ವಿಡಿಯೋ: ರಾಜಕಾಲುವೆ ಕಟ್ಟೋಕೆ ಹೋಗಿ ಮನೆಗಳಲ್ಲಿ ಬಿರುಕು- ಬಿಬಿಎಂಪಿ ಎಡವಟ್ಟಿಗೆ ಜನರ ಪರದಾಟ

Public TV
1 Min Read

ಬೆಂಗಳೂರು: ಮಧ್ಯರಾತ್ರಿ ಸಮಯ ಬೆಂಗಳೂರು ವಿಜಯನಗರದ ಟೆಲಿಕಾಂ ಲೇಔಟ್ ಜನ ಸವಿನಿದ್ದೆಯಲ್ಲಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಭೂಮಿ ಕಂಪಿಸಿದಂತೆ ಭಾಸವಾಗಿದೆ. ಮನೆಗಳು, ರಸ್ತೆ ಬಿರುಕು ಬಿಟ್ಟಂತೆ ಆಗಿದೆ. ಇದು ಬಿಬಿಎಂಪಿ ಸೃಷ್ಟಿಸಿದ ಕೃತಕ ಭೂಕಂಪನದ ಕಂಪನ.

ಬಿರುಕು ಬಿಟ್ಟ ರಸ್ತೆ, ಇನ್ನೇನು ಕುಸಿದು ಬಿದ್ದೇ ಬಿಡುತ್ತೆ ಅಂತಾ ಭಯ ಮೂಡಿಸೋ ಕ್ರ್ಯಾಕ್, ರಸೆ-ಮನೆ ಎಲ್ಲ ಕಡೆಯೂ ಬಿರುಕು. ಹಾಗಂತ ಇಲ್ಲಿ ಭೂಕಂಪವಾಗಿಲ್ಲ. ಇದು ವಿಜಯನಗರದ ಟೆಲಿಕಾಂ ಲೇಔಟ್‍ನಲ್ಲಿ ಬಿಬಿಎಂಪಿ ಸೃಷ್ಟಿಸಿದ ಭೂಕಂಪ. ಈ ಮನೆಗಳ ಹಿಂದಿನ ರಸ್ತೆಯಲ್ಲಿ ರಾಜಕಾಲುವೆ ಹರಿದು ಹೋಗುತ್ತೆ. ಮಳೆ ಬಂದಾಗ ಎಡವಟ್ಟಾಗುತ್ತೆ ಅಂತಾ ತಡೆಗೋಡೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಅಲ್ಲಿರುವ ಮನೆಗಳನ್ನು ಸ್ಥಳಾಂತರ ಮಾಡದೇ ಏಕಾಏಕಿ ಜೆಸಿಬಿಯಲ್ಲಿ ಇಪ್ಪತ್ತು ಅಡಿ ಭೂಮಿ ಕೊರೆದು ಕಾಂಕ್ರಿಟ್ ವಾಲ್ ಮಾಡಿದೆ. ಇದರ ಪರಿಣಾಮ ಹದಿನೈದು ಮನೆಗಳು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿವೆ.

ರಾತ್ರಿ ವೇಳೆ ಮನೆಯಿಂದ ಹೊರಗೆ ಓಡಿ ಬಂದ ಜನ ಬೀದಿಯಲ್ಲಿಯೇ ನಿಂತ್ರು. ಬಿಬಿಎಂಪಿ ಎಡವಟ್ಟಿಗೆ ಹಿಡಿಶಾಪ ಹಾಕಿದ್ರು. ಮನೆಯೆಲ್ಲಾ ಬಿರುಕು ಬಿಟ್ಟ ಮೇಲೆ ಸ್ಥಳಕ್ಕೆ ಬಂದ ಎಂಜಿನಿಯರ್ ಮನೆಯಲ್ಲಿ ಇರಬೇಡಿ, ಸ್ಥಳಾಂತರ ಮಾಡಿ ಅಂತಾ ನೋಟಿಸ್ ನೀಡಲು ಮುಂದಾದಾಗ ಜನ ತರಾಟೆಗೆ ತೆಗೆದುಕೊಂಡ್ರು. ಕೆಲಸ ಪ್ರಾರಂಭ ಮಾಡುವ ಮುನ್ನ ನೀಡಬೇಕಾದ ನೋಟಿಸ್ ಈಗ ನೀಡಿದ್ರೆ ಏನ್ ಪ್ರಯೋಜನ ಅಂತಾ ಕಿಡಿ ಕಾರಿದ್ರು.

ಬಿಡಿಎನಿಂದ ಪಡೆದ ಸೈಟ್‍ಗಳಲ್ಲಿ ಮನೆ ಕಟ್ಟಿಕೊಂಡಿದ್ದ ಇಲ್ಲಿನ ನಿವಾಸಿಗಳಿಗೆ ಈಗ ಬಿಬಿಎಂಪಿ ಈ ಬಿಲ್ಡಿಂಗನ್ನೇ ಅನಧಿಕೃತ ಅಂತಾ ಬಿಂಬಿಸಿದೆ. ತಾನು ಮಾಡಿರುವ ಎಡವಟ್ಟಿನಿಂದ ತಪ್ಪಿಸಿಕೊಳ್ಳಲು ಈ ನಾಟಕ ಮಾಡುತ್ತಿದೆ ಅನ್ನೋದು ಜನರ ಆಕ್ರೋಶವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *