H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

Public TV
3 Min Read

ಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಹೆಚ್‌1ಬಿ ವೀಸಾದ ಶುಲ್ಕವನ್ನು 1,00,000 ಡಾಲರ್‌(88 ಲಕ್ಷ ರೂ.) ಏರಿಕೆ ಮಾಡುವ ಮೂಲಕ ಭಾರತೀಯ ಟೆಕ್ಕಿಗಳಿಗೆ ಶಾಕ್‌ ನೀಡಿದ್ದಾರೆ. ಹೀಗಾಗಿ ಇಲ್ಲಿ ಮೊದಲು ಹೆಚ್‌1ಬಿ ವೀಸಾದ ದರ ಎಷ್ಟಿತ್ತು? ಟ್ರಂಪ್‌ ನಿರ್ಧಾರದಿಂದ ಭಾರತಕ್ಕೆ ಲಾಭ ಆಗುತ್ತೋ? ಇಲ್ವೋ ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಮೊದಲು ಎಷ್ಟಿತ್ತು?
ಇಲ್ಲಿಯವರೆಗೆ H-1B ವೀಸಾಗೆ ಕಂಪನಿಗಳು‌ ಒಬ್ಬ ಉದ್ಯೋಗಿಗೆ 1,700 ಡಾಲರ್‌ (1.49 ಲಕ್ಷ ರೂ.) ನಿಂದ 8,000 ಡಾಲರ್ (7.04 ಲಕ್ಷ ರೂ.) ಹಣವನ್ನು ಶುಲ್ಕವಾಗಿ ಪಾವತಿಸುತ್ತಿದ್ದವು. ಈ ದರ ಕಂಪನಿಯಿಂದ ಕಂಪನಿಗೆ ಬದಲಾಗುತ್ತಿದ್ದವು. ಕಂಪನಿಯ ಗಾತ್ರ, ಪ್ರಕ್ರಿಯೆಯ ವೇಗ ಮತ್ತು ವೀಸಾ ಪ್ರಕಾರವನ್ನು ಅವಲಂಬಿಸಿ ದರ ನಿಗದಿಯಾಗುತ್ತಿದ್ದವು.

ಅಮೆರಿಕವು ಲಾಟರಿ ವ್ಯವಸ್ಥೆಯ ಮೂಲಕ ವರ್ಷಕ್ಕೆ 85,000 H-1B ವೀಸಾಗಳನ್ನು ಹಂಚಿಕೆ ಮಾಡುತ್ತದೆ. ಈ ವೀಸಾದಲ್ಲಿ ಮುಕ್ಕಾಲು ಭಾಗದಷ್ಟು ವೀಸಾ ಭಾರತೀಯರ ಪಾಲಾಗುತ್ತದೆ. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

 

ಭಾರತವೇ ಟಾಪ್‌:
2024 ರಲ್ಲಿ ಅನುಮೋದನೆಗೊಂಡ 399,395 H1B ವೀಸಾ (ಇದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಅಥವಾ USCIS ಅನುಮೋದಿಸಿದ ಅರ್ಜಿಗಳ ಸಂಖ್ಯೆ; ಮತ್ತು US ನಲ್ಲಿ ವಾಸಿಸುವ ಜನರು ತಮ್ಮ ಸ್ಥಾನಮಾನವನ್ನು ಬದಲಾಯಿಸಿಕೊಳ್ಳುವುದನ್ನು ಒಳಗೊಂಡಿದೆ) ಪೈಕಿ ಹೆಚ್ಚಿನ ವೀಸಾ ಭಾರತೀಯರಿಗೆ ಸಿಕ್ಕಿದೆ. 71% ರಷ್ಟು ಭಾರತೀಯರಿದ್ದರೆ 11.7% ರೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.

ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಕಾನ್ಸುಲರ್ ಅಫೇರ್ಸ್ ಬ್ಯೂರೋ ನೀಡಿದ ಮಾಹಿತಿ ಪ್ರಕಾರ 1997 ರಿಂದ 2024 ರವರೆಗಿನ 4.1 ಮಿಲಿಯನ್ H1B ವೀಸಾ ಪಡೆದವರಿಗೆ ಅಮೆರಿಕದ ಪೌರತ್ವ ನೀಡಲಾಗಿದೆ. ಈ ಪೈಕಿ 2.5 ಮಿಲಿಯನ್ ಅಥವಾ 60% ಪೌರತ್ವ ಭಾರತೀಯರಿಗೆ ಸಿಕ್ಕಿದೆ. ಚೀನಾ 9% ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದೆ. ಮೂರನೇ ಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಮ್ ಇದೆ.

ಭಾರತದ ಮೇಲೆ ಪರಿಣಾಮ ಏನು?
ಈ H1B ವೀಸಾ ಹೊಂದಿದರೆ ಅಮೆರಿಕದ ಪೌರತ್ವ ಸಿಗುವುದಿಲ್ಲ. ಬದಲಾಗಿ ಅಮೆರಿಕದಲ್ಲಿರುವ ಕಂಪನಿಗಳಲ್ಲಿ ಕೆಲಸ ಮಾಡಲು ಸರ್ಕಾರ ಅನುಮತಿ ನೀಡುವ ಕಾರ್ಡ್‌. ಅಮೆರಿಕದ ಶಾಶ್ವತ ಪೌರತ್ವ ಸಿಗಬೇಕಾದರೆ ಗ್ರೀನ್‌ ಕಾರ್ಡ್‌ ಪಡೆಯಬೇಕಾಗುತ್ತದೆ. H1B ವೀಸಾ ಪಡೆದವರು ಗ್ರೀನ್‌ ಕಾರ್ಡ್‌ ಪಡೆಯಬೇಕಾಗಬಹುದು. ನಿರ್ದಿಷ್ಟ ಸಮಯದವರೆಗೆ ಅಮೆರಿಕದಲ್ಲಿ ನೆಲೆಸಿರಬೇಕು(ಐದು ವರ್ಷಗಳಲ್ಲಿ ಕನಿಷ್ಠ 30 ತಿಂಗಳುಗಳು), ಉತ್ತಮ ನೈತಿಕತೆಯನ್ನು ಹೊಂದಿರುವುದು. ಇಂಗ್ಲಿಷ್ ಭಾಷಾ ಪರೀಕ್ಷೆ ಮತ್ತು ಅಮೆರಿಕ ಪೌರತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಂತಿಮವಾಗಿ ಗ್ರೀನ್‌ ಕಾರ್ಡ್‌ ನೀಡಲಾಗುತ್ತದೆ.

ಈ ನಿರ್ಧಾರ ಈಗ ಯಾಕೆ?
ಟ್ರಂಪ್‌ ಚುನಾವಣಾ ಸಮಯದಲ್ಲಿ MAGA(Make America Great Again) ಅಭಿಯಾನ ಆರಂಭಿಸಿದ್ದರು. ವಲಸಿಗರು ಅಮೆರಿಕನ್ನರ ಉದ್ಯೋಗ ಕಸಿಯುತ್ತಿದ್ದಾರೆ. ನಾನು ಅಧ್ಯಕ್ಷನಾದರೆ ವಲಸೆ ಮೇಲೆ ಕಠಿಣ ನಿಯಮ ಜಾರಿ ಮಾಡುತ್ತೇನೆ ಎಂದಿದ್ದರು. ಇದರ ಭಾಗವಾಗಿ ಈಗ H1B ವೀಸಾದ ಮೇಲೆ ಕಠಿಣ ನಿಯಮ ಜಾರಿ ಮಾಡಿದ್ದಾರೆ.

ಭಾರತಕ್ಕೆ ಲಾಭ?
ಈಗಾಗಲೇ H1B ವೀಸಾ ಪಡೆದವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಮುಂದೆ ವೀಸಾ ಪಡೆಯುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಹೀಗಾಗಿ ಈಗಾಗಲೇ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಪಡೆಯುವ ಭಾರತೀಯರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ H1B ವೀಸಾ ಪಡೆಯುವ ಕನಸು ಹೊಂದಿದ್ದರಿಗೆ ಇನ್ನು ಮುಂದೆ ಅಷ್ಟು ಸುಲಭವಾಗಿ ವೀಸಾ ಸಿಗಲಾರದು.

H1B ವೀಸಾದಿಂದ ಅಮೆರಿಕ ಕಂಪನಿಗಳಿಗೆ ಬಹಳಷ್ಟು ಲಾಭವಾಗುತ್ತಿತ್ತು. ಭಾರತದಿಂದ ಪ್ರತಿಭಾ ಪಲಾಯನವಾಗುತ್ತಿತ್ತು. ಆದರೆ ಇನು ಮುಂದೆ ಭಾರತದ ಪ್ರತಿಭೆಗಳು ಭಾರತದಲ್ಲೇ ಕಂಪನಿ  ಹುಟ್ಟು ಹಾಕುವ ಸಾಧ್ಯತೆ ಇರುವುದಿಂದ  ಟ್ರಂಪ್‌ ಈ ನಿರ್ಧಾರ ಭವಿಷ್ಯದಲ್ಲಿ ದೇಶಕ್ಕೆ ನೆರವಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

Share This Article