ಮನೆ ಬಾಗಿಲಿಗೆ ಬಂದ ಐಸಿಯು ಸೇವೆ

Public TV
2 Min Read

ನವದೆಹಲಿ: ವೆಂಟಿಲೇಟರ್ಸ್, ವೈದ್ಯರ ಸೇವೆಗಳು ಮನೆಯ ಬಾಗಿಲಿಗೆ ಬಂದಾಯ್ತು ಈಗ ತುರ್ತು ನಿಘಾ ಘಟಕ(ಐಸಿಯು) ಸೇವೆಯು ದೊರೆಯಲಿದೆ.

ಜನವರಿ 2 ರಂದು 77 ವರ್ಷದ ಡಿ ಸಿ ಗಂಭೀರ್ ಎಂಬವರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಜ್ಞಾನ ತಪ್ಪಿದ್ದರು. ನಂತರ ಫರಿಧಾಬಾದ್ ಆಸ್ಪತ್ರೆಯಲ್ಲಿ 2 ತಿಂಗಳು ಚಿಕಿತ್ಸೆ ಪಡೆದ ಅವರು ಕೋಮಾ ಸ್ಥಿತಿಯಲ್ಲಿ ಮನೆಯ ಗೆಸ್ಟ್ ರೂಮ್ ನಲ್ಲಿ ಮಲಗಿದ್ದಾರೆ. ಗಂಭೀರ್ ಅವರಿರುವ ರೂಮ್ ಸದ್ಯ ಐಸಿಯು ಆಗಿ ಮಾರ್ಪಾಡಾಗಿದೆ. ಉಸಿರಾಡುವ ಯಂತ್ರ, ಆಮ್ಲಜನಕ ಸಿಲಿಂಡರ್, ಹೃದಯ ಸಂಬಂಧಿ ಯಂತ್ರಗಳು ಹಾಗೂ ಇತರೆ ಜೀವ ಉಳಿಸುವ ಸಾಧನಗಳು ಹಾಸಿಗೆ ಸುತ್ತಾ ಇದೆ.

ಗಂಭೀರ್ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬರದಿದ್ದರು ಆಸ್ಪತ್ರೆಯಲ್ಲಿ ನೋಡಿಕೊಳ್ಳುವುದಕ್ಕಿಂತ ಮನೆಯಲ್ಲಿ ನೋಡಿಕೊಳ್ಳುವುದು ಸುರಕ್ಷಿತ ಹಾಗೂ ಸುಲಭ ಎಂದು ಅವರ ಮಗ ವಿಕಾಸ್ ಹೇಳುತ್ತಾರೆ.

ಐಸಿಯುನಲ್ಲಿ ಇದ್ದಾಗ ಹುಣ್ಣುಗಳು ಆಗುತ್ತಿತ್ತು. ಐಸಿಯು ಸಿಬ್ಬಂದಿ ಪ್ರತಿ ರೋಗಿಗೂ ಪ್ರತ್ಯೇಕ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ರೋಗಿಗೆ ಸಮಸ್ಯೆಯನ್ನು ಹೇಳಲು ಆಗದಿದ್ದಾಗ ಪರಿಸ್ಥಿತಿ ಉಲ್ಭಣವಾಗುತ್ತದೆ. ಒಂದು ಹಂತವನ್ನು ಮೀರಿ ಐಸಿಯು ನಲ್ಲಿ ರೋಗಿಯನ್ನು ಇರಿಸಿದಾಗ ಮೂಲ ಸಮಸ್ಯೆ ಗುಣವಾಗುವುದಕ್ಕಿಂತ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಮನೆಯಲ್ಲಿ ಸೋಂಕನ್ನು ಹತೋಟಿಯಲ್ಲಿ ಇಡಬಹುದು ಜೊತೆಗೆ ಎಷ್ಟು ಹೊತ್ತು ಬೇಕು ಅಷ್ಟು ಹೊತ್ತು ಇವರ ಜೊತೆ ಇರಬಹುದು. ಐಸಿಯು ನಲ್ಲಿ 15 ನಿಮಿಷದಂತೆ ಎರಡು ಸಲ ದಿನಕ್ಕೆ ಭೇಟಿ ಮಾಡಬಹುದಿತ್ತು ಎಂದು ಹೇಳಿದರು.

ಐಸಿಯು ಭೇಟಿ ರೋಗಿಗಳಿಗೆ ಹಾಗೂ ಭೇಟಿ ಮಾಡುವವರಿಗೆ ಆರೋಗ್ಯಕರವಲ್ಲ. ಈಗ ಫಿಲಿಪ್ಸ್, ಡಾಬರ್ ಹಾಗೂ ಕೆಲ ಹೊಸ ಸ್ಟಾರ್ಟ್ ಅಪ್ ಕಂಪೆನಿಗಳು ಐಸಿಯು ಸೇವೆಯನ್ನು ಒದಗಿಸುತ್ತಿವೆ.

ಕಳೆದ ವರ್ಷ ದೆಹಲಿ ಎನ್‍ಸಿಆರ್ ಪ್ರದೇಶದಲ್ಲಿ ಫಿಲಿಪ್ಸ್ ಐಸಿಯು ಸೇವೆಯನ್ನು ಆರಂಭಿಸಿತು. 10 ರಿಂದ 25 ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ ಎಂದು ಕಂಪೆನಿಯ ರಿಚಾ ಸಿಂಗ್ ತಿಳಿಸಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ನ್ಯೂಕ್ಲಿಯಸ್ ಕುಟುಂಬಗಳು ಹೆಚ್ಚಾಗುತ್ತಿವೆ. ಹಾಗಾಗಿ ಮನೆಯಲ್ಲಿ ಐಸಿಯು ಸೇವೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಆಸ್ಪತ್ರೆಗಳು ಮನೆಯಿಂದ ದೂರ ಇದ್ದಾಗ ತುರ್ತು ಚಿಕಿತ್ಸೆಗೆ ಐಸಿಯು ಸೇವೆ ಬಹಳ ಸಹಾಯವಾಗುತ್ತದೆ ಎಂದು ಜನರಲ್ಲಿ ಭಾವನೆ ಮೂಡುತ್ತಿದೆ ಎಂದು ಹೆಲ್ತ್ ಕೇರ್ ವಿಭಾಗದ ನೌಕರರೊಬ್ಬರು ತಿಳಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಸೇವೆ ಪಡೆಯಲು ದಿನಕ್ಕೆ 30 ರಿಂದ 50 ಸಾವಿರ ಪಾವತಿ ಮಾಡಬೇಕಾಗುತ್ತದೆ. ಮನೆಯಲ್ಲೇ ಆದರೆ 7,500 ರೂ ರಿಂದ 12,500 ರೂಗಳಿಗೆ ವೆಚ್ಚ ತಗ್ಗಲಿದೆ ಎಂದು ಸ್ಟಾರ್ಟ್ ಅಪ್ ಕಂಪೆನಿಯ ಕಾರ್ಯನಿರ್ವಾಣಾಧಿಕಾರಿ ರಾಜೀವ್ ಮಾಥೂರ್ ತಿಳಿಸಿದ್ದಾರೆ. ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ 630 ರೋಗಿಗಳಿಗೆ ಸೇವೆಯನ್ನು ಕಲ್ಪಿಸಿದ್ದು ಸದ್ಯದಲ್ಲೇ ಇನ್ನೊಂದು ಶಾಖೆಯನ್ನು ಮುಂಬೈಯಲ್ಲಿ ತೆರೆಯಲಿದ್ದೇವೆ ಎಂದು ತಿಳಿಸಿದರು.

ಐಸಿಯು ಸೇವೆ ಒದಗಿಸಲು ಮನೆಯಲ್ಲಿ ವ್ಯವಸ್ಥಿತವಾದ ಶುಚಿಯಾದ ರೂಮ್ ಇದ್ದು ಅನಿಯಂತ್ರಿತ ಪವರ್ ಬ್ಯಾಕ್ ಅಪ್ ಮತ್ತು ಸ್ಟೆಬಿಲೈಜರ್ಸ್ ಇರಬೇಕು. ಆಸ್ಪತ್ರೆಯವರ ಅನುಮತಿ ಪಡೆದ ಮೇಲೆ ರೋಗಿಯನ್ನು ಮನೆಯ ಐಸಿಯುಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *