ದಲೈಲಾಮಾ ಉತ್ತರಾಧಿಕಾರಿ ಸಂಘರ್ಷ- ದಲೈಲಾಮಾ ಜೊತೆ ಭಾರತದ ಸಂಬಂಧ ಹೇಗಿತ್ತು; ಚೀನಾ ಎಚ್ಚರಿಕೆ ಏನು?

Public TV
6 Min Read
– ಉತ್ತರಾಧಿಕಾರಿ ಆಯ್ಕೆ ಹೇಗೆ ನಡೆಯುತ್ತೆ?
ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರ ಉತ್ತರಾಧಿಕಾರಿ (Dalai Lama Succession) ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದೇ ಜು.6 ರಂದು 90ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ 14ನೇ ದಲೈಲಾಮಾ ಅವರು ತಮ್ಮ ನಿಧನ ನಂತರ ಉತ್ತರಾಧಿಕಾರಿ ನೇಮಕ ಕುರಿತು ಮಾತನಾಡಿದ್ದಾರೆ. ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಸಂಪ್ರದಾಯದಂತೆ ಉತ್ತರಾಧಿಕಾರಿ ನೇಮಿಸಬೇಕು ಎಂದು ಘೋಷಿಸಿದ್ದಾರೆ. ಅವರ ಈ ಮಾತು ವಿವಾದದ ಸ್ವರೂಪ ಪಡೆದುಕೊಂಡಿದೆ. ಘೋಷಣೆ ಹೊರಬೀಳುತ್ತಿದ್ದಂತೆ ಚೀನಾ ಎಂಟ್ರಿ ಕೊಟ್ಟಿದೆ. ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ದಲೈಲಾಮಾ ಮತ್ತು ಚೀನಾ ನಡುವೆ ಫೈಟ್ ನಡೆಯುತ್ತಿದೆ. ಇದರ ನಡುವೆ ಭಾರತದ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ಯಾರು ಈ ದಲೈಲಾಮಾ? ಉತ್ತರಾಧಿಕಾರಿ ವಿಚಾರ ವಿವಾದಕ್ಕೆ ಕಾರಣವೇನು? ಚೀನಾಗೆ ತಲೆನೋವೇಕೆ? ಇದರಲ್ಲಿ ಭಾರತದ ಪಾತ್ರ ಮತ್ತು ನಡೆಯೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
14ನೇ ದಲೈಲಾಮಾ
ಜಗತ್ತಿನ ಅತ್ಯಂತ ಪ್ರಭಾವಶಾಲಿ ಧರ್ಮಗುರುಗಳಲ್ಲಿ ದಲೈಲಾಮಾ (Dalai Lama) ಕೂಡ ಒಬ್ಬರು. ಇವರು 1935ರ ಜು.6 ರಂದು ಈಶಾನ್ಯ ಟಿಬೆಟ್‌ನಲ್ಲಿರುವ ಈಗಿನ ಚೀನಾದ ಕ್ವಿಂಗ್ಹೈ ಪ್ರಾಂತ್ಯದ ಟಕ್ಟ್ಸರ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ಮೂಲ ಹೆಸರು ಲ್ಹಾಮ್ ಥೊಂಡುಪ್. 1937ರಲ್ಲಿ ಥೊಂಡುಪ್, ಹಿಂದಿನ (13ನೇ) ದಲೈ ಲಾಮಾ ಅವರ ಮರುಜನ್ಮ ಎಂದು ಗುರುತಿಸಲಾಯಿತು. 1940ರ ಫೆ.2 ರಂದು 13ನೇ ದಲೈಲಾಮಾ ಅವರ ಉತ್ತರಾಧಿಕಾರಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಪಟ್ಟಾಭಿಷೇಕ ಕೂಡ ನೆರವೇರಿತು. ಆಗ ಅವರ ವಯಸ್ಸು ಕೇವಲ 5 ವರ್ಷ. ಟೆಂಜಿನ್ ಗ್ಯಾಟ್ಸೊ ಎಂದು ನಾಮಕರಣ ಮಾಡಲಾಯಿತು.
