ಕಾಜಿರಂಗದಲ್ಲಿ ಪ್ರಾಣಿಗಳ ಮಾರಣಹೋಮ ತಡೆಯಬಲ್ಲದೇ ʻಎಲಿವೇಟೆಡ್ ಕಾರಿಡಾರ್‌ʼ? 30 ವರ್ಷಗಳ ಹೋರಾಟಕ್ಕೆ ಸಿಗುವುದೇ ಜಯ?

5 Min Read

ಪ್ರಾಕೃತಿಕ ಸೊಬಗಿನ ತಾಣಗಳಲ್ಲಿ ವಿಹರಿಸುವ ಖುಷಿಯೇ ಒಂದು ಅದ್ಭುತ. ಭಾರತದಲ್ಲಿ ಇಂತಹ ಸ್ಥಳಗಳಿಗೆ ಕೊರತೆಯೇನಿಲ್ಲ. ಈ ಸ್ಥಳಗಳು ಸ್ಮರಣೀಯ ಪ್ರವಾಸದ ಅನುಭವ ತರುತ್ತವೆ. ಇದಕ್ಕೆ ಅಸ್ಸಾಂನ ಕಾಜಿರಂಗ ವನ್ಯ ಸಂಪತ್ತು ಹೊರತಾಗಿಲ್ಲ.

ಅಸ್ಸಾಂ ಈಶಾನ್ಯ ಭಾರತದ ಸುಂದರ ರಾಜ್ಯ. ಎಕರೆಗಟ್ಟಲೆ ಚಹಾ ತೋಟಗಳ ನೆಲೆಯಾಗಿದೆ. ಅಲ್ಲದೇ ಇಡೀ ವಿಶ್ವದಲ್ಲಿಯೇ ಉನ್ನತ ಜೀವವೈವಿಧ್ಯತೆಗಳನ್ನ ಅಸ್ಸಾಂ ಹೊಂದಿದೆ. ಸಸ್ಯ, ಪ್ರಾಣಿಗಳು, ಎತ್ತರವಾದ ಬೆಟ್ಟಗಳ ಶ್ರೇಣಿಗಳನ್ನ ಅಸ್ಸಾಂನ ಪ್ರವಾಸದಲ್ಲಿ ಕಣ್ತುಂಬಿಕೊಳ್ಳಬಹುದು. ಜೊತೆಗೆ ಮೋಡಿ ಮಾಡುವ ನದಿಗಳಿಂದ ಪ್ರವಾಸಿಗರನ್ನ ಸ್ವಾಗತಿಸುತ್ತದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ಅಭಯಾರಣ್ಯದಲ್ಲಿ ಕೇವಲ ಅಪರೂಪದ ಪ್ರಾಣಿಗಳು ಮಾತ್ರವಲ್ಲ ಬಹುಕಾಂತೀಯ ಸಸ್ಯಗಳ ಅದ್ಭುತ ದೃಶ್ಯಕಾವ್ಯಗಳನ್ನೂ ಕಂಡು ಆಸ್ವಾದಿಸಬಹುದು.

ಈ ಉದ್ಯಾನವನಕ್ಕೆ ಭೇಟಿ ನೀಡಲು ನವೆಂಬರ್‌ ತಿಂಗಳಿನಿಂದ ಏಪ್ರಿಲ್‌ ತಿಂಗಳು ಸೂಕ್ತ ಸಮಯ. ಒಬ್ಬರಿಗೆ ಪ್ರತಿ ಜೀಪ್‌ ಸಫಾರಿಗೆ 4,200 ರೂಪಾಯಿಯಿಂದ 5,500 ರೂಪಾಯಿ ವರೆಗೆ ಹಣ ಪಾವತಿಸಬೇಕಾಗುತ್ತದೆ. ಆದ್ರೆ ಆಗಾಗ್ಗೆ ಇಲ್ಲಿ ಸಂಭವಿಸುವ ಪ್ರವಾಹ, ಹೆದ್ದಾರಿಯಿಂದ ಉಂಟಾಗುತ್ತಿರುವ ಅಪಘಾತಗಳಿಗೆ ಸಿಕ್ಕಿ ವನ್ಯ ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿರುವುದುವುದು ದುರಾದೃಷ್ಟವೇ ಸರಿ. 2024ರಲ್ಲಿ ಉಂಟಾದ ಮಹಾಪ್ರವಾಹಕ್ಕೆ ಖಡ್ಗಮೃಗ (ಒಂದು ಕೊಂಬಿನ ಘೇಂಡಾಮೃಗ), ಜಿಂಕೆಗಳು, ಆನೆಗಳು ಸೇರಿ ನೂರಾರು ಪ್ರಾಣಿಗಳು ಸಾವನ್ನಪ್ಪಿದವು. ಇನ್ನೂ ಕೆಲವು ಹುಲಿಗಳು ಕಾದಾಟದಿಂದ ಸತ್ತರೆ, ಕೆಲ ವನ್ಯಜೀವಿಗಳು ವಾಹನ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಾ ಬಂದಿವೆ.

ರಾಷ್ಟ್ರೀಯ ಹೆದ್ದಾರಿ 715 (ಹಳೆಯ ಎನ್‌ಹೆಚ್‌-37) ರಲ್ಲಿ ಅತಿವೇಗವಾಗಿ ಚಲಿಸುವ ವಾಹನಗಳಿಂದ ಖಡ್ಗಮೃಗಗಳು (ಒಂಟಿ ಕೊಂಬಿನ ಘೇಂಡಾಮೃಘ) ಸೇರಿ ಹಲವು ಪ್ರಾಣಿಗಳು ಸಾಯುತ್ತಿವೆ. ಇದಕ್ಕೆ ಪರಿಹಾರ ಕಲ್ಪಿಸುವ ಸಲುವಾಗಿ ವನ್ಯಜೀವಿ ಸ್ನೇಹಿ ಎಲಿವೇಟೆಡ್‌ ಕಾರಿಡಾರ್‌ ʻಎತ್ತರಿಸಿದ ಹೆದ್ದಾರಿʼಯನ್ನ ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ 6,957 ಕೋಟಿ ರೂ. ವೆಚ್ಚದ 35 ಕಿಮೀ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಕಾಜಿರಂಗ ವನ್ಯ ಸಂಪತ್ತಿಗೆ ರಕ್ಷಾಕವಚವಾಗಲಿದೆ ಎಂದು ನಂಬಲಾಗಿದೆ. ಈ ಯೋಜನೆ ಸಂಪೂರ್ಣ ವಿಷಯ ತಿಳಿಯುವ ಮುನ್ನ ಕಾಜಿರಂಗ ಉದ್ಯಾನದ ವಿಶೇಷತೆ ತಿಳಿಯೋಣ…

ಕಾಜಿರಂಗ & ಎಲಿವೇಟೆಡ್‌ ಕಾರಿಡಾರ್‌ ವಿಶೇಷತೆ ಏನು?
ಅಸ್ಸಾಂಗೆ ಪ್ರವಾಸ ಕೈಗೊಳ್ಳುವವರು ಒಮ್ಮೆ ಈ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡದೇ ಹೋಗುವುದಿಲ್ಲ. ಇದು ಸುಮಾರು 429.69 ಚದರ ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಅಭಯಾರಣ್ಯವಾಗಿದೆ. ಇದು ರಾಷ್ಟ್ರೀಯ ಉದ್ಯಾನವನವಾಗಿದ್ದು, ಅಪರೂಪದ ಹಾಗೂ ವಿಶ್ವದ ಅತಿದೊಡ್ಡ ಒಂಟಿ ಕೊಂಬಿನ ಖಡ್ಗಮೃಗಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಆನೆಗಳು, ಕರಡಿಗಳು, ಚಿರತೆ ಸೇರಿದಂತೆ ಇನ್ನು ಅನೇಕ ಆಕರ್ಷಕ ವನ್ಯಜೀವಿಗಳನ್ನ ಕಾಣಬಹುದಾಗಿದೆ. ಒಟ್ಟಾರೆ 37 ಜಾತಿಯ ಸಸ್ತನಿಗಳು, 500 ಜಾತಿಯ ಪಕ್ಷಿಗಳಿಗೆ ಕಾಜಿರಂಗ ನೆಲೆಯಾಗಿದೆ. ರಾಷ್ಟ್ರೀಯ ಉದ್ಯಾನವು ಮಧ್ಯ ಅಸ್ಸಾಂನ ನಾಂಗಾವ್‌ ಮತ್ತು ಪೂರ್ವ ಅಸ್ಸಾಂನ ಗೋಲಾಘಾಟ್‌ ಜಿಲ್ಲೆಗಳಲ್ಲಿರುವ ಬ್ರಹ್ಮಪುತ್ರ ನದಿಯ ಪ್ರವಾಹ ಪ್ರದೇಶದಲ್ಲಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಚಿವಾಲಯ ಸಮಿತಿಯು ಇಲ್ಲಿನ ಎರಡು ಪಥದ (86 ಕಿಮೀ ಉದ್ದ) ರಸ್ತೆಯನ್ನ 4 ಪಥದ ರಸ್ತೆಯನ್ನಾಗಿ ವಿಸ್ತರಿಸಲು ಅನುಮೋದನೆ ನೀಡಿತು. ಇದು NH -715 ರ ಕಲಿಯಾಬೋರ್-ನುಮಲಿಗಢ ವಿಭಾಗದ ಚತುಷ್ಪಥದ ಭಾಗವಾಗಿದೆ ಮತ್ತು ಜಖಲಬಂಧ ಮತ್ತು ಬೊಕಾಖಾಟ್‌ನಲ್ಲಿ ಬೈಪಾಸ್‌ಗಳ ಜೊತೆಗೆ ಸುಮಾರು 34.45 ಕಿ.ಮೀ ಎತ್ತರದ ವನ್ಯಜೀವಿ ಸ್ನೇಹಿ ಕಾರಿಡಾರ್‌ಗಳನ್ನು ಒಳಗೊಂಡಿದೆ. ಏಕೆಂದ್ರೆ ಅಸ್ಸಾಂನ ಕೆಲವು ಪ್ರಮುಖ ಪಟ್ಟಣಗಳು ಈ ಉದ್ಯಾನದ ಗಡಿಯಲ್ಲಿವೆ. ಈ ಎಲಿವೇಟೆಡ್‌ ಕಾರಿಡಾರ್‌ ವಾಹನ ಸಂಚಾರ ಸುಗಮ ಮಾಡಿಕೊಡಲಿದೆ. ಕೆಳಭಾಗದಲ್ಲಿ ಉದ್ಯಾನವನದಿಂದ ಕರ್ಬಿ ಆಂಗ್ಲಾಂಗ್‌ ಬೆಟ್ಟಗಳಿಗೆ ಪ್ರಾಣಿಗಳು ಸಂಚರಿಸಲು ಅನುವು ಮಾಡಿಕೊಡುತ್ತದೆ.

ವನ್ಯಜೀವಿ ತಜ್ಞರು ಹೇಳುವುದೇನು?
ಕಾಜಿರಂಗ ವಿಶಾಲ ಭೂಪ್ರದೇಶವು ಅನೇಕ ವನ್ಯಜೀವಿ ಸಂಪತ್ತಿನ ಆವಾಸಸ್ಥಾನವಾಗಿದೆ. ಇಲ್ಲಿನ ತಗ್ಗು ಪದೇಶ, ಪ್ರವಾಹಪೀಡಿತ ಪ್ರದೇಶ, ಜೌಗುಪ್ರದೇಶ, ಹುಲ್ಲುಗಾವಲು ಮತ್ತು ಕರ್ಬಿ ಆಂಗ್ಲಾಂಗ್‌ನಂತಹ ಎತ್ತರದ ಪ್ರದೇಶ ಎಲ್ಲವೂ ಪ್ರಾಣಿಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಮಾಡುತ್ತವೆ. ಪ್ರವಾಹ ಸಂಭವಿಸುವ ಸಂದರ್ಭದಲ್ಲಿ ದೊಡ್ಡದೊಡ್ಡ ಭಾಗಗಳು ಮುಳುಗಿದಾಗ ಪ್ರಾಣಿಗಳು ದಕ್ಷಿಣದಲ್ಲಿರುವ ಎತ್ತರದ ಪ್ರದೇಶಕ್ಕೆ ಬರುತ್ತವೆ. ಪ್ರವಾಹ ಕಾಲ ಮುಗಿದಾಗ ಮತ್ತೆ ತಗ್ಗು ಪ್ರದೇಶಗಳಿಗೆ, ಹುಲ್ಲುಗಾವಲು ಪ್ರದೇಶಗಳಿಗೆ ಬರುತ್ತವೆ. ಆದ್ರೆ ಈಗಿರುವ ಹೆದ್ದಾರಿ ಪ್ರಾಣಿ ಸಂಚಾರಕ್ಕೆ ಸಂಚಕಾರ ತರುತ್ತಿದೆ. ಪ್ರಸಕ್ತ ವರ್ಷದಲ್ಲಿ ಪ್ರತಿದಿನಕ್ಕೆ ಸರಾಸರಿ 13,800 ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವುದೂ ಇಲ್ಲಿನ ಅಪಘಾತಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಭಾರತೀಯ ವನ್ಯಜೀವಿ ಟ್ರಸ್ಟ್‌ನ ನಿರ್ದೇಶಕ ಡಾ. ರಥಿನ್ ಬರ್ಮನ್.

6,000 ಪ್ರಾಣಿಗಳ ಮಾರಣಹೋಮ
ಗುವಾಹಟಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕ ಸದಸ್ಯರಾದ ಪ್ರಶಾಂತ ಕುಮಾರ್ ಸೈಕಿಯಾ ಮತ್ತು ಮಾಲಬಿಕಾ ಕಾಕತಿ ಸೈಕಿಯಾ ಹಾಗೂ ಸಂಶೋಧನಾ ವಿದ್ವಾಂಸ ಸೊಮೊಯಿತಾ ಸುರ್ ಅವರನ್ನೊಳಗೊಂಡ ತಂಡ ಇಲ್ಲಿನ ಅಪಘಾತಗಳ ಬಗ್ಗೆ 2022ರಲ್ಲಿ ಒಂದು ಅಧ್ಯಯನ ನಡೆಸಿತ್ತು. NH-715 ಭಾಗದಲ್ಲಿ 2016ರ ಅಕ್ಟೋಬರ್‌ ಮತ್ತು 2017ರ ನಡುವೆ ರಸ್ತೆ ಅಪಘಾತಗಳಲ್ಲಿ ಪ್ರಾಣಿಗಳು ಸಾವನ್ನಪ್ಪಿದ್ದ ಬಗ್ಗೆ ಅಧ್ಯಯನ ನಡೆಸಿತ್ತು. ಈ ಅವಧಿಯಲ್ಲಿ ವಾಹನಗಳಿಗೆ ಡಿಕ್ಕಿಯಾಗಿ ವಿವಿಧ ಬಗೆಯ 6,036 ಪ್ರಾಣಿಗಳು ಸಾವನ್ನಪ್ಪಿದ್ದವು. ಈ ಪೈಕಿ 63.6% ನಷ್ಟು ಅಪಘಾತ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಪ್ರವಾಹದ ಸಂದರ್ಭದಲ್ಲಿ ಸಂಭವಿಸಿದ್ದು ಎಂಬುದನ್ನ ಈ ತಂಡ ಕಂಡುಕೊಂಡಿತ್ತು. ಹೆದ್ದಾರಿಯಲ್ಲಿ ವಾಹನಗಳ ಅತಿಯಾದ ವೇಗವೇ ಅಪಘಾತಗಳಿಗೆ ಕಾರಣ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿತ್ತು. ಆ ಬಳಿಕ ಪ್ರಾಣಿ ಸಂಘರ್ಷ ಕಡಿಮೆ ಮಾಡಲು ಅಭಿವೃದ್ಧಿ ನಿಲ್ಲಿಸಬೇಕಿಲ್ಲ. ಬದಲಿಗೆ ಪರಿಸರ ಸ್ನೇಹಿ ವಿನ್ಯಾಸಗಳನ್ನ ಮಾರ್ಪಾಡು ಮಾಡಿದರೆ ಸಾಕು ಅನ್ನೋದು ಈ ಅಧ್ಯಯನ ತಂಡದ ನಿಲುವಾಗಿತ್ತು. ಇದೀಗ ಎಲಿವೇಟೆಡ್‌ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಿರುವುದು ಇದಕ್ಕೆ ಸಿಕ್ಕ ಜಯ ಎಂದೇ ಹೇಳಬಹುದು.

