿಟ್ಟರು.
4. ಪ್ರೇಕ್ಷಕರಿಗೆ ನಿಂತಲ್ಲೇ ನರಕ – 126 ಮಂದಿ ಸಾವು
2001ರ ಮೇ 9ರಂದು ಅಕ್ರಾದ ಓಹೆನೆ ಯಾನ್ ಕ್ರೀಡಾಂಗಣದಲ್ಲಿ ಹಾರ್ಟ್ಸ್ ಆಫ್ ಓಕ್ ಮತ್ತು ಅಸಾಂಟೆ ಕೊಟೊಕೊ ನಡುವೆ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಓಕ್ ತಂಡವು ಪಂದ್ಯವನ್ನು 2-1 ಅಂತರದಿಂದ ಗೆದ್ದಾಗ, ಉದ್ರಿಕ್ತಗೊಂಡ ಕೊಟೊಕೊ ಅಭಿಮಾನಿಗಳು ಮೈದಾನಕ್ಕೆ ಬಾಟಲಿಗಳನ್ನು ಎಸೆಯತೊಡಗಿದರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ, ದಿಕ್ಕಾಪಾಲಾಗಿ ಓಡಿದ ಅಭಿಮಾನಿಗಳಿಂದ ನೂಕುನುಗ್ಗಲು ಸೃಷ್ಟಿಯಾಯಿತು. ಎಲ್ಲರೂ ನಿರ್ಗಮನ ದ್ವಾರದತ್ತ ಓಡತೊಡಗಿದರು. ಆದರೆ, ಹೊರಗೆ ಹೋಗುವ ಗೇಟ್‌ಗಳು ಮುಚ್ಚಿದ್ದರಿಂದಾಗಿ ಪ್ರೇಕ್ಷಕರು ತಬ್ಬಿಬ್ಬಾದರು. ಈ ವೇಳೆ ಸಂಭವಿಸಿದ ಕಾಲ್ತುಳಿತ 126 ಜೀವಗಳನ್ನು ಬಲಿ ಪಡೆದಿತ್ತು.
5. ಗೇಟ್ ತೆರೆದಾಗ ಒಬ್ಬರ ಮೇಲೊಬ್ಬರು ಬಿದ್ದರು – 96 ಮಂದಿ ಪ್ರಾಣಬಿಟ್ಟರು
1989ರ ಏಪ್ರಿಲ್ 15ರಂದು ಇಂಗ್ಲೆಂಡ್‌ನ ಶೆಫೀಲ್ಡ್‌ನ ಹಿಲ್ಸ್‌ಬರೋ ಕ್ರೀಡಾಂಗಣದಲ್ಲಿ ಲಿವರ್‌ಪೂಲ್ ಮತ್ತು ನಾಟಿಂಗ್‌ಹ್ಯಾಮ್ ನಡುವೆ ಎಫ್‌ಎ ಕಪ್ ಸೆಮಿಫೈನಲ್ ಪಂದ್ಯ ನಡೆಯಬೇಕಿತ್ತು. ನಿರೀಕ್ಷೆಗಿಂತ ಹೆಚ್ಚಿನ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ಆಗಮಿಸಿದ್ದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಇಷ್ಟು ದಿನ ಮುಚ್ಚಿದ್ದ ‘ಗೇಟ್-ಸಿ’ ತೆರೆಯಲು ಮುಂದಾದರು. ಈ ವಿಷಯ ತಿಳಿದ ತಕ್ಷಣವೇ ಪ್ರೇಕ್ಷಕರು ಒಂದೆಡೆಯಿಂದ ಗೇಟ್ ಸಿಯತ್ತ ಓಡಿದರು. ಈ ವೇಳೆ ಕಾಲ್ತುಳಿತ ಸಂಭವಿಸಿ, 96 ಜನ ಮೃತಪಟ್ಟು, 766 ಮಂದಿ ಗಾಯಗೊಂಡರು. ಸೆಮಿಫೈನಲ್ ಪಂದ್ಯ ರದ್ದಾಯಿತು. ಕೊನೆಗೆ ಆ ಪಂದ್ಯವನ್ನು ಮರುವರ್ಷ ಅಂದ್ರೆ 1990ರಲ್ಲಿ ನಡೆಸಲಾಯಿತು.