ಟಿಬೆಟ್‌ನಿಂದ ಭಾರತಕ್ಕೆ ಪಲಾಯನ
ಟಿಬೆಟ್‌ನಲ್ಲಿ ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತರುವುದು ದಲೈಲಾಮಾ ಅವರ ಹೆಬ್ಬಯಕೆ. ಆದರೆ, ಟಿಬೆಟ್ ಮೇಲಿನ ಹಿಡಿತ ಬಿಟ್ಟುಕೊಡಲು ಚೀನಾ ಸಿದ್ಧವಿಲ್ಲ. 1950ರಲ್ಲಿ ಚೀನಾವು ಟಿಬೆಟ್ ಮೇಲೆ ಅತಿಕ್ರಮಣ ನಡೆಸಿತು. ಆಗ 15ನೇ ವಯಸ್ಸಿನಲ್ಲಿ ಟಿಬೆಟ್‌ನ ಸಂಪೂರ್ಣ ರಾಜಕೀಯ ನಿಯಂತ್ರಣ ಪಡೆದ ಧರ್ಮಗುರುವಾಗಿದ್ದರು. 1956ರಲ್ಲಿ ಬೀಜಿಂಗ್‌ನಲ್ಲಿ ಚೀನಾದ ಪರಮೋಚ್ಚ ನಾಯಕ ಮಾವೋ ಝೆಡಾಂಗ್ ಮತ್ತು ನಾಯಕರೊಂದಿಗೆ ಶಾಂತಿ ಮಾತುಕತೆ ನಡೆಯಿತು. ನಂತರ 1959ರಲ್ಲಿ ಚೀನಾದ (China) ವಿರುದ್ಧ ಟಿಬೆಟ್‌ನಲ್ಲಿ ದಂಗೆ ನಡೆಸಲಾಯಿತು. ಅದು ವಿಫಲವಾಗಿ ದಲೈಲಾಮಾ ಅವರು ಸಾವಿರಾರು ಅನುಯಾಯಿಗಳೊಂದಿಗೆ ದೇಶವನ್ನು ತೊರೆದು ಭಾರತಕ್ಕೆ ಮಾಡಿದರು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೆಲೆ ಕಂಡುಕೊಂಡರು.
ನೊಬೆಲ್ ಪುರಸ್ಕಾರ 
ಜಗತ್ತಿನ ಪ್ರಭಾವಶಾಲಿ ಧರ್ಮಗುರುಗಳಲ್ಲಿ ದಲೈಲಾಮಾ ಕೂಡ ಒಬ್ಬರು. ಅವರಿಗೆ ಟೆಬೆಟ್‌ನ ಹೊರಗೂ ಅನುಯಾಯಿಗಳಿದ್ದಾರೆ. ದಶಕಗಳಿಂದಲೂ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಾ ಟಿಬೆಟ್‌ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ದಲೈಲಾಮಾ ಶ್ರಮಿಸುತ್ತಿದ್ದಾರೆ. ಬೌದ್ಧ ತತ್ವಗಳ ಪ್ರತಿಪಾದಕರು. ಅಹಿಂಸೆ ಮತ್ತು ಶಾಂತಿ ಪ್ರತಿಪಾದನೆಗಾಗಿ 1989ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ. ಬಳಿಕ 2011ರಲ್ಲಿ ರಾಜಕೀಯ ಸ್ಥಾನಮಾನ ಪದತ್ಯಾಗ ಮಾಡಿ ಟಿಬೆಟನ್ನರ ಧರ್ಮಗುರುವಾಗಿ ಮುಂದುವರಿದರು. 2024ರಲ್ಲಿ ಅಮೆರಿಕಗೆ ಭೇಟಿ ನೀಡಿ ಮಂಡಿ ಚಿಕಿತ್ಸೆಗೆ ಒಳಗಾದರು. ಈ ಸಂದರ್ಭದಲ್ಲೇ ಮೊದಲ ಬಾರಿಗೆ ಉತ್ತರಾಧಿಕಾರಿ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಉತ್ತರಾಧಿಕಾರಿ ಘೋಷಣೆ ಏಕೆ ಮಹತ್ವದ್ದಾಗಿದೆ?
ದಲೈಲಾಮಾ ಅವರ ಉತ್ತರಾಧಿಕಾರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಧರ್ಮಶಾಲಾದಲ್ಲಿ ನಡೆದ 90ನೇ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಸಮಾರಂಭವೊಂದರಲ್ಲಿ ದಲೈಲಾಮಾ ತಮ್ಮ ಉತ್ತರಾಧಿಕಾರಿ ಆಯ್ಕೆ ಕುರಿತು ಮಾತನಾಡಿದ್ದಾರೆ. ಆಯ್ಕೆ ಪ್ರಕ್ರಿಯೆ ಟಿಬೆಟಿಯನ್ ಬೌದ್ಧಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿಯೇ ನಡೆಯುತ್ತದೆ. ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಉಸ್ತುವಾರಿಯಲ್ಲಿ ನಡೆಯಲಿದೆ ಎಂದು ದಲೈಲಾಮಾ ತಿಳಿಸಿದ್ದಾರೆ. ‘ನಾನು ಪುನರ್ಜನ್ಮ ಹೊಂದುತ್ತೇನೆ. ಅದರ ಆಧಾರದಲ್ಲಿಯೇ ಮುಂದಿನ ದಲೈಲಾಮಾ ಆಯ್ಕೆ ನಡೆಯಲಿದೆ’ ಎಂದು ಹೇಳಿದ್ದಾರೆ. ಈ ಹೇಳಿಕೆ ಬೌದ್ಧ ಧರ್ಮದ ಅನುಯಾಯಿಗಳಲ್ಲಿ ಅಪಾರ ಸಂತೋಷ ತಂದಿದೆ.