ಅರಣ್ಯಾಧಿಕಾರಿಗಳು ಹೇಳುವುದೇನು?
ಕಾಜಿರಂಗ ವಿಭಾಗೀಯ ಅರಣ್ಯ ಅಧಿಕಾರಿ ಅರುಣ್ ವಿಘ್ನೇಶ್ ಅವರು ಹೇಳುವಂತೆ, ವಾಹನಗಳ ಸಂಖ್ಯೆ ಹೆಚ್ಚಿದ್ದಂತೆ ಅಪಘಾತಗಳಿಗೆ ಪ್ರಾಣಿ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಎಲಿವೇಟೆಡ್‌ ಕಾರಿಡಾರ್‌ ನಂತಹ ರಸ್ತೆಗಳ ಮೂಲಕ ಭಾರೀ ವಾಹನಗಳ ಚಲನೆಯನ್ನ ತಪ್ಪಿಸಿದ್ರೆ, ಪ್ರಾಣಿಗಳ ಸಂತತಿ ಬೆಳವಣಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಬಹುದು ಎಂದಿದ್ದಾರೆ. ಅಷ್ಟೇ ಅಲ್ಲದೇ ಪ್ರಾಣಿಗಳು ನಿತ್ಯ ರಸ್ತೆ ದಾಟುವ 6 ಪ್ರಮುಖ ಪ್ರದೇಶಗಳನ್ನ ಗುರುತಿಸಲಾಗಿದ್ದು, ಇಲ್ಲಿ ಪ್ರಾಣಿ ಸಂವೇದಕ (ಸೆನ್ಸಾರ್‌) ಅಳವಡಿಸಬೇಕಿದೆ. ಇದರಿಂದ ಪ್ರಾಣಿಗಳು ಹೆದ್ದಾರಿ ಸಮೀಪ ಬರುತ್ತಿದ್ದಂತೆ ನಮಗೆ ಕೂಡಲೇ ಸಿಗ್ನಲ್‌ ಬರುತ್ತದೆ. ಆಗ ರಸ್ತೆಗಳಲ್ಲಿ ವಾಹನ ಸಂಚಾರವನ್ನ ನಿಯಂತ್ರಿಸಿ ಪ್ರಾಣಿಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದು. ಆದ್ರೆ ಇದು ತಾತ್ಕಾಲ್ಕಿಕ ಕ್ರಮ. ಕಾರಿಡಾರ್‌ ವ್ಯವಸ್ಥೆಯಿಂದ ಪರಿಹಾರ ಪಡೆಯಬಹುದು ಎಂದು ಸಹ ಅರುಣ್‌ ವಿಘ್ನೇಷ್‌ ಹೇಳಿದ್ದಾರೆ.

ಅದ್ಭುತ ವನ್ಯ ಸಂಪತ್ತನ್ನು ಹೊಂದಿರುವ ಈ ಕಾಜಿರಂಗದಲ್ಲಿ ಕಳೆದ 30 ವರ್ಷಗಳಿಂದ ಪ್ರಾಣಿಗಳ ಉಳಿವಿಗಾಗಿ ಹೋರಾಟ ನಡೆಯುತ್ತಲೇ ಇದೆ. ಆದ್ರೆ ಮುಂದೆ ಸ್ಥಾಪನೆಯಾಗಲಿರುವ ಎಲಿವೇಟೆಡ್‌ ಕಾರಿಡಾರ್‌ ಅದೆಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎನ್ನೋದನ್ನ ಕಾದುನೋಡಬೇಕಿದೆ.

Share This Article