ಬಿಎಂಟಿಸಿಗೆ ಗೃಹಿಣಿ ಬಲಿ – ಬಸ್ ಚಾಲಕ, ನಿರ್ವಾಹಕ ಎಸ್ಕೇಪ್

Public TV
1 Min Read

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿ (BMTC) ಬಸ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿ ಬುಧವಾರ ಸಂಜೆ ಬಿಎಂಟಿಸಿಗೆ ಗೃಹಿಣಿಯೊಬ್ಬರು ಬಲಿಯಾದ ಘಟನೆ ಸಿಲ್ಕ್‌ಬೋರ್ಡ್‌  (Sikboard) ಸಮೀಪದ ಮಡಿವಾಳ ಫ್ಲೈಓವರ್ (Madiwala Flyover) ಮೇಲೆ ನಡೆದಿದೆ.

ಸೀಮಾ ಬಿಎಂಟಿಸಿಗೆ ಬಲಿಯಾದ ಗೃಹಿಣಿ. ಬುಧವಾರ ಸಂಜೆ 6:30ರ ವೇಳೆಗೆ ಘಟನೆ ನಡೆದಿದ್ದು, ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ಆರೋಪಿಸಲಾಗಿದೆ. ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗುದ್ದಿದ್ದರಿಂದ ಸವಾರರು ಆಯತಪ್ಪಿ ಬಿದ್ದಿದ್ದಾರೆ. ಘಟನೆಯಲ್ಲಿ ಗೃಹಿಣಿ ಸಾವನ್ನಪ್ಪಿದರೆ ಒಂದೂವರೆ ವರ್ಷದ ಮಗು ಗಾನವಿ ಹಾಗೂ ಆಕೆಯ ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ

ತಮ್ಮ ಮಗುವಿನೊಂದಿಗೆ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು, ಕಳೆದ 8 ವರ್ಷದಿಂದ ಬೆಸ್ಕಾಂನಲ್ಲಿ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ವಿಜಯನಗರ ಜಿಲ್ಲೆ, ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ ತಾಂಡದ ನಿವಾಸಿಗಳಾದ ದಂಪತಿ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತ ಗೃಹಿಣಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಬಳಿಕ ಚಾಲಕ ಮತ್ತು ನಿರ್ವಾಹಕ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾ ಖಾತೆ ಇಲ್ಲ – ಮನೋರಂಜನ್ ಬೆಂಗಳೂರು ನೆಟ್‌ವರ್ಕ್ ಯಾವುದು?

Share This Article