ಆಯ್ಕೆ ಹೇಗೆ?
ಟಿಬೆಟಿಯನ್ ಬೌದ್ಧ ಸಂಪ್ರದಾಯವು ಬೌದ್ಧ ಸನ್ಯಾಸಿಯ ಆತ್ಮವು ಆತನ ಮರಣದ ನಂತರ ಪುನರ್ಜನ್ಮ ಪಡೆಯುತ್ತದೆ ಎಂದು ನಂಬುತ್ತದೆ. 1935 ರಂದು ಚೀನಾದ ಕ್ವಿಂಗ್ಹೈ ಪ್ರಾಂತ್ಯದಲ್ಲಿ ಲ್ಹಾಮ್ ಥೋಂಡಪ್ ಆಗಿ ಜನಿಸಿದ 14 ನೇ ದಲೈಲಾಮಾ ಅವರನ್ನು ಕೇವಲ ಎರಡು ವರ್ಷದವನಿದ್ದಾಗ, ಅವರ ಹಿಂದಿನ (13ನೇ) ದಲೈಲಾಮಾರ ಪುನರ್ಜನ್ಮ ಎಂದು ಗುರುತಿಸಲಾಗಿತ್ತು. ಹೊಸ ದಲೈಲಾಮಾ ಆಯ್ಕೆಯು ಟಿಬೆಟ್‌ನ ಬೌದ್ಧ ಧರ್ಮದ ಸಂಸ್ಕೃತಿ, ಶಿಷ್ಟಾಚಾರದ ಪ್ರಕಾರವೇ ನಡೆಯುತ್ತದೆ. ಆದರೆ, ಹಾಲಿ ದಲೈಲಾಮಾ ನಿಧನದ ನಂತರವೇ ಈ ಪ್ರಕ್ರಿಯೆ ನಡೆಯುತ್ತದೆ. ದಲೈಲಾಮಾ ಅವರೇ ಮರುಜನ್ಮ ಪಡೆದು ಆ ಹುದ್ದೆಯಲ್ಲಿ ಮುಂದುವರಿಯುತ್ತಾರೆಂಬುದು ಟಿಬೆಟಿಯನ್ನರ ನಂಬಿಕೆಯಾಗಿದೆ. ಹೊಸ ದಲೈಲಾಮಾ ಅವರನ್ನು ಗುರುತಿಸಲು ಹಳೆಯ ಸಂಪ್ರದಾಯ ವಿಧಾನಗಳನ್ನು ಅನುಸರಿಸಲಾಗುತ್ತದೆ. ಹಿಂದಿನ ದಲೈಲಾಮಾ ಬಿಟ್ಟುಹೋಗಿರುವ ಚಿಹ್ನೆಗಳು, ಜ್ಯೋತಿಷ್ಯದಿಂದ ಕಂಡುಕೊಂಡ ಮಾಹಿತಿಗಳು, ಆಧ್ಯಾತ್ಮಿಕ ಜ್ಞಾನವನ್ನು ವಿಶ್ಲೇಷಿಸಲಾಗುತ್ತದೆ. ಅಲ್ಲದೇ, ಹುಟ್ಟಿದ ಕೆಲವೇ ವರ್ಷಗಳಲ್ಲಿ ಯಾರಾದರೂ ಹಿಂದಿನ ದಲೈಲಾಮಾ ಅವರು ಬಳಸಿದ ವಸ್ತುಗಳು, ಅವರ ಆಪ್ತರನ್ನು ಗುರುತಿಸಿದರೆ ಅವರು ಮರುಜನ್ಮ ಪಡೆದವರೆಂದು ತಿಳಿಯಲಾಗುತ್ತದೆ.
ದಲೈಲಾಮಾ ಅವರು ತಮ್ಮ ಉತ್ತರಾಧಿಕಾರಿಯನ್ನು ತಾವು ಜೀವಂತವಾಗಿರುವಾಗಲೇ ಹೆಸರಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ, ಟಿಬೆಟ್‌ನ ಹೊರಗೆ, ಚೀನೀ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಲ್ಲಿ ಇಲ್ಲದ ಪ್ರದೇಶದಲ್ಲಿ ಜನಿಸುವವರಾಗಬೇಕು ಎಂದು ತಿಳಿಸಿದ್ದಾರೆ. ಟಿಬೆಟ್‌ನಿಂದ ಬಹುದೂರ ಭಾರತದ ಧರ್ಮಶಾಲಾದಿಂದಲೇ ತಮ್ಮ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ದಲೈಲಾಮಾ ತಿಳಿಸಿದ್ದಾರೆ. ಇದು ಟಿಬೆಟಿಯನ್ ಬೌದ್ಧರ ಧಾರ್ಮಿಕ ಸಂಸ್ಥೆ ಮತ್ತು ಟಿಬೆಟ್ ಸ್ವಾತಂತ್ರ್ಯ ಹೋರಾಟದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.
ಚೀನಾಗೆ ಸಿಟ್ಟು ಯಾಕೆ?
ಟಿಬಿಟ್ ಮೇಲೆ ಚೀನಾ ಹಿಡಿತ ಸಾಧಿಸಿದೆ. ಅದನ್ನು ಬಿಟ್ಟುಕೊಡಲು ಡ್ರ್ಯಾಗನ್ ರಾಷ್ಟ್ರ ಸಿದ್ಧವಿಲ್ಲ. ಇಡೀ ಜಗತ್ತೇ ದಲೈಲಾಮಾ ಅವರ ಬಗ್ಗೆ ಗೌರವ ಭಾವನೆ ಹೊಂದಿದೆ. ಆದರೆ, ಚೀನಾ ಮಾತ್ರ ಅವರನ್ನು ಪ್ರತ್ಯೇಕತಾವಾದಿ ಎಂದು ನೋಡುತ್ತಿದೆ. ಉತ್ತರಾಧಿಕಾರಿ ಆಯ್ಕೆ ಬಗೆಗಿನ ದಲೈಲಾಮಾ ಅವರ ಮಾತಿಗೂ ವಿರೋಧ ವ್ಯಕ್ತಪಡಿಸಿದೆ. ದಲೈಲಾಮಾ ಒಬ್ಬರೇ ಉತ್ತರಾಧಿಕಾರಿ ಆಯ್ಕೆ ಮಾಡುವಂತಿಲ್ಲ, ಅದರಲ್ಲಿ ತನ್ನ ಪಾತ್ರವೇ ನಿರ್ಣಯವಾಗಬೇಕು ಎಂದು ಚೀನಾ ಪಟ್ಟು ಹಿಡಿದಿದೆ. ಅಷ್ಟೇ ಅಲ್ಲ ಟಿಬೆಟಿಯನ್ನರಿಗೆ ಭಾರತ ಆಶ್ರಯ ನೀಡಿರುವ ಬಗ್ಗೆಯೂ ಚೀನಾಗೆ ಅಸಮಾಧಾನ ಇದೆ. ಸಾಮ್ರಾಜ್ಯಶಾಹಿ ಕಾಲದ ಪರಂಪರೆಯಂತೆ ಉತ್ತರಾಧಿಕಾರಿಯನ್ನು ಅನುಮೋದಿಸುವ ಹಕ್ಕು ತನ್ನದು ಎಂದು ಚೀನಾ ಹೇಳಿದೆ. ದಲೈಲಾಮಾ ಅವರ ಪುನರ್ಜನ್ಮವನ್ನು ರಾಷ್ಟ್ರೀಯ ಕಾನೂನುಗಳನ್ನು ಅನುಸರಿಸುವ ಮೂಲಕ ನಿರ್ಧರಿಸಬೇಕು ಎಂದು ಹಟ ಹಿಡಿದಿದೆ. ಒಬ್ಬ ವಿಧೇಯ ಉತ್ತರಾಧಿಕಾರಿಯನ್ನು ನೇಮಿಸಿ ಟಿಬೆಟ್ ಅನ್ನು ನಿಯಂತ್ರಿಸಬೇಕೆನ್ನುವುದು ಚೀನಾದ ಉದ್ದೇಶವಾಗಿದೆ.
ಭಾರತದ ನಡೆಯೇನು?
ಹಾಲಿ ದಲೈಲಾಮಾ ಅವರು ಭಾರತದ (India) ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. 1959ರಲ್ಲಿ ಪಲಾಯನಗೈದ ದಲೈಲಾಮಾಗೆ ಆಶ್ರಯ ನೀಡಿದೆ. ಪಲಾಯನ ಮಾಡಿದಾಗಿನಿಂದ ಧರ್ಮಶಾಲಾವೇ ಅವರ ನೆಲೆಯಾಗಿದೆ. ಪ್ರಸ್ತುತ 1.40 ಲಕ್ಷ ಟಿಬೆಟಿಯನ್ ಬೌದ್ಧರು ಭಾರತದಾದ್ಯಂತ ನೆಲೆ ಕಂಡುಕೊಂಡಿದ್ದಾರೆ. ಸುಮಾರು 45 ವಸತಿ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಕರ್ನಾಟಕದಲ್ಲೂ ಟಿಬೆಟಿಯನ್ನರ ಮೂರು ವಸತಿ ಪ್ರದೇಶಗಳಿವೆ. ಈಗ ಉತ್ತರಾಧಿಕಾರಿ ಆಯ್ಕೆಯ ಸಂಘರ್ಷದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಚೀನಾದೊಂದಿಗಿನ ಗಡಿ ಸಂಘರ್ಷವೇ ಇದಕ್ಕೆ ಪ್ರಮುಖ ಕಾರಣ.
ದಲೈಲಾಮಾ ಆಯ್ಕೆ ಟಿಬೆಟಿಯನ್ನರ ಹಕ್ಕು. ಮುಂದಿನ ದಲೈಲಾಮಾ ಯಾರೆಂಬುದನ್ನು ಸ್ಥಾಪಿತ ಸಂಸ್ಥೆ ಮತ್ತು ಟಿಬೆಟಿಯನ್ ಬೌದ್ಧ ನಾಯಕರು ನಿರ್ಧರಿಸುತ್ತಾರೆಂದು ಭಾರತ ಪ್ರತಿಕ್ರಿಯಿಸಿದೆ. ದಲೈಲಾಮಾ ಅವರನ್ನು ಅನುಸರಿಸುವವರೆಲ್ಲರೂ ಅವರ ಇಚ್ಛೆಯ ಪ್ರಕಾರ ನಿರ್ಧರಿಸಬೇಕು ಎಂದು ಭಾವಿಸುತ್ತಾರೆ. ದಲೈಲಾಮಾ ಅವರನ್ನು ಮತ್ತು ಜಾರಿಯಲ್ಲಿರುವ ಆಚಾರಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಉತ್ತರಾಧಿಕಾರಿ ನಿರ್ಧರಿಸುವ ಹಕ್ಕಿಲ್ಲ ಎಂದು ಚೀನಾಗೆ ನೇರವಾಗಿ ಭಾರತ ಟಕ್ಕರ್ ಕೊಟ್ಟಿದೆ. ಇದಕ್ಕೆ ಚೀನಾವೂ ಪ್ರತಿಕ್ರಿಯೆ ನೀಡಿದೆ. ದಲೈಲಾಮಾ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮಾತನಾಡಿದೆ. ದಲೈಲಾಮಾ ಅವರ ಉತ್ತರಾಧಿಕಾರವನ್ನು ಚೀನಾದ ಕೇಂದ್ರ ಸರ್ಕಾರ ಅನುಮೋದಿಸಬೇಕು. ಚೀನಾ ಕಾನೂನು ಮತ್ತು ನಿಬಂಧನೆಗಳನ್ನು ಪಾಲಿಸಬೇಕು ಎಂದು ಚೀನಾ ಹೇಳಿದೆ.
14 ಮಂದಿ ದಲೈಲಾಮಾ ಎಲ್ಲಿಯವರು?
ಇದುವರೆಗೆ 14 ಮಂದಿ ದಲೈಲಾಮಾ ಹುದ್ದೆಗೆ ಏರಿದ್ದಾರೆ. ಇವರಲ್ಲಿ ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ಟಿಬೆಟ್‌ನವರೇ. 4ನೇ ದಲೈಲಾಮಾ (ಯೊಂಟೆನ್ ಗ್ಯಾಟ್ಸೊ) & 6ನೇ ದಲೈಲಾಮಾ (ತ್ಸಾಂಗ್ಯಾಂಗ್ ಗ್ಯಾಟ್ಸೊ) ಆಗಿ ಟಿಬೆಟ್‌ನವರಲ್ಲದವರು ಆ ಹುದ್ದೆಗೆ ಏರಿದ್ದಾರೆ. ಯೊಂಟೆನ್ ಅವರು ಮಂಗೋಲಿಯಾದಲ್ಲಿ ಹಾಗೂ ತ್ಯಾಂಗ್ಯಾಂಗ್ ಅವರು ಈಗಿನ ಅರುಣಾಚಲ ಪ್ರದೇಶದಲ್ಲಿ ಜನಿಸಿದ್ದರು.
Share This Article