ತಲೆಗೆ 10 ಮಿಲಿಯನ್‌ ಡಾಲರ್‌ ಬಹುಮಾನ ಘೋಷಿಸಿದ್ದ ʼಉಗ್ರʼನ ಜೊತೆ ಪತ್ನಿ ಎಷ್ಟು ಎಂದು ಕೇಳಿದ ಟ್ರಂಪ್‌

Public TV
2 Min Read

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಸಿರಿಯನ್ (Syria) ಅಧ್ಯಕ್ಷ ಅಹ್ಮದ್ ಅಲ್-ಶರಾ (Ahmed Al-Sharaa) ಅವರ ಬಳಿ ನಿಮಗೆ ಎಷ್ಟು ಪತ್ನಿಯರು ಎಂದು ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಹ್ಮದ್ ಅಲ್-ಶರಾ ಅವರನ್ನು ತಮ್ಮ ಅಧ್ಯಕ್ಷೀಯ ನಿವಾಸ ಶ್ವೇತಭವನದಲ್ಲಿ (White House) ಭೇಟಿಯಾದ ಟ್ರಂಪ್‌ ತಮ್ಮ ಕಂಪನಿ ಬಿಡುಗಡೆ ಮಾಡಿರುವ ʼವಿಕ್ಟರಿ 45–47′ ಹೆಸರಿನ ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡಿದರು.

ಸುಂಗಧ ದ್ರವ್ಯವನ್ನು ಅಲ್-ಶರಾ ಮತ್ತು ಅವರ ಸಿಬ್ಬದಿ ಮೇಲೆ ಸ್ಪ್ರೇ ಮಾಡಿದ ನಂತರ ಟ್ರಂಪ್‌, ಇದು ನಿಮ್ಮ ಪತ್ನಿಗೆ ನೀಡುತ್ತಿದ್ದೇನೆ. ನಿಮಗೆ ಎಷ್ಟು ನಿಮಗೆ ಎಷ್ಟು ಪತ್ನಿಯರು ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಅಲ್-ಶರಾ ಒಬ್ಬಳು ಎಂದು ಉತ್ತರ ನೀಡಿ ನಕ್ಕಿದ್ದಾರೆ.

1946 ರಲ್ಲಿ ಸಿರಿಯಾ ಸ್ವಾತಂತ್ರ್ಯ ಪಡೆದ ನಂತರ ಸಿರಿಯಾದ ರಾಷ್ಟ್ರದ ಮುಖ್ಯಸ್ಥರೊಬ್ಬರು ಅಮೆರಿಕದ ಅಧ್ಯಕ್ಷರ ನಿವಾಸಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ. ದ್ವಿಪಕ್ಷಿಯ ಮಾತುಕತೆಯ ವೇಳೆ ಅಲ್-ಶರಾ ಇಸ್ಲಾಮಿಕ್ ಸ್ಟೇಟ್ ಗುಂಪಿನ ವಿರುದ್ಧದ ಜಾಗತಿಕ ಒಕ್ಕೂಟಕ್ಕೆ ಸೇರುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ:  ಸಿರಿಯಾದಲ್ಲಿ ಬಿಕ್ಕಟ್ಟು – ಅಲ್ಲೋಲ ಕಲ್ಲೋಲ ಎಬ್ಬಿಸಿದೆ ಆಕೆಯ ಒಂದು ವೀಡಿಯೋ; ದೊಡ್ಡಣ್ಣನ ಕುತಂತ್ರದಿಂದ ಹೀಗಾಯ್ತಾ?

ಈ ಹಿಂದೆ ಅಲ್‌ ಶರಾ ಅವರನ್ನು ಉಗ್ರ ಎಂದು ಅಮೆರಿಕ ಕರೆದಿತ್ತು. ಅಷ್ಟೇ ಅಲ್ಲದೇ ಅಲ್‌ ಶರಾ ತಲೆಗೆ 10 ಮಿಲಿಯನ್‌ ಡಾಲರ್‌ ಬಹುಮಾನ ಸಹ ಘೋಷಿಸಿತ್ತು. ಅಲ್-ಖೈದಾ ಜೊತೆ ಸಂಬಂಧ ಹೊಂದಿರುವ ಸಿರಿಯನ್ ಭಯೋತ್ಪಾದಕ ಗುಂಪಿನ ನಾಯಕ ಎಂದು ಅಮೆರಿಕ ಹೇಳಿತ್ತು.

ಅಮೆರಿಕ ಅಲ್-ಶರಾಗೆ ಬೆಂಬಲ ನೀಡಿದ್ದೇಕೆ?
1971 ರಿಂದ 2000 ಇಸ್ವಿವರೆಗೆ ಸಿರಿಯಾವನ್ನು ಹಫೀಸ್‌ ಅಲ್‌ ಅಸಾದ್‌ ಆಡಳಿತ ನಡೆಸಿದರೆ 2000 ದಿಂದ ಇಲ್ಲಿಯವರೆಗೆ ಮಗ ಬಶರ್‌ ಅಲ್‌ ಅಸಾದ್‌ ಆಡಳಿತ ನಡೆಸಿದ್ದರು. ಅಂದರೆ ಒಟ್ಟು 50 ವರ್ಷ ಇಲ್ಲಿ ಅಸಾದ್‌ ಕುಟುಂಬವೇ ಆಡಳಿತ ನಡೆಸಿತ್ತು. ಸಿರಿಯಾದಲ್ಲಿದ್ದ ಸುನ್ನಿ ಮುಸ್ಲಿಮರು ಅಸಾದ್‌ ಕುಟುಂಬಕ್ಕೆ ಗೌರವ ನೀಡುತ್ತಿದ್ದರು. ಆದರೆ ಯಾವಾಗ ಅಸಾದ್‌ ತನ್ನ ವಿರೋಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದರೋ ಅದು ಸುನ್ನಿ ಮುಸ್ಲಿಮರ ಕೋಪಕ್ಕೆ ಗುರಿಯಾಯ್ತು. ಪರಿಣಾಮ ಅಸಾದ್‌ ವಿರುದ್ಧ ತಿರುಗಿಬಿದ್ದ ಸುನ್ನಿ ಸಂಘಟನೆಗಳು ಹೋರಾಟವನ್ನೇ ಆರಂಭಿಸಿದ್ದರಿಂದ ಸಿರಿಯಾದಲ್ಲಿ ಅಂತರ್‌ ಯುದ್ಧ ಆರಂಭವಾಯಿತು. ಅಸಾದ್‌ಗೆ ರಷ್ಯಾ ಮತ್ತು ಇರಾನ್‌ ಬೆಂಬಲ ನೀಡಿತ್ತು.

ಇನ್ನೊಂದು ಕಡೆ ಅಸಾದ್‌ ಪರ ಐಸಿಸ್‌ ಉಗ್ರ ಸಂಘಟನೆ ಬೆಂಬಲ ನೀಡಿತ್ತು. ಇಸ್ರೇಲ್‌ ವಿರುದ್ಧ ಹೋರಾಟದಲ್ಲಿ ಸಿರಿಯಾ ಇರಾನ್‌ಗೆ ಬೆಂಬಲ ನೀಡಿದ್ದು ಅಮೆರಿಕದ ಸಿಟ್ಟಿಗೆ ಕಾರಣವಾಗಿತ್ತು. 2024 ರಲ್ಲಿ ಅಂತರ್‌ಯುದ್ಧ ಜೋರಾಗುತ್ತಿದ್ದಂತೆ ಅಸಾದ್‌ ಸರ್ಕಾರವನ್ನು ಬಂಡುಕೋರರು ಕೆಡವಿದರು. ಈ ಬಂಡುಕೋರರಿಗೆ ಅಮೆರಿಕ ಬೆಂಬಲ ನೀಡಿತ್ತು. ಅಮೆರಿಕದ ಬೆಂಬಲದಿಂದ ಬಂಡುಕೋರ ನಾಯಕ ಅಲ್‌ ಶರಾ ಸಿರಿಯಾದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು.

Share This